ಕೊಲೆಯಾಗಿದ್ದಾಳೆ ಎನ್ನಲಾದ ಮಂಡ್ಯದ ಮಹಿಳೆ 7 ವರ್ಷದ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕೊಲೆ ಮಾಡಿದ್ದಾನೆಂದು ಸುಳ್ಳು ಆರೋಪ ಹೊರಿಸಿ ಅಮಾಯಕ ವ್ಯಕ್ತಿಯೊಬ್ಬನನ್ನು 2.5 ವರ್ಷ ಜೈಲಿಗೆ ಕಳಿಸಲಾಗಿತ್ತು. ಪ್ರೇಮಿಯೊಂದಿಗೆ ತೆರಳಿದ್ದ ಮಹಿಳೆ, ರಾಜೇಶ್ಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದಾಳೆ.
ನಾಗಮಂಗಲ (ಮಂಡ್ಯ) ನ.13: ಕೊಲೆಯಾಗಿದ್ದಾಳೆ ಎನ್ನಲಾದ ಮಹಿಳೆ 7 ವರ್ಷ ಬಳಿಕ ಬುಧವಾರ ಪ್ರತ್ಯಕ್ಷಳಾದ ಘಟನೆ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹಿಳೆಯನ್ನು ಕೊ ಲೆ ಮಾಡಿದ್ದಾನೆಂದು ಆಕೆಯ ತಂದೆ ಸುಳ್ಳು ಪ್ರಕರಣ ದಾಖಲಿಸಿದ್ದರ ಪರಿಣಾಮ ಎರಡೂವರೆ ವರ್ಷ ಜೈಲಿನಲ್ಲಿದ್ದ ನಿರಪರಾಧಿ ವ್ಯಕ್ತಿಯೊಬ್ಬ ಜಾಮೀನು ಪಡೆದು ಹೊರಬಂದ ನಂತರ ಕೊ ಲೆಯಾಗಿದ್ದಾಳೆ ಎನ್ನಲಾದ ಮಹಿಳೆ 7 ವರ್ಷ ಬಳಿಕ ಪ್ರತ್ಯಕ್ಷಳಾಗಿದ್ದಾಳೆ. ೨೦೧೯ರಲ್ಲಿ ಪಾಂಡವಪುರದಿಂದ ಮಂಜು (35) ದಿಢೀರ್ ನಾಪತ್ತೆಯಾಗಿದ್ದ ಮಹಿಳೆ.
ಈಕೆಯ ಕೊಲೆ ಕೇಸಲ್ಲಿ 2.5 ವರ್ಷ ಜೈಲಲ್ಲಿದ್ದ ಅಮಾಯಕ
ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಎಂ.ಆರ್.ರಾಜೇಶ್ (ಕಾಳ) ಎಂಬಾತ ಮಂಜುಳನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಗೆ ತಳ್ಳಿ ಕೊ ಲೆ ಮಾಡಿದ್ದಾನೆಂದು ಆರೋಪಿಸಿ ಮಂಜು ತಂದೆ ನಾಗರಾಜು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ರಾಜೇಶನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಪ್ರೇಮಿ ಜತೆ ಓಡಿಹೋಗಿದ್ದ ಮಹಿಳೆ
ಮಂಜುನಾಥ್ ಜೊತೆ ಇಷ್ಟವಿಲ್ಲದಿದ್ದರೂ ನನಗೆ ಮದುವೆ ಮಾಡಿದ್ದರು. ನಾನು ನಾಗೇಂದ್ರ ಎಂಬಾತನನ್ನು ಪ್ರೀತಿಸುತ್ತಿದ್ದೆ. ಅವನ ಜೊತೆ ಮದುವೆಯಾಗಿ ಕೆಲ ವರ್ಷ ತಮಿಳುನಾಡಿನಲ್ಲಿದ್ದೆವು. ನಂತರ ನಾಗಮಂಗಲ ತಾಲೂಕಿನ ಮಾಯಿಗೋನಹಳ್ಳಿಗೆ ಬಂದು ವಾಸಿಸುತ್ತಿದ್ದೇವೆ. ನನ್ನ ತಂದೆ ನೀಡಿರುವ ಕೊಲೆ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ. ರಾಜೇಶನಿಂದ ನನಗೆ ಯಾವುದೇ ತೊಂದರೆ ಆಗಿಲ್ಲವೆಂದು ಮಹಿಳೆ ಮಂಜು ಹೇಳಿಕೆ ನೀಡಿದ್ದಾರೆ.














