- Home
- Karnataka Districts
- ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ, ಬೀದಿ ನಾಯಿಗಳ ಪಾಲಾದ ಮೃತದೇಹ! ಗ್ರಾಮಕ್ಕೆ ಸೋಂಕಿನ ಭೀತಿ!
ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ, ಬೀದಿ ನಾಯಿಗಳ ಪಾಲಾದ ಮೃತದೇಹ! ಗ್ರಾಮಕ್ಕೆ ಸೋಂಕಿನ ಭೀತಿ!
ತುಮಕೂರು ಜಿಲ್ಲೆಯ ಗೂಳರಿವೆ ಗ್ರಾಮದಲ್ಲಿ ರಾಷ್ಟ್ರಪಕ್ಷಿ ನವಿಲುಗಳು ಸಾಯುತ್ತಿವೆ. ಮತ್ತೆರಡು ನವಿಲುಗಳು ಬಲಿಯಾಗಿದ್ದು, ಅವುಗಳ ಮೃತದೇಹಗಳನ್ನು ಬೀದಿ ನಾಯಿಗಳು ತಿನ್ನುತ್ತಿರುವುದರಿಂದ ಸೋಂಕು ಹರಡುವ ಭೀತಿ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ.

ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ
ಕಲ್ಪತರು ನಾಡು ತುಮಕೂರಿನಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ ಮುಂದುವರಿದಿದೆ. ಹಕ್ಕಿಜ್ವರದ (Bird Flu) ಭೀತಿ ಜಿಲ್ಲೆಯನ್ನು ಆವರಿಸಿದ್ದು, ಇದೀಗ ಮತ್ತೆರಡು ನವಿಲುಗಳು ಬಲಿಯಾಗಿವೆ. ಅರಣ್ಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯ ನಿರ್ಲಕ್ಷ್ಯದ ನಡುವೆ ನವಿಲುಗಳ ಮೃತದೇಹಗಳು ಬೀದಿ ನಾಯಿಗಳ ಪಾಲಾಗುತ್ತಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಘಟನೆಯ ವಿವರ:
ತುಮಕೂರು ಜಿಲ್ಲೆಯ ಗೂಳರಿವೆ ಗ್ರಾಮದ ಹೊರವಲಯದ ‘ಸುಣ್ಣಕಲ್ಲು ಕಟ್ಟೆ’ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಹಕ್ಕಿಜ್ವರದಿಂದಾಗಿ ಈಗಾಗಲೇ ಹಲವಾರು ನವಿಲುಗಳು ಸಾವನ್ನಪ್ಪಿದ್ದವು. ಇದೀಗ ಅದೇ ಜಾಗದಲ್ಲಿ ಮತ್ತೆರಡು ನವಿಲುಗಳು ಅನಾಥವಾಗಿ ಸತ್ತು ಬಿದ್ದಿವೆ.
ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ರಾಷ್ಟ್ರಪಕ್ಷಿಯ ಮೃತದೇಹಗಳಿಗೆ ಗೌರವ ನೀಡುವ ಬದಲು, ಅವುಗಳನ್ನು ಬೀದಿ ನಾಯಿಗಳು ಕಿತ್ತು ತಿನ್ನುತ್ತಿವೆ. ನವಿಲುಗಳ ಮಾಂಸಕ್ಕೆ ನಾಯಿಗಳು ಮುಗಿಬಿದ್ದಿರುವ ದೃಶ್ಯ ಕಂಡು ಗ್ರಾಮಸ್ಥರು ಮರುಗಿದ್ದಾರೆ.
ಗ್ರಾಮಸ್ಥರಲ್ಲಿ ಹರಡಿದ ಸೋಂಕಿನ ಭೀತಿ:
ಇತ್ತೀಚೆಗಷ್ಟೇ ಈ ಭಾಗದಲ್ಲಿ ನವಿಲುಗಳು ಸಾಯುತ್ತಿರುವುದು ಹಕ್ಕಿಜ್ವರದಿಂದಲೇ ಎಂದು ಪ್ರಯೋಗಾಲಯದ ವರದಿ ದೃಢಪಡಿಸಿತ್ತು. ಹೀಗಿದ್ದರೂ ಸಹ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ನಾಯಿಗಳಿಂದ ಸೋಂಕು ಹರಡುವ ಸಾಧ್ಯತೆ
ಸತ್ತ ನವಿಲುಗಳನ್ನು ನಾಯಿಗಳು ತಿನ್ನುತ್ತಿರುವುದರಿಂದ, ಈ ಸೋಂಕು ನಾಯಿಗಳ ಮೂಲಕ ಗ್ರಾಮದ ಇತರೆ ಪ್ರಾಣಿಗಳಿಗೆ ಹಾಗೂ ಮನುಷ್ಯರಿಗೂ ಹರಡುವ ಸಾಧ್ಯತೆ ದಟ್ಟವಾಗಿದೆ. ಈ ಸೋಂಕಿನ ಭೀತಿಯಿಂದ ಗೂಳರಿವೆ ಗ್ರಾಮದ ಜನರು ನಿದ್ದೆಯಿಲ್ಲದಂತಾಗಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
ಹಕ್ಕಿಜ್ವರ ಎಂದು ವರದಿ ಬಂದಿದ್ದರೂ ಅಧಿಕಾರಿಗಳು ಯಾಕೆ ಎಚ್ಚೆತ್ತುಕೊಳ್ಳುತ್ತಿಲ್ಲ? ಎಂಬುದು ಗ್ರಾಮಸ್ಥರ ಪ್ರಶ್ನೆ. ಸತ್ತ ಪಕ್ಷಿಗಳ ಮೃತದೇಹಗಳನ್ನು ಶಾಸ್ತ್ರೋಕ್ತವಾಗಿ ವಿಲೇವಾರಿ ಮಾಡಬೇಕಾದ ಅರಣ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ಮೌನಕ್ಕೆ ಶರಣಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ವಿಲೇವಾರಿ ಮಾಡಬೇಕು ಮತ್ತು ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪರಿಸರ ಪ್ರೇಮಿಗಳು ಕಳವಳ
ರಾಷ್ಟ್ರಪಕ್ಷಿಗಳ ಈ ಸಾವು ಸರಣಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಪರಿಸರ ಪ್ರೇಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
