ನಿರ್ವಹಣಾ ಕಾಮಗಾರಿ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಲಾಗಿದೆ. ರೈಲ್ವೆ ಇಲಾಖೆಯು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕೆಲವು ರೈಲುಗಳ ವಿಳಂಬದ ಅವಧಿಯನ್ನು ಕಡಿಮೆ ಮಾಡಿದೆ ಮತ್ತು ಇತರ ರೈಲುಗಳ ಸಂಚಾರಕ್ಕೆ ಹೊಸ ದಿನಾಂಕಗಳನ್ನು ನಿಗದಿಪಡಿಸಿದೆ.

ಮಂಗಳೂರು: ಸುಬ್ರಹ್ಮಣ್ಯ ರೋಡ್‌, ಎಡಮಂಗಲ ಮತ್ತು ನರಿಮೊಗರು ರೈಲು ಮಾರ್ಗಗಳ ನಡುವೆ ಹಳಿ ಹಾಗೂ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದ ಹಾಗೂ ಮರುನಿಗದಿಗೊಳಿಸಲಾಗಿದ್ದ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಇದೀಗ ಮರುಸ್ಥಾಪಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

Add Asianetnews Kannada as a Preferred SourcegooglePreferred

ಈ ಕುರಿತು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮಾಹಿತಿ ನೀಡಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಯಾವ ರೈಲು?

ಮೊದಲು ಜೂನ್‌ 10ರಿಂದ 21ರವರೆಗೆ ರದ್ದುಪಡಿಸಲಾಗಿದ್ದ ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲುಗಳು ಈಗ ಮರುಸ್ಥಾಪನೆಯಾಗಿದ್ದು, ನಿಗದಿತ ಮಾರ್ಗ ಮತ್ತು ಸಮಯದಂತೆ ಸಂಚರಿಸಲಿವೆ.

ಇನ್ನು ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಮೊದಲು ಏಪ್ರಿಲ್‌ 21ರಿಂದ ಜೂನ್‌ 9ರವರೆಗೆ 55 ನಿಮಿಷಗಳ ವಿಳಂಬ ಇರಲಿದೆ ಎಂದು ತಿಳಿಸಲಾಗಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಏಪ್ರಿಲ್‌ 16ರಿಂದ ಜೂನ್‌ 4ರವರೆಗೆ ಆರಂಭವಾಗುವ ಪ್ರಯಾಣಗಳಲ್ಲಿ ಈ ರೈಲು ಕೇವಲ 35 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಜೂನ್‌ 5ರಿಂದ 9ರವರೆಗೆ ಉಳಿದ ದಿನಗಳಲ್ಲಿ ರೈಲು ತನ್ನ ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸುವುದಾಗಿ ತಿಳಿಸಲಾಗಿದೆ.

ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ

ಅದೇ ರೀತಿ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಮರುನಿಗದಿ ದಿನಾಂಕಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಏಪ್ರಿಲ್‌ 16, 18, 21, 23, 25, 28, 30 ಹಾಗೂ ಮೇ 2, 5, 7, 9, 12, 14, 16, 19, 21, 23, 26, 28, 30 ಮತ್ತು ಜೂನ್‌ 2 ಹಾಗೂ 4ರಂದು ಈ ರೈಲು 15 ನಿಮಿಷ ತಡವಾಗಿ ಸಂಚರಿಸಲಿದೆ. ಹಿಂದೆ ಸೂಚಿಸಲಾಗಿದ್ದಂತೆ ಜೂನ್‌ 6 ಮತ್ತು 9ರಂದು ಈ ರೈಲುಗಳು ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾಗಿದ್ದ ಅಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ಪರಿಷ್ಕರಣೆಗಳನ್ನು ಮಾಡಿದ್ದು, ಈಗ ಬಹುತೇಕ ಸೇವೆಗಳು ಮರುಸ್ಥಾಪನೆಯಾಗಿರುವುದರಿಂದ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಲಿದೆ.