ತುಮಕೂರು ಜಿಲ್ಲೆಯ ತುರುವೇಕೆರೆಯ ಹಲವು ಗ್ರಾಮಗಳಲ್ಲಿ ರಾಷ್ಟ್ರಪಕ್ಷಿ ನವಿಲುಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ರೈತರ ಜಮೀನುಗಳಲ್ಲಿ ಕೀಟನಾಶಕ ಸೇವನೆಯಿಂದ ಅಥವಾ ಬೇರೆ ಕಾರಣಗಳಿಂದ ಸಾಯುತ್ತಿವೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಪಶು ವೈದ್ಯಾಧಿಕಾರಿಗಳು ಹಕ್ಕಿಜ್ವರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತುರುವೇಕೆರೆ (ನ.13): ತುಮಕೂರು ಜಿಲ್ಲೆಯ ತುರುವೇಕೆರೆಯ ಹಲವು ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ರಾಷ್ಟ್ರಪಕ್ಷಿ ನವಿಲುಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವ ಆಘಾತಕಾರಿ ಘಟನೆ ಕಂಡುಬಂದಿದೆ.
ಡೊಂಕಿಹಳ್ಳಿಯಲ್ಲಿ ನವಿಲುಗಳ ಸರಣಿ ಸಾವು, ಹಕ್ಕಿಜ್ವರವೇ? ಕ್ರಿಮಿನಾಶಕ ಸೇವನೆಯೇ?
ಇತ್ತೀಚೆಗೆ ತುರುವೇಕೆರೆ ತಾಲೂಕಿನ ಮಾಚೇನಹಳ್ಳಿ, ಸಾರಿಗೇಹಳ್ಳಿ, ತಾವರೇಕೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ನವಿಲುಗಳು ಸುತ್ತುಬಿದ್ದಿದ್ದು ಕಂಡುಬಂದಿತ್ತು. ಅದೇ ರೀತಿ ಮಂಗಳವಾರವೂ ಸಹ ಡೊಂಕಿಹಳ್ಳಿ, ತಾಳಕೆರೆ ಸೇರಿ ವಿವಿಧ ಗ್ರಾಮಗಳಲ್ಲಿ ಅಲ್ಲಲ್ಲಿ ಒಂದೊಂದು ನವಿಲು ಮೃತಪಟ್ಟಿರುವುದು ಪತ್ತೆಯಾಗಿದೆ. ಡೊಂಕಿಹಳ್ಳಿಯ ರೈತ ವೆಂಕಟೇಶ್ ಎಂಬುವರು ‘ತಮ್ಮ ತೋಟಕ್ಕೆ ತೆರಳಿದ್ದ ವೇಳೆ ನವಿಲೊಂದು ಮೇಯುತ್ತಿದ್ದ ವೇಳೆಯೇ ಇದ್ದಕ್ಕಿದ್ದಂತೆ ಮೃತಪಟ್ಟಿದ್ದನ್ನು ಕಣ್ಣಾರೆ ಕಂಡಿರುವುದಾಗಿ’ ಹೇಳಿದ್ದಾರೆ. ಈ ಬಗ್ಗೆ ತುರುವೇಕೆರೆ ತಾಲೂಕು ಪಶು ವೈದ್ಯಾಧಿಕಾರಿ ಡಾ.ರೇವಣ ಸಿದ್ದಯ್ಯ ಸ್ಪಷ್ಟನೆ ನೀಡಿದ್ದು, ನವಿಲುಗಳು ಹಕ್ಕಿ ಜ್ವರದಿಂದಾಗಿ ಸತ್ತಿಲ್ಲ. ಭೂಮಿಯಲ್ಲಿ ಕೃಷಿ ಪದಾರ್ಥಕ್ಕೆ ರಾಸಾಯನಿಕ ವಸ್ತುಗಳನ್ನು ಸಿಂಪಡಿಸಿದ್ದರೆ, ಅದನ್ನು ತಿಂದು ನವಿಲುಗಳು ಮೃತಪಟ್ಟಿರಬಹುದು ಎಂದಿದ್ದಾರೆ,.
ಹಾಗೆಯೇ ತಾಳಕೆರೆ ಎಂಬಲ್ಲಿಯೂ ಸಹ ನವಿಲು ಮೃತಪಟ್ಟಿರುವ ಸಂಗತಿ ತಿಳಿದುಬಂದಿದೆ. ಕೆಲವೆಡೆ ಹೀಗೆ ಸಾವನ್ನಪ್ಪುತ್ತಿರುವ ನವಿಲುಗಳ ಶವವನ್ನು ನಾಯಿಗಳು ಹಿಡಿದು ತಿನ್ನುತ್ತಿವೆ ಎಂದು ಹೇಳಲಾಗಿದೆ. ಹೀಗೆ ನವಿಲುಗಳ ಸರಣಿ ನಿಗೂಢವಾಗಿ ಸಾವು ಹಕ್ಕಿ ಜ್ವರದಿಂದ ಉಂಟಾಗುತ್ತಿದೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನವಿಲುಗಳ ಸರಣಿ ಸಾವಿಗೆ ಕಾರಣವೇನು?
ಈ ಹಿಂದೆ ಮಾಚೇನಹಳ್ಳಿ, ತಾವರೇಕೆರೆಯಲ್ಲಿ ಸತ್ತಿದ್ದ ನವಿಲುಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಹಕ್ಕಿಜ್ವರದಿಂದ ಸತ್ತಿಲ್ಲ ಎಂದು ವರದಿಯಲ್ಲಿ ತಿಳಿದು ಬಂದಿದೆ. ಹಕ್ಕಿ ಜ್ವರ ಬಂದಲ್ಲಿ ಸಾಮೂಹಿಕವಾಗಿ ಹಕ್ಕಿಗಳು ಸಾಯುತ್ತವೆ. ಅಂತಹ ಯಾವುದೇ ಪ್ರಕರಣ ವರದಿಯಾಗಿಲ್ಲ. ಹಾಗಾಗಿ ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
- ನವಿಲು: ತುರುವೇಕೆರೆ ತಾಲೂಕು ಡೊಂಕಿಹಳ್ಳಿಯಲ್ಲಿ ನವಿಲಿನ ಕಳೇಬರ
- ವಾರದಲ್ಲಿ ಹಲವು ಗ್ರಾಮಗಳಲ್ಲಿ ನವಿಲುಗಳ ಸರಣಿ ಸಾವು
- ರಾಸಾಯನಿಕದಿಂದ ನವಿಲು ಸತ್ತಿರಬಹುದು: ಪಶು ಅಧಿಕಾರಿ














