ಮೈಸೂರಿನ ಕೆ.ಆರ್.ನಗರದಲ್ಲಿ ಗಿರ್ ತಳಿಯ ಹಸುವೊಂದು ಎರಡು ತಲೆ ಮತ್ತು ಎರಡು ಬಾಲಗಳಿರುವ ಹೆಣ್ಣು ಕರುವಿಗೆ ಜನ್ಮ ನೀಡಿದೆ. ಆದರೆ, ಜನಿಸಿದ ಕೆಲವೇ ಕ್ಷಣಗಳಲ್ಲಿ ಆ ವಿಚಿತ್ರ ಕರು ಮೃತಪಟ್ಟಿದ್ದು, ಮಾಲೀಕರು ಪೂಜೆ ಸಲ್ಲಿಸಿ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.
ಕೆ.ಆರ್.ನಗರ (ಮೈಸೂರು): ಗಿರ್ ತಳಿಯ ಹಸುವೊಂದು ಎರಡು ತಲೆ, ಎರಡು ಬಾಲವಿರುವ ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ಜನಿಸಿದ ಕೆಲವೇ ಕ್ಷಣಗಳಲ್ಲಿ ಕರು ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಈ ವಿಚಿತ್ರ ಕರುವಿಗೆ ಹಸು ಜನ್ಮ ನೀಡಿದೆ. ಪಶುವೈದ್ಯಾಧಿಕಾರಿಗಳು ಹಸು ಕರುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಚಿಕಿತ್ಸೆ ನೀಡಿ ಕರುವನ್ನು ತೆಗೆದಾಗ ಎರಡು ತಲೆ, ಎರಡು ಬಾಲವನ್ನು ಕಂಡು ಆಶ್ಚರ್ಯಗೊಂಡರು. ಹಸುವಿನ ಮಾಲೀಕರು ಕರುವಿಗೆ ಪೂಜೆ ಸಲ್ಲಿಸಿ ನಂತರ ಅದರ ಅಂತಿಮ ಕಾರ್ಯ ನಡೆಸಿದರು.
ಈ ಹಿಂದೆ ಇಂಥದ್ದೇ ವಿಚಿತ್ರ ಕರು ಜನಿಸಿತ್ತು
ಇದಕ್ಕೂ ಮೊದಲು ಮಂಗಳೂರಿನ ಕಿನ್ನಿಗೋಳಿ ಪ್ರದೇಶದಲ್ಲಿ ಎರಡು ತಲೆಗಳಿರುವ ಕರುವೊಂದು ಜನನವಾಗಿತ್ತು. ಸ್ಥಳೀಯರ ಹಾಗೂ ಪಶುವೈದ್ಯರ ಗಮನ ಸೆಳೆದಿತ್ತು.
ದಾಮಸ್ ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರ ಹಸು ಕರುವಿಗೆ ಜನ್ಮ ನೀಡಿತ್ತು, ವಿಶೇಷವೆಂದರೆ ಕರುವಿನ ದೇಹ ಒಂದೇ ಆಗಿದ್ದು, ತಲೆ ಎರಡು ಇದೆ. ತಲೆ ಒಂದಕ್ಕೊಂದು ಅಂಟಿಕೊಂಡಿತ್ತು, ನಾಲ್ಕು ಕಣ್ಣುಗಳಿವೆ. ಮಧ್ಯ ಭಾಗದ ಎರಡು ಕಣ್ಣುಗಳು ಚಲನೆಯಲ್ಲಿಲ್ಲ, ಮತ್ತೆರಡು ಕಣ್ಣುಗಳು ಸರಿಯಾಗಿತ್ತು. ಈಗ ಮತ್ತೆ ಅಂತದ್ದೇ ವಿಚಿತ್ರ ಕರು ಜನಿಸಿದೆ.


