Asianet Suvarna News Asianet Suvarna News

ಪೊಲೀಸ್‌ ಸರ್ಪಗಾವ​ಲಲ್ಲಿ ಶಿವಮೊಗ್ಗ ನಗ​ರ: ಅಂಗಡಿ ಮುಂಗಟ್ಟು ಬಂದ್‌

  • ಶಿವಮೊಗ್ಗ ನಗರಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ 
  • ಚೂರಿ ಇರಿತ ಪ್ರಕರಣ ಪ್ರಮುಖ ಆರೋಪಿ ಕಾಲಿಗೆ ಗುಂಡು-ಬಂಧನ
  • - ಶಿವಮೊಗ್ಗಕ್ಕೆ ಆಗಮಿಸಿ ಮೊಕ್ಕಾಂ ಹೂಡಿರುವ ಎಡಿಜಿಪಿ ಅಲೋಕ್‌ಕುಮಾರ್‌: ಗಾಯಾಳು ಆರೋಗ್ಯ ವಿಚಾ​ರಣೆ

 

Shimoga city in police vigil shops closed hindu muslim row  savarkar photo rav
Author
Bengaluru, First Published Aug 17, 2022, 4:53 AM IST

ಶಿವಮೊಗ್ಗ (ಆ.17) ನಗರದ ಅಮೀರ್‌ ಅಹ​ಮದ್‌ ವೃತ್ತದಲ್ಲಿ ವೀರ ಸಾವರ್ಕರ್‌ ಫ್ಲೆಕ್ಸ್‌ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಗಲಭೆಯ ಬಳಿಕ ಮಂಗಳವಾರ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಸೋಮವಾರ ಸಂಜೆಯ ಬಳಿಕ ಯಾವುದೇ ರೀತಿಯ ಗಲಭೆ ಉಂಟಾಗಿಲ್ಲ. ಇದರ ನಡುವೆಯೇ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಸಂಪೂರ್ಣ ಪೊಲೀಸ್‌ ಪಡೆಯನ್ನು ಸರ್ವಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಶಿವಮೊಗ್ಗ-ಭದ್ರಾವತಿ ಅವಳಿ ನಗರದಲ್ಲಿ ನಿಷೇಧಾಜ್ಞೆ ಮುಂದುವರೆದಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಮಂಗಳವಾರ ಪೊಲೀಸ್‌ ಪಥ ಸಂಚಲನ ನಡೆಸಲಾಯಿತು.ಭದ್ರಾವತಿಯಲ್ಲಿ ವ್ಯಕ್ತಿಯೋರ್ವರಿಗೆ ಅನ್ಯ ಕೋಮಿನ ವ್ಯಕ್ತಿ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಇದಕ್ಕೂ ಶಿವಮೊಗ್ಗದ ಘಟನೆಗೂ ಸಂಬಂಧ ಇದೆಯೇ ಇಲ್ಲವೇ ಎಂಬುದನ್ನು ಪೊಲೀಸ್‌ ತನಿಖೆಯಿಂದ ಇನ್ನಷ್ಟೇ ಹೊರಬರಬೇಕಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಒಂದು ದಿನದ ಮಟ್ಟಿಗೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಬೆಳಗ್ಗೆ 10 ಗಂಟೆ ಬಳಿಕ ನಗರದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಯಿತು. ಜನಸಂಚಾರಕ್ಕೆ ಯಾವುದೇ ಅಡ್ಡಿ ಇರದಿದ್ದರೂ ಸಹಜವಾಗಿಯೇ ವಾಹನ ಸಂಚಾರ ವಿರಳವಾಗಿತ್ತು. ನಗರ ಬಸ್‌ ಸಂಚಾರ ನಿಲ್ಲಿಸಲಾಗಿತ್ತು. ಮದ್ಯ ಮಾರಾಟ ನಿಷೇಧಿಸಲಾಗಿದೆ. ನಿಷೇಧಾಜ್ಞೆ ಜಾರಿ ಹಿನ್ನೆಲೆ ನಗರದಲ್ಲಿ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ನಗರದ ಪ್ರಮುಖ ವಹಿವಾಟು ಕೇಂದ್ರಗಳಾದ ಗಾಂಧಿ ಬಜಾರ್‌, ಬಿ.ಎಚ್‌. ರಸ್ತೆ, ನೆಹರು ರಸ್ತೆ, ದುರ್ಗಿಗುಡಿ ಸೇರಿದಂತೆ ಬಹುತೇಕ ಭಾಗದಲ್ಲಿ ಸಂಪೂರ್ಣ ಬಂದ್‌ ಮಾಡಲಾಗಿತ್ತು.

ಬಸ್‌ ಹಾಗೂ ವಾಹನಗಳ ಸಂಚಾರ ವಿರಳವಾಗಿದ್ದು, ಹೊರಗಿನಿಂದ ನಗರಕ್ಕೆ ಆಗಮಿಸುವ ವಾಹನಗಳ ತಪಾಸಣೆ ನಡೆಸಲಾಯಿತು. ಅಮೀರ್‌ ಅಹಮ್ಮದ್‌ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿಬಜಾರ್‌ನಲ್ಲಿ ಪೊಲೀಸ್‌ ಸರ್ಪಗಾವಲು ಇತ್ತು. ಎಡಿಜಿಪಿ ಅಲೋಕ್‌ ಕುಮಾರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

ಅಹಿತಕರ ಘಟನೆಗಳಿಗೆ ಕಿವಿಗೊಡದಿರಿ:

ಶಿವಮೊಗ್ಗ(Shivamogga)ಕ್ಕೆ ಆಗಮಿಸಿ ಮೊಕ್ಕಾಂ ಹೂಡಿರುವ ಎಡಿಜಿಪಿ ಅಲೋಕ್‌ಕುಮಾರ್‌(ADGP Alok Kumar) ವಿವಿಧ ಪ್ರದೇಶಗಳಿಗೆ ಭೇಟಿ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಸೋಮವಾರ ಇರಿತಕ್ಕೊಳಗಾಗಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ರಿರುವ ಪ್ರೇಮ್‌ಸಿಂಗ್‌ನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಿತಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಸೋಮವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಜಬೀವುಲ್ಲಾನನ್ನು ಬಂಧಿಸುವಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಹಿನ್ನಲೆ ವಿನೋಬನಗರ ಠಾಣೆ ಪಿಎಸ್‌ಐ ಮಂಜುನಾಥ್‌ ಫೈರಿಂಗ್‌ ಮಾಡಿ ಬಂಧಿಸಿ ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದರು.

ಪೊಲೀಸ್‌ ಬಲ ನಿಯೋಜನೆ: ಪೂರ್ವ ವಲಯ ಐಜಿಪಿ ತ್ಯಾಗರಾಜ್‌, ಹಿಂದೆ ಇಲ್ಲೇ ಅಡಿಷನಲ್‌ ಎಸ್‌ಪಿ ಆಗಿ ಕಾರ್ಯನಿರ್ವಹಿಸಿದ ಎಚ್‌.ಟಿ.ಶೇಖರ್‌, ಹಿರಿಯ ಅಧಿಕಾರಿಗಳ ತಂಡವೇ ಇಡೀ ನಗರದ ಉಸ್ತುವಾರಿ ಕೈಗೊಂಡಿದೆ. 8 ಕೆಎಸ್‌ಆರ್‌ಪಿ, 10 ಡಿಎಆರ್‌, 1 ಆರ್‌.ಎ.ಎಫ್‌ ತುಕಡಿಯನ್ನು ನಿಯೋಜಿಸಲಾಗಿದ್ದು, ಇನ್ನೂ ಹೆಚ್ಚಿನ ಭದ್ರತೆಗೆ ಹೊರ ಜಿಲ್ಲೆಯಿಂದ ಪೊಲೀಸ್‌ ಸಿಬ್ಬಂದಿ ಕರೆಸಲಾಗುತ್ತಿದೆ. ಈಗಾಗಲೇ ನಗರದ ಸೂಕ್ಷ ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿ ನಾಗರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು. ಶಿವಮೊಗ್ಗ ಬುದ್ಧಿವಂತರ ಜಿಲ್ಲೆ. ಹಲವಾರು ಸಾಹಿತಿಗಳನ್ನು ಮತ್ತು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದ್ದು ಸಮಾಜವಾದದ ಗೋಪಾಲಗೌಡರ ತವರೂರಾಗಿದೆ. ಇಲ್ಲಿಯ ಜನ ಯಾವುದೇ ಅಹಿತಕರ ಘಟನೆಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಬೇಕು ಎಂದು ತಿಳಿಸಿದರು. ಸೋಮವಾರ ಚೂರಿ ಇರಿತಕ್ಕೆ ಒಳಗಾದ ಪ್ರೇಮ್‌ ಸಿಂಗ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತಿದ್ದು, ಅವರ ಸ್ಥಿತಿ ಸುಧಾರಿಸಿದೆ.

- - -ಹಿಂದು ಸಂಘಟನೆ ಮುಖಂಡರೊಂದಿಗೆ ಅಲೋಕ್‌ಕುಮಾರ್‌ ಸಭೆ

ಶಿವ​ಮೊಗ್ಗ ನಗರದ ವಾತಾವರಣ ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿದೆ. ಗಣಪತಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿ ಸಮಿತಿ ಪ್ರಮುಖರೊಂದಿಗೆ ಎಡಿಜಿಪಿ ಅಲೋಕ್‌ಕುಮಾರ್‌ ಮಂಗಳವಾರ ಚರ್ಚೆ ನಡೆಸಿದರು. ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡುವ ಕೋಟೆ ಭೀಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಸ್ಥಳ ಪರಿಶೀಲನೆ ನಡೆಸಿ ಪ್ರಮುಖರೊಂದಿಗೆ ಮಾಹಿತಿ ಪಡೆದರು. ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲರೂ ಸೇರಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಮನವಿ ಮಾಡಿದರು.

ಪೊಲೀಸರು ಎಲ್ಲ ರೀತಿಯ ಸಹಕಾರ ನೀಡುತ್ತಾರೆ. ಸಾರ್ವಜನಿಕರು ಮತ್ತು ಸಮಿತಿಯವರು ಕೂಡ ಪೊಲೀಸರಿಗೆ ಸಹಕಾರ ನೀಡಬೇಕು. ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುವವರ ಮೇಲೆ ಪೊಲೀಸ್‌ ಶಿಸ್ತು ಕ್ರಮ ಕೈಗೊಳ್ಳಲಿದೆ. ಈಗಾಗಲೇ ಭದ್ರತೆ ಹೆಚ್ಚಿಸಲಾಗಿದೆ. ಯಾರೋ ಕೆಲವು ಕಿಡಿಗೇಡಿಗಳಿಂದ ಇಡೀ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗವಾಗುತ್ತದೆ. ಈ ನಿಟ್ಟಿನಲ್ಲಿ ಎರಡೂ ಸಮುದಾಯದವರು ಅಂತಹ ಕಿಡಿಗೇಡಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಚಾಕು ಇರಿತ ಪ್ರಕರಣ ನ್ವಾಲರ ಬಂಧನ:  ಶಿವಮೊಗ್ಗ ನಗರದಲ್ಲಿ ಸಾವರ್ಕರ್‌ ಫ್ಲೆಕ್ಸ್‌ ಗಲಾಟೆ ನಂತರ ಪ್ರೇಮ್‌ ಸಿಂಗ್‌ ಎಂಬ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ಜಬೀವುಲ್ಲಾನನ್ನು ಬಂಧಿಸುವ ವೇಳೆ ಪೊಲೀಸರು ಫೈರಿಂಗ್‌ ನಡೆಸಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಭದ್ರಾವತಿ ಪ್ರಕರಣಕ್ಕೆ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಿದ್ದು, ಒಟ್ಟು ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.

 

Shivamogga Assault Case: ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್‌ ಬೆಂಬಲ, ಎಚ್ಚರಿಕೆ ನೀಡಿದ ಈಶ್ವರಪ್ಪ

ನಗರದ ತೀರ್ಥಹಳ್ಳಿ ರಸ್ತೆಯಲ್ಲಿ ಫಲಖ್‌ ಪ್ಯಾಲೇಸ್‌ ಬಳಿ ಆರೋಪಿ ಜಬೀವುಲ್ಲಾನನ್ನು ಬಂಧಿಸಲು ಹೋಗಿದ್ದ ವೇಳೆ ಆರೋಪಿಯು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾದ. ಈ ವೇಳೆ ಆತ್ಮರಕ್ಷಣೆಗೆ ಪೊಲೀಸರು ಫೈರಿಂಗ್‌ ಮಾಡಿದ್ದಾರೆ. ವಿನೋಬನಗರ ಠಾಣೆ ಪಿಎಸ್‌ಐ ಮಂಜನಾಥ್‌ ಆರೋಪಿ ಜಬೀವುಲ್ಲಾನ ಕಾಲಿಗೆ ಎರಡು ರೌಂಡ್‌ ಫೈರಿಂಗ್‌ ಮಾಡಿದ್ದಾರೆ. ಗುಂಡೇಟು ತಗುಲಿದ ಆರೋಪಿಯನ್ನು ವಶಕ್ಕೆ ಪಡೆದು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮ್‌ ಸಿಂಗ್‌ಗೆ ಚಾಕು ಇರಿದ ಪ್ರಕರಣದಲ್ಲಿ ಶಿವಮೊಗ್ಗದ ಜೆಸಿ ನಗರದ ನದೀಮ್‌ (25) ಮತ್ತು ಬುದ್ಧ ನಗರದ ಅಬ್ದುಲ್‌ ರೆಹಮಾನ್‌ (25) ಎಂಬುವವರನ್ನು ಸೋಮವಾರ ರಾತ್ರಿಯೇ ಪೊಲೀಸರು ಬಂಧಿಸಿದ್ದರು.

Follow Us:
Download App:
  • android
  • ios