ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ತಪಾಸಣಾ ಕೌಂಟರ್ ಬಳಿಯ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದ ಸುಮಾರು ₹2 ಕೋಟಿ ಮೌಲ್ಯದ 1.65 ಕೆ.ಜಿ. ಚಿನ್ನದ ಪೇಸ್ಟ್ ಹಾಗೂ ₹73 ಲಕ್ಷ ನಗದನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆಗೆ ನೆರವಾಗುತ್ತಿದ್ದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಸೇರಿದಂತೆ ಮೂವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಮಂಗಳೂರು ಪ್ರಾದೇಶಿಕ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹ 2 ಕೋಟಿ ಮೌಲ್ಯದ 1.65 ಕೆ.ಜಿ. ವಿದೇಶಿ ಮೂಲದ ಚಿನ್ನ ಹಾಗೂ ಅಪರಾಧದಿಂದ ಗಳಿಸಿದ ಹಣವೆಂದು ಶಂಕಿಸಲಾದ ₹ 73 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ.

2 ಚಿನ್ನದ ಪೇಸ್ಟ್‌ ವಶಕ್ಕೆ

ಬಂಧಿತರು ಯುಎಇ ದೇಶದಿಂದ ಸಾಗಣೆ ಮಾಡುತ್ತಿದ್ದ ಚಿನ್ನವನ್ನು ಮಂಗಳೂರು ಏರ್ಪೋರ್ಟ್‌ನ ವಲಸೆ ತಪಾಸಣೆ ಕೇಂದ್ರದಲ್ಲಿ ಅಡಗಿಸಿಡುತ್ತಿದ್ದರು. ಈ ಚಿನ್ನವನ್ನು ಹೊರಗುತ್ತಿಗೆ ಸಿಬ್ಬಂದಿ ಸಂಗ್ರಹಿಸಿ, ಅದನ್ನು ಕಾಸರಗೋಡು ಮೂಲದವರಿಗೆ ಸಾಗಿಸುತ್ತಿದ್ದ. ಈ ಜಾಲವನ್ನು ಅರಿತ ಡಿಆರ್‌ಐ, ಮಂಗಳವಾರ ಬೆಳಗ್ಗೆ ಸಿಬ್ಬಂದಿ ಚಿನ್ನ ಸಂಗ್ರಹಿಸುತ್ತಿದ್ದಾಗ ವಶಕ್ಕೆ ಪಡೆದು ಆತನಿಂದ 2 ಚಿನ್ನದ ಪೇಸ್ಟ್‌ ವಶಪಡಿಸಿಕೊಂಡಿದ್ದಾರೆ.

ದುಬೈ ಮತ್ತು ಕಾಸರಗೋಡು ಮೂಲದ ಕಳ್ಳಸಾಗಣೆದಾರರೊಂದಿಗೆ ಶಾಮೀಲಾಗಿ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆಗೆ ನೆರವಾಗುತ್ತಿದ್ದ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಯುಎಇಯಿಂದ ಆಗಮಿಸುವ ಪ್ರಯಾಣಿಕರು ವಲಸೆ ತಪಾಸಣಾ ಕೌಂಟರ್ ಬಳಿಯ ಶೌಚಾಲಯದಲ್ಲಿ ಅಡಗಿಸಿಟ್ಟು ಹೋಗುತ್ತಿದ್ದ ಚಿನ್ನವನ್ನು ವಿಮಾನ ನಿಲ್ದಾಣದ ಹೊರಗುತ್ತಿಗೆ ಸಿಬ್ಬಂದಿ ಸಂಗ್ರಹಿಸುತ್ತಿದ್ದರು ಎಂಬ ಮಾಹಿತಿ ಆಧರಿಸಿ ಅಧಿಕಾರಿಗಳು ನಿಗಾ ಇರಿಸಿದ್ದರು.

ಮಂಗಳವಾರ ಬೆಳಗ್ಗೆ ವಲಸೆ ಕೌಂಟರ್ ಬಳಿಯ ಶೌಚಾಲಯದಿಂದ ಚಿನ್ನವನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಹೊರಗುತ್ತಿಗೆ ಸಿಬ್ಬಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಆತನ ಬಳಿಯಿಂದ ಚಿನ್ನದ ಪೇಸ್ಟ್ ತುಂಬಿದ್ದ ಎರಡು ಆಯತಾಕಾರದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಯಿತು.

ಹೇಗಿತ್ತು ಯೋಜನೆ?

ಈ ಚಿನ್ನವನ್ನು ಕಾಸರಗೋಡು ಮೂಲದ ಮತ್ತೊಬ್ಬ ಹೊರಗುತ್ತಿಗೆ ಸಿಬ್ಬಂದಿಗೆ ಹಸ್ತಾಂತರಿಸಬೇಕಿತ್ತು. ಆತ ವಿಮಾನ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ. ದೂರದ ಸ್ಥಳದಲ್ಲಿ ಕಾಸರಗೋಡು ಮೂಲದ ಮೂರನೇ ವ್ಯಕ್ತಿಗೆ ಚಿನ್ನ ತಲುಪಿಸಲು ಯೋಜಿಸಿದ್ದ ಎನ್ನಲಾಗಿದೆ.

ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಎರಡನೇ ಸಿಬ್ಬಂದಿ ಹಾಗೂ ಮೂರನೇ ವ್ಯಕ್ತಿಯನ್ನೂ ಬಂಧಿಸಿದರು. ಈ ವೇಳೆ ನಡೆಸಿದ ಶೋಧದಲ್ಲಿ ₹ 73 ಲಕ್ಷ ನಗದು ಪತ್ತೆಯಾಗಿದೆ. ಚಿನ್ನ ಕಳ್ಳಸಾಗಣೆಗೆ ಬಳಸಿದ್ದ ಒಂದು ಕಾರು ಮತ್ತು ದ್ವಿಚಕ್ರ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ. ಮೂವರನ್ನು ಕಸ್ಟಮ್ಸ್ ಕಾಯ್ದೆ 1962ರ ಅಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಡಿ. 7ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.