ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳಿಂದಾಗಿ ಬೆಂಗಳೂರಿನ ಹಲಸೂರು ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಮದುವೆಗಳನ್ನು ನಿಲ್ಲಿಸಲಾಗಿದೆ. ದಂಪತಿ ನ್ಯಾಯಾಲಯಕ್ಕೆ ಹೋದಾಗ, ಮದುವೆ ಮಾಡಿಸಿದ ಅರ್ಚಕರನ್ನು ಸಾಕ್ಷಿಯಾಗಿ ಕರೆಯುತ್ತಿರುವುದರಿಂದ, ಅವರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇವಾಲಯಗಳಲ್ಲಿ ಮದುವೆ ಮಾಡಿಸುವ ಪದ್ಧತಿ ಶತಮಾನಗಳಿಂದಲೂ ಇದೆ. ಕಲ್ಯಾಣ ಮಂಟಪಗಳು, ಮದುವೆ ಛತ್ರಗಳು ಎಂಬ ಕಲ್ಪನೆಯೇ ಇಲ್ಲದ ಕಾಲದಲ್ಲಿ ಹೆಚ್ಚಾಗಿ ದೇವಸ್ಥಾನಗಳಲ್ಲಿಯೇ ಮದುವೆ ನಡೆಯುತ್ತಿದ್ದವು, ಈಗಲೂ ಮದುವೆ ಸಮಾರಂಭಗಳಿಗಾಗಿಯೇ ದೇವಾಲಯಗಳು ಮೀಸಲು ಇರುವುದೂ ಇದೆ. ಆದರೆ ಮದುವೆ ಎನ್ನುವ ಕಾರ್ಯವು ಪುಣ್ಯಕಾರ್ಯ ಎಂದು ದೇವಸ್ಥಾನಗಳಲ್ಲಿ ಮಾಡಿಸಿದರೆ, ಇದು ದೇವಾಲಯಗಳಿಗೇ ಅಪಪ್ರಚಾರ ತರುತ್ತಿರುವುದು ಕೆಲ ವರ್ಷಗಳಿಂದ ನಡೆಯುತ್ತಿದೆ! ಇದೇ ಕಾರಣಕ್ಕೆ ದೇವಾಲಯಗಳಲ್ಲಿ ಮದುವೆ ಮಾಡಿಸುವುದೇ ದೊಡ್ಡ ತಲೆನೋವು ಎನ್ನುವ ಪರಿಸ್ಥಿತಿ ಇಂದು ಬಂದೊದಗಿದೆ!
ಹೆಚ್ಚುತ್ತಿರುವ ಡಿವೋರ್ಸ್
ಇದಕ್ಕೆ ಕಾರಣ, ಹೆಚ್ಚುತ್ತಿರುವ ಡಿವೋರ್ಸ್. ವಿಚ್ಛೇದನ ಹೆಚ್ಚಳಕ್ಕೂ, ದೇವಸ್ಥಾನದಲ್ಲಿನ ಮದುವೆಗೂ ಏನಪ್ಪಾ ಸಂಬಂಧ ಎಂದು ಕೆಲವರು ಕೇಳಬಹುದು. ದೇವರ ಸನ್ನಿಧಿಯಲ್ಲಿಯೇ ಮದುವೆಯಾಗಲಿ, ಛತ್ರದಲ್ಲಿಯೇ ಆಗಲಿ ಅಥವಾ ಇನ್ನೆಲ್ಲಿಯೇ ಆಗಲಿ ಕಳೆದ ಒಂದೆರಡು ದಶಕಗಳಿಂದ ವಿಚ್ಛೇದನ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ದಂಪತಿಯ ನಡುವೆ ಹೊಂದಾಣಿಕೆ ಎನ್ನುವುದೇ ಇಲ್ಲವಾಗಿರುವ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯವಾಗಿದೆ. ದಂಪತಿ ನಡುವೆ ಜಗಳಕ್ಕೂ, ದೇವಸ್ಥಾನಕ್ಕೂ ನೇರಾನೇರ ಯಾವುದೇ ಸಂಬಂಧ ಇಲ್ಲದಿದ್ದರೂ, ಕಟಕಟೆಗೆ ಹೋಗುವ ಪರಿಸ್ಥಿತಿ ಈ ಜೋಡಿಗೆ ಮದುವೆ ಮಾಡಿಸಿರುವ ಪುರೋಹಿತರಿಗೂ ಬಂದೊದಗುತ್ತಿದೆ!
ದೇವಾಲಯ ಕೊಟ್ಟ ಸ್ಪಷ್ಟನೆ
ಇದೇ ಕಾರಣಕ್ಕೆ ಬೆಂಗಳೂರಿನ ಹಲಸೂರಿನ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಆರೇಳು ವರ್ಷಗಳಿಂದ ಮದುವೆಯನ್ನೇ ನಿಲ್ಲಿಸಲಾಗಿದೆ. ಮದುವೆ ನಿಲ್ಲಿಸಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಹಲವರು ಗೊಂದಲಕ್ಕೀಡಾಗಿದ್ದರು. ಇದೀಗ ದೇವಾಲಯದ ಆಡಳಿತ ಮಂಡಳಿ ಈ ಬಗ್ಗೆ ಇದೀಗ ಸ್ಪಷ್ಟನೆ ಕೊಟ್ಟಿದೆ. ದೇವಾಲಯದಲ್ಲಿನ ಅಪಪ್ರಚಾರವನ್ನು ತಪ್ಪಿಸುವ ಸಲುವಾಗಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳಿಗೆ ದೇವಾಲಯದ ಆಡಳಿತ ಮಂಡಳಿ ಪತ್ರ ಬರೆದಿದ್ದು ಇದೀಗ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರ್ಚಕರು ಸಂಕಷ್ಟಕ್ಕೆ
ಈ ಪತ್ರದಲ್ಲಿ ಸ್ಪಷ್ಟನೆಯನ್ನೂ ನೀಡಲಾಗಿದೆ. ಅದೇನೆಂದರೆ, ದೇವಾಲಯದಲ್ಲಿ ಮದುವೆ ಮಾಡಿಕೊಳ್ಳುತ್ತಿದ್ದ ದಂಪತಿಗಳು ಅವರಿಗೆ ಹೊಂದಾಣಿಕೆಯಾಗದೇ ಇದ್ದಾಗ ಅವರು ನ್ಯಾಯಾಲಯಗಳಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಮದುವೆ ಮಾಡಿಸಿರುವ ಅರ್ಚಕರನ್ನೂ ಕೋರ್ಟ್ಗೆ ಹಾಜರು ಪಡಿಸುತ್ತಿದ್ದಾರೆ. ಆದ್ದರಿಂದ ಈ ದೇವಾಲಯದಲ್ಲಿ ಮದುವೆ ಮಾಡಿಸುವ ಅರ್ಚಕರು, ತಾವು ಮದುವೆ ಮಾಡಿಸುವುದಿಲ್ಲ ಎಂದು ನಿರಾಕರಿಸುತ್ತಿದ್ದಾರೆ. ಇಲ್ಲದೇ ಹೋದರೆ ಅವರು ವಿನಾಕಾರಣ ಕೋರ್ಟ್ ಅಲೆಯುವ ಸ್ಥಿತಿ ಉಂಟಾಗುತ್ತದೆ. ಇದೇ ಕಾರಣಕ್ಕೆ ಆಕಸ್ಮಿಕವಾಗಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ದೇವಾಲಯಕ್ಕೆ ಕಳಂಕವಾಗುವುದನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.



