ಕೃಷಿ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಸ್ಥಾಪಿತ ರೈತ ಪೀಠ ಪ್ರಶಸ್ತಿಯ 2ನೇ ಆವೃತ್ತಿಯ ಪ್ರಶಸ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಅಥವಾ ನಾಮ ನಿರ್ದೇಶನ ಮಾಡುವುದು ಹೇಗೆ, ಇಲ್ಲಿದೆ ವಿವರ

ಬೆಂಗಳೂರು (ನ.26) ಸಾಧಕ ರೈತರನ್ನು ಗುರುತಿಸಿ, ಸಮಾಜದಲ್ಲಿ ಅವರಿಗೆ ಸೂಕ್ತ ಮನ್ನಣೆ ಹಾಗೂ ಗೌರವ ಒದಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭಗೊಂಡ ರೈತ ಪೀಠ ಪ್ರಶಸ್ತಿ ಇದೀಗ ಎರಡನೇ ಆವೃತ್ತಿಗೆ ಕಾಲಿಟ್ಟಿದೆ. ಎಸ್ ಕೆ ಎಫ್ ಎಲಿಕ್ಸರ್ ಸಂಸ್ಥೆ ಮುಖ್ಯಸ್ಥರು ಹಾಗೂ ಖ್ಯಾತ ಕೃಷಿ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಸ್ಥಾಪಿಸಿರುವ ರೈತಪೀಠ ಪ್ರಶಸ್ತಿ 2027ರ (2ನೇ ಆವೃತ್ತಿ) ಪುರಸ್ಕಾರಕ್ಕೆ ಅರ್ಹ ಹಾಗೂ ಸಾಧಕ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿ.15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಪ್ರಶಸ್ತಿ ಮೊತ್ತ 3 ಲಕ್ಷ ರೂಪಾಯಿಗೆ ಏರಿಕೆ

ಕಳೆದ ವರ್ಷ ಒಂದು ಲಕ್ಷ ರೂ. ಮೊತ್ತದ ಒಂದು ಪ್ರಶಸ್ತಿ ನೀಡಲಾಗಿದ್ದು, ಈ ಆವೃತ್ತಿಯಲ್ಲಿ ರೂ. 3 ಲಕ್ಷ ಮೊತ್ತದ ಪ್ರಶಸ್ತಿಯನ್ನು ಮೂವರು ರೈತರಿಗೆ ನೀಡಲಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದಲೂ ಅರ್ಜಿಯನ್ನು ಆಹ್ವಾನಿಸಲಾಗುತ್ತಿದೆ. ಆಯ್ಕೆಯಾದ ಪ್ರತಿ ಸಾಧಕ ರೈತರಿಗೆ ತಲಾ ₹1,00,000 ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಣ್ಣ ಮತ್ತು ಮಧ್ಯಮ ಜಮೀನಿನಲ್ಲಿ ಸುಸ್ಥಿರ, ಸಾವಯವ, ಗೋ-ಆಧಾರಿತ ಹಾಗೂ ನೂತನ ತಂತ್ರಜ್ಞಾನಾಧಾರಿತ ಮಾದರಿ ಕೃಷಿ ನಡೆಸುತ್ತಿರುವ ರೈತರಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತ ರೈತರು ಅಥವಾ ರೈತರ ಬಗ್ಗೆ ತಿಳಿದಿರುವವರು ನಾಮ ನಿರ್ದೇಶನ ಮಾಡಬಹುದು. ಅರ್ಜಿ ನಮೂನೆಯು www.gaudhama.com ವೆಬ್ ಸೈಟ್ ನಲ್ಲಿ ಲಭ್ಯವಿದ್ದು, ಅದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

ಸಾಧಕರ ಗುರುತಿಸಿ ಎಂದು ಮನವಿ

ಪ್ರಶಸ್ತಿಯ ಆಶಯದ ಕುರಿತು ಮಾತನಾಡಿದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಅವರು, "ನಾನು ದೇಶ, ವಿದೇಶಗಳನ್ನು ತಿರುಗಿದ ಮೇಲೆ ಕಂಡುಕೊಂಡ ಸತ್ಯವೆಂದರೆ, ನಮ್ಮ ನಾಡಿನ ರೈತನಿಗೆ, ಕೃಷಿಕನಿಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ ಎಂಬುದು. ನಾವು ರೈತನೇ ದೇಶದ ಬೆನ್ನೆಲುಬು ಅನ್ನುತ್ತೇವೆ. ಆದರೆ ಅದಕ್ಕೆ ತಕ್ಕ ಗೌರವ ಕೊಡುವುದಿಲ್ಲ. ಅದರಿಂದ ಯುವ ಸಮೂಹ ಕೃಷಿಯಿಂದ ವಿಮುಖವಾಗಿದೆ. ನಾವು ರೈತರಿಗೆ ಅತೀವ ಗೌರವ ಕೊಡಬೇಕು. ಆಗ ಮುಂದಿನ ಪೀಳಿಗೆಯೂ ಕೃಷಿಯತ್ತ ಹೆಚ್ಚು ಹೆಚ್ಚು ಮನಸ್ಸು ಮಾಡುತ್ತದೆ. ಅದರಿಂದ ಮನುಕುಲಕ್ಕೆ ಒಳಿತಾಗುತ್ತದೆ. ಹಾಗಾಗಿ ನಿಮಗೆ ತಿಳಿದಿರುವ ಸಾಧಕ ರೈತರನ್ನು ನಾಮ ನಿರ್ದೇಶನ ಮಾಡಿ" ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ 200ಕ್ಕೂ ಹೆಚ್ಚು ಅಪರೂಪದ ದೇಸಿ ಭತ್ತದ ತಳಿಗಳನ್ನು ಸಂರಕ್ಷಿಸಿದ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು. ಈ ಕುರಿತ ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕಕ್ಕೆ 9164561789 ಅಥವಾ 9606429200 ಸಂಖ್ಯೆಯನ್ನು ಸಂಪರ್ಕಿಸಬಹುದು. ಅಂಚೆಯಲ್ಲಿ ಕಳುಹಿಸುವವರಿಗೆ ವಿಳಾಸ ಹೀಗಿದೆ: ಡಾ. ಜಿ. ರಾಮಕೃಷ್ಣ ಆಚಾರ್, ಅಧ್ಯಕ್ಷರು, ಸಂಜೀವಿನಿ ಗೋಧಾಮ, ರೈತಪೀಠ ರಾಷ್ಟ್ರೀಯ ಪ್ರಶಸ್ತಿ, ಮುನಿಯಾಲು, ಕಾರ್ಕಳ. ಪಿನ್- 574108