ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ನಡೆಸುವುದನ್ನು ಜನವರಿ 2027ರವರೆಗೆ ಮುಂದೂಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಇದರಿಂದಾಗಿ ಕಳೆದ 6 ವರ್ಷಗಳಿಂದ ಪಾಲಿಕೆ ಸದಸ್ಯರಿಲ್ಲದೆ ಪರದಾಡುತ್ತಿರುವ ಬೆಂಗಳೂರು ನಾಗರಿಕರಿಗೆ ಮತ್ತೊಮ್ಮೆ ನಿರಾಶೆಯಾಗಿದೆ.
ಬೆಂಗಳೂರು (ನ.12): ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿಯಲು ಕಾಯುತ್ತಿರುವ ನಗರಾಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ನಡೆಸುವುದನ್ನು ಮತ್ತಷ್ಟು ಮುಂದೂಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ.
ಈ ಹಿಂದೆ ಡಿಸೆಂಬರ್ 31, 2026ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು ನೀಡಿತ್ತು. ಆದರೆ, ಎಸ್ಐಆರ್ (SIR) ಪ್ರಕ್ರಿಯೆ ಹಾಗೂ ಇತ್ಯಾದಿ ಕಾರಣಗಳನ್ನು ಮುಂದಿಟ್ಟುಕೊಂಡು, ಚುನಾವಣಾ ದಿನಾಂಕವನ್ನು 2027ರ ಜನವರಿ 31ರವರೆಗೆ ವಿಸ್ತರಿಸುವಂತೆ ಚುನಾವಣಾ ಆಯೋಗವು ಈಗ ಹೆಚ್ಚುವರಿಯಾಗಿ ಒಂದು ತಿಂಗಳ ಕಾಲಾವಕಾಶ ಕೋರಿದೆ.
6 ವರ್ಷಗಳಿಂದ ಇಲ್ಲ ಕಾರ್ಪೋರೇಟರ್ಗಳು:
ಬೆಂಗಳೂರು ಸ್ಥಳೀಯ ಆಡಳಿತ ಮಂಡಳಿಯ (ಬಿಬಿಎಂಪಿ) ಅಧಿಕಾರ ಅವಧಿಯು 2020ರಲ್ಲೇ ಮುಕ್ತಾಯಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಕಳೆದ 6 ವರ್ಷಗಳಿಂದ ಬೆಂಗಳೂರಿನ ಯಾವುದೇ ವಾರ್ಡ್ಗಳಿಗೂ ಕಾರ್ಪೋರೇಟರ್ಗಳು (ಪಾಲಿಕೆ ಸದಸ್ಯರು) ಇಲ್ಲದಂತಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೋ ಜನ ನಾಗರಿಕರಿಗೆ ತಮ್ಮದು ಯಾವ ವಾರ್ಡ್ ಅಥವಾ ಯಾವ ನಗರ ಪಾಲಿಕೆ ಬರುತ್ತದೆ ಎಂಬುದೇ ಗೊಂದಲಮಯವಾಗಿದೆ.
ಸಣ್ಣಪುಟ್ಟ ಕುಡಿಯುವ ನೀರು, ಚರಂಡಿ, ರಸ್ತೆ ಅಥವಾ ಕಸದ ಸಮಸ್ಯೆಗಳಿಗೂ ಈಗಿನ ವ್ಯವಸ್ಥೆಯಲ್ಲಿ ಶಾಸಕರನ್ನು ಭೇಟಿ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ, ಬೆಂಗಳೂರಿನ ಬಹುತೇಕ ಶಾಸಕರು ಸಚಿವರು ಹಾಗೂ ಪ್ರಮುಖ ಹುದ್ದೆಗಳಲ್ಲಿರುವುದರಿಂದ ಅವರನ್ನು ನೇರವಾಗಿ ಭೇಟಿ ಮಾಡುವುದೇ ಕಷ್ಟಕರವಾಗಿದೆ. ಇನ್ನುಳಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ಹೊಸ ನಗರ ಪಾಲಿಕೆಗಳ ಅಧಿಕಾರಿಗಳೇ ಸರ್ವಾಧಿಕಾರಿಗಳಂತೆ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳಿಲ್ಲದೆ ಬೆಂಗಳೂರಿನ ಅಭಿವೃದ್ಧಿ ಹಳಿತಪ್ಪಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿವೆ.
12 ಕಾರಣಗಳನ್ನು ಕೊಟ್ಟ ಚುನಾವಣಾ ಆಯೋಗ
ಹಳೇ ಮತದಾರರ ಪಟ್ಟಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಅನುಮತಿ ಕೇಳಿದ ರಾಜ್ಯ ಚುನಾವಣಾ ಆಯೋಗ. ಕರ್ನಾಟಕ ರಾಜ್ಯದ ಎಲ್ಲಾ ಪಂಚಾಯತ್ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ, 01.10.2025 ರಂದು ಅಸ್ತಿತ್ವದಲ್ಲಿದ್ದ ವಿಧಾನಸಭಾ ಮತದಾರರ ಪಟ್ಟಿಗಳ ಆಧಾರದ ಮೇಲೆ ಚುನಾವಣೆಗಳನ್ನು ನಡೆಸಲು ಅನುಮತಿ ನೀಡಬೇಕು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಕೂಡ ಕರ್ನಾಟಕ ರಾಜ್ಯ ಚುನಾವಣಾ ಆಯೋಗವು 18.04.2026 ರಂದು ಸಿದ್ಧಪಡಿಸಿ ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಗಳನ್ನು ಬಳಸಿಕೊಂಡು ಚುನಾವಣೆಗಳನ್ನು ನಡೆಸಲು ಅನುಮತಿ ನೀಡಬೇಕು. ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು 31.01.2027 ರವರೆಗೆ ಕಾಲಾವಕಾಶವನ್ನು ವಿಸ್ತರಿಸಿ ಅನುಮತಿ ನೀಡಬೇಕು.
ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಅನುಕೂಲವಾಗುವಂತೆ 01.01.2025 ರ ಸ್ಥಿತಿಗತಿಗನುಗುಣವಾಗಿರುವ ಮತದಾರರ ಪಟ್ಟಿಯ ದತ್ತಾಂಶವನ್ನು (database) ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ. ಚುನಾವಣೆ ಒಂದು ತಿಂಗಳು ಮುಂದೂಡಲು 12 ಕಾರಣಗಳನ್ನು ನೀಡಿದೆ.
ಚುನಾವಣೆ ಮುಂದೂಡಿಕೆಯ ಸುದೀರ್ಘ ಇತಿಹಾಸ:
2020ರಲ್ಲಿ ಬಿಬಿಎಂಪಿ ಆಡಳಿತಾವಧಿ ಮುಕ್ತಾಯಗೊಂಡಿದೆ. ಆಗ ಕೋವಿಡ್ ಹಾಗೂ ವಾರ್ಡ್ ವಿಂಗಡಣೆ ನೆಪದಲ್ಲಿ ಚುನಾವಣೆಯನ್ನು ಬಿಜೆಪಿ ಸರ್ಕಾರ ಮುಂದೂಡಿಕೆ ಮಾಡಿತ್ತು. ಬಿಜೆಪಿಯ ಆಡಳಿತಾವಧಿಯಲ್ಲಿ ಚುನಾವಣೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷಗಳು ಸಮೀಪಿಸುತ್ತಿದ್ದರೂ, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸದೆ ಒಂದಲ್ಲ ಒಂದು ಕಾರಣ ನೀಡಿ ಮುಂದೂಡುತ್ತಲೇ ಬರಲಾಗಿದೆ.
ಇದರ ನಡುವೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಸ್ಥಳೀಯ ಆಡಳಿತ ವಿಕೇಂದ್ರೀಕರಣ ಉದ್ದೇಶದಿಂದ ಬಿಬಿಎಂಪಿಯನ್ನು ವಿಸರ್ಜಿಸಿ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ಹಾಗೂ 5 ಹೊಸ ನಗರ ಪಾಲಿಕೆಗಳನ್ನು ರಚಿಸಲಾಯಿತು. ಆದರೂ ಚುನಾವಣೆ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ.
ಸದ್ಯ ಸುಪ್ರೀಂ ಕೋರ್ಟ್ ಮುಂದೆ ಮತ್ತೊಮ್ಮೆ ಅರ್ಜಿ ಸಲ್ಲಿಕೆಯಾಗಿರುವುದರಿಂದ, ನ್ಯಾಯಾಲಯದ ಆದೇಶಕ್ಕೆ ಎದುರು ನೋಡಬೇಕಿದೆ. ಒಂದು ವೇಳೆ ಅರ್ಜಿ ಸಲ್ಲಿಕೆಯಲ್ಲಿ ಸಕಾರಣಗಳಿದ್ದು, ಚುನಾವಣೆ ಮುಂದೂಡಿಕೆ ಮಾಡಿದಲ್ಲಿ ಬೆಂಗಳೂರು ಮಹಾನಗರದ ಜನಪ್ರತಿನಿಧಿಗಳ ಆಯ್ಕೆಗಾಗಿ 2027ರ ಜನವರಿಯವರೆಗೆ ಕಾಯುವುದು ಅನಿವಾರ್ಯವಾಗಿದೆ.














