Asianet Suvarna News Asianet Suvarna News

ಬಿಎ​ಸ್‌ವೈ ನೆತ್ತರು ಜಿಲ್ಲೆಗೆ ನೀರಾ​ವ​ರಿ ರೂಪ​ದಲ್ಲಿ ಪರಿ​ವ​ರ್ತ​ನೆ: ಸಂಸದ ರಾಘ​ವೇಂದ್ರ

ಯಡಿಯೂರಪ್ಪ ಅವರು ಪುರಸಭಾಧ್ಯಕ್ಷರಾದ ಅವಧಿಯಲ್ಲಿ ತಾಲೂಕು ಬಿಟ್ಟು ತೆರಳುವಂತೆ ಮಾರಣಾಂತಿಕ ಹಲ್ಲೆಯ ಬಹುದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿದ್ದು, ಆ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ಯಡಿಯೂರಪ್ಪನವರ ರಕ್ತ ಇಂದು ತಾಲೂಕು, ಜಿಲ್ಲೆಗೆ ನೀರಾವರಿ ರೂಪದಲ್ಲಿ ಪರಿವರ್ತನೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿ​ದರು. 

mp by raghavendra talks about bs yediyurappa at shivamogga district gvd
Author
Bangalore, First Published Aug 17, 2022, 11:29 PM IST

ಶಿಕಾರಿಪುರ (ಆ.17): ಯಡಿಯೂರಪ್ಪ ಅವರು ಪುರಸಭಾಧ್ಯಕ್ಷರಾದ ಅವಧಿಯಲ್ಲಿ ತಾಲೂಕು ಬಿಟ್ಟು ತೆರಳುವಂತೆ ಮಾರಣಾಂತಿಕ ಹಲ್ಲೆಯ ಬಹುದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿದ್ದು, ಆ ಸಂದರ್ಭದಲ್ಲಿ ನೆಲಕ್ಕೆ ಬಿದ್ದ ಯಡಿಯೂರಪ್ಪನವರ ರಕ್ತ ಇಂದು ತಾಲೂಕು, ಜಿಲ್ಲೆಗೆ ನೀರಾವರಿ ರೂಪದಲ್ಲಿ ಪರಿವರ್ತನೆಯಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿ​ದರು. ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ 49ನೇ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ‘ನಿಮ್ಮ ಸಾಧನೆಗೆ ನಮ್ಮ ಗೌರವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೋರಾಟದ ಮೂಲಕ ಪಟ್ಟಣ, ತಾಲೂಕಿನಾದ್ಯಂತ ಪ್ರಸಿದ್ಧವಾಗಿ ಯಡಿ​ಯೂ​ರಪ್ಪ ಅವ​ರ ಜನಪ್ರಿಯತೆ ಉತ್ತುಂಗಕ್ಕೇರುತ್ತಿದ್ದ ಕಾಲದಲ್ಲಿ ಮಾರಣಾಂತಿಕ ಹಲ್ಲೆ ನಡೆ​ಯಿತು. ಆ ಸಂದರ್ಭದಲ್ಲಿ ಯಂಕಟಪ್ಪ ಅವರು ಕ್ಷೇತ್ರದ ಶಾಸಕರಾಗಿ ರಾಜ್ಯದ ಬಂದೀಖಾನೆ ಸಚಿವರಾಗಿದ್ದರು. ಜನಪರ ಹೋರಾಟಗಳ ಪ್ರತಿಫಲವಾಗಿ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾದರು. ಇಂದು ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಮೂಲಕ ಗುರುತಿಸಿಕೊಂಡಿದೆ. ಯಡಿಯೂರಪ್ಪನವರ ಆಶೀರ್ವಾದಿಂದ ಅಭಿವೃದ್ಧಿಯನ್ನು ಜಿಲ್ಲೆ, ತಾಲೂಕಿಗೆ ತಲುಪಿಸಲಾಗಿದೆ. ಈ ದಿಸೆಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸಿದ್ದಾರೆ. ಜನತೆಯ ನಂಬಿಕೆ, ಪ್ರೀತಿ, ವಿಶ್ವಾಸ ಉಳಿಸಿಕೊಂಡು ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯಕ್ಕೆ ಕೊಂಡಿ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

ಪೊಲೀಸ್‌ ಸರ್ಪಗಾವ​ಲಲ್ಲಿ ಶಿವಮೊಗ್ಗ ನಗ​ರ: ಅಂಗಡಿ ಮುಂಗಟ್ಟು ಬಂದ್‌

ಜಿಲ್ಲೆ ಹಾಗೂ ತಾಲೂಕಿನ ಅಭಿವೃದ್ಧಿಯಲ್ಲಿ ಸಹೋದರ ಬಿ.ವೈ.ವಿಜಯೇಂದ್ರ ಪಾತ್ರ ಮಹತ್ವವಾಗಿದೆ. ಅಣ್ಣನ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ದೆಹಲಿಯಲ್ಲಿ ಹಲವರು ವಿಜಯೇಂದ್ರ ಅವ​ರನ್ನು ಅಣ್ಣ ಎಂದು ಭಾವಿಸಿದ್ದಾರೆ. ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸದಲ್ಲಿರುವ ಅವರು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು 16 ಶಾಸಕರು ಕಾಂಗ್ರೆಸ್‌ ತ್ಯಜಿಸಿ ಬಂದರು. ಆಗ ಅವರ ಪುನರಾಯ್ಕೆ ಜವಾಬ್ದಾರಿ ವಹಿಸಿಕೊಂಡು ಸರ್ಕಾರದ ಸುಭದ್ರತೆಗೆ ಶ್ರಮಿಸಿದ ವಿಜಯೇಂದ್ರ ಅವರಿಗೆ ಕ್ಷೇತ್ರದ ಎಲ್ಲ ಜನತೆಯ ಆಶೀರ್ವಾದ ಅಗತ್ಯವಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಸಹೋದರ ರಾಘವೇಂದ್ರ ಜನಾನುರಾಗಿ ಸಂಸದರಾಗಿದ್ದು, ಜಿಲ್ಲೆಯನ್ನು ನಂದನವನದ ರೀತಿಯಲ್ಲಿ ಅಭಿವೃದ್ಧಿಪಡಿಸುವ ಬಹುಉತ್ಕೃಷ್ಟಕನಸು ಹೊಂದಿದ್ದಾರೆ. ಲೋಕಸಭೆಯ ಯಶಸ್ವಿ 5 ಸಂಸದರಲ್ಲಿ ಅಗ್ರಗಣ್ಯರಾಗಿ ಗುರುತಿಸಿಕೊಂಡಿರುವ ರಾಘವೇಂದ್ರ ಅವ​ರು ‘ಸೋಲಿಲ್ಲದ ಸರದಾರ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಂಸದರ ಅಭಿವೃದ್ಧಿ ಜನ ಒಪ್ಪಿದ್ದಾರೆ. ರಾಘಣ್ಣನಾಗಿ ಎಲ್ಲ ಜಾತಿ- ವರ್ಗ, ಸಮಾಜಗಳ ಪ್ರೀತಿ ಗಳಿಸಿದ್ದಾರೆ. ಇದರಿಂದ ಯಡಿಯೂರಪ್ಪ ಅವರಿಗೆ ಸಂತಸವಾಗಿದೆ ಎಂದರು.

ರಾಜಕಾರಣದಲ್ಲಿ ಯಡಿಯೂರಪ್ಪ ಅವರ ಅಗಾಧ ಬೆಳವಣಿಗೆಯಲ್ಲಿ ತಾಯಿ ಮೈತ್ರಾದೇವಿ ಪಾತ್ರ ಪ್ರಮುಖವಾಗಿದೆ. ತಂದೆ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಜಾತಿ, ಧರ್ಮ ಭೇದವಿಲ್ಲದೇ ಮನೆಗೆ ಬರುವ ಪ್ರತಿಯೊಬ್ಬರಿಗೆ ಊಟ- ತಿಂಡಿ ಮೂಲಕ ಉಪಚರಿಸುತ್ತಿದ್ದರು. ಅವರು ಅಂದು ಹಚ್ಚಿದ ಒಲೆ ಇಂದಿಗೂ ಆರದ ರೀತಿ ಅತ್ತಿಗೆ ನೋಡಿಕೊಳ್ಳುತ್ತಿರುವುದು ಕುಟುಂಬದ ಹೆಮ್ಮೆ. ಸಾಧನೆಯಿಲ್ಲದ ಸಾವಿನಿಂದ ಸಾವಿಗೆ ಅಪಮಾನ. ಆದರ್ಶವಿಲ್ಲದ ಬದುಕಿನಿಂದ ಬದುಕಿಗೆ ಅಪಮಾನ. ಈ ದಿಸೆಯಲ್ಲಿ ಸಂಸದ ರಾಘವೇಂದ್ರ ಅವರು ಯಡಿಯೂರಪ್ಪ ಅವರ ಆದರ್ಶದಲ್ಲಿ ಬದುಕನ್ನು ರೂಪಿಸಿಕೊಂಡು ಬೆಳೆದಿದ್ದಾರೆ ಎಂದು ಪ್ರಶಂಸಿಸಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಶಿವಯೋಗಾಶ್ರಮದ ಡಾ.ಸಿದ್ಧಲಿಂಗ ಮಹಾಸ್ವಾಮೀಜಿ ಆಶೀರ್ವದಿಸಿ, ವ್ಯಕ್ತಿ ಎಷ್ಟುವರ್ಷ ಬದುಕಿದ ಎಂಬುದು ಮುಖ್ಯವಲ್ಲ. ಬದುಕಿದಾಗ ಎಷ್ಟುಜನರಿಗೆ ಉಪಕಾರ, ಉಪಯೋಗವಾದ ಎಂಬುದು ಮುಖ್ಯ. ಬದುಕು ಅಮೂಲ್ಯವಾಗಿದೆ. ಬದುಕು ಸಾರ್ಥಕವಾಗಿ ಮೌಲ್ಯಾಧಾರಿತವಾಗಲು ಜನತೆ ನೆನಪಿಸಿಕೊಳ್ಳುವ ರೀತಿಯಲ್ಲಿ ಬದುಕಬೇಕಾಗಿದೆ. ಈ ದಿಸೆಯಲ್ಲಿ ರಾಘವೇಂದ್ರ ರೈಲ್ವೆ, ನೀರಾವರಿ, ರಸ್ತೆ, ವಿಮಾನಯಾನ ಸಹಿತ ಹಲವು ಜನಪ್ರಿಯ ಕಾರ್ಯದಿಂದ ಪ್ರಸಿದ್ಧರಾಗಿದ್ದಾರೆ. ಅವರು ಕೇಂದ್ರ ಸಚಿವರಾದರೆ ಸಾಲದು, ಅದಕ್ಕಿಂತ ಮಿಗಿಲಾದ ಹುದ್ದೆ ದೊರೆಯಬೇಕು ಎಂದು ಹಾರೈಸಿದರು. ಬಿ.ವೈ.ವಿಜಯೇಂದ್ರ ಅವರನ್ನು ಕ್ಷೇತ್ರದ ಜನತೆ ಆಶೀರ್ವದಿಸಿ ರಾಜ್ಯದ ಉನ್ನತ ಸ್ಥಾನಕ್ಕೆ ತಲುಪಿಸುವಂತೆ ತಿಳಿಸಿದರು.

ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್‌ ಬೆಂಬಲ, ಎಚ್ಚರಿಕೆ ನೀಡಿದ ಈಶ್ವರಪ್ಪ

ಕಾರ್ಯಕ್ರಮದಲ್ಲಿ ನಿವೃತ್ತ ಯೋಧರು, ಪೌರಕಾರ್ಮಿಕರು, ಆಟೋ ಚಾಲಕರು, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ವಿಪ ಸದಸ್ಯ ರುದ್ರೇಗೌಡ, ಶಾಸಕ ಅಶೋಕ ನಾಯ್ಕ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ, ಪುರಸಭಾಧ್ಯಕ್ಷೆ ರೇಖಾಬಾಯಿ, ಎಸಿ ಪಲ್ಲವಿ, ಗಾಯತ್ರಿದೇವಿ, ಬಿ.ಡಿ. ಭೂಕಾಂತ್‌, ವಸಂತಗೌಡ ಸಹಿತ ಜಡೆ ಮಠ, ತೊಗರ್ಸಿ ಮಠ, ಹಾರನಹಳ್ಳಿ ಮಠ, ಚೌಕಿ ಮಠ, ವಿರಕ್ತ ಮಠ, ತಿಪ್ಪಾಯಿಕೊಪ್ಪ ಸಹಿತ ವಿವಿಧ ಮಠದ ಮತ್ತಿತರ ಶ್ರೀಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಸಂಸದ ರಾಘವೇಂದ್ರ ಪತ್ನಿ ತೇಜಸ್ವಿನಿ, ಪುತ್ರ ಸುಭಾಷ್‌, ಭಗತ್‌, ನಕುಲ್‌ ಜತೆಯಾಗಿ ಕ್ಷೇತ್ರದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನ, ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ತೆರಳಿ ದರ್ಶನ, ಆಶೀರ್ವಾದ ಪಡೆದರು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Follow Us:
Download App:
  • android
  • ios