ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ತೀವ್ರ ಬೆನ್ನುನೋವಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ಸದ್ಯಕ್ಕೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಪಡೆಯಲು ಅನುಮತಿ ನೀಡಲಾಗಿದೆ.

ಬೆಂಗಳೂರು (ನ.26): ರೇಣುಕಾಸ್ವಾಮಿ ಕೊ** ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೀವ್ರ ಬೆನ್ನುನೋವಿನ ಚಿಕಿತ್ಸೆಗಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 59ನೇ ಸಿಸಿಹೆಚ್ (CCH) ನ್ಯಾಯಾಲಯವು, ಫಿಸಿಯೋಥೆರಪಿ ಅವಶ್ಯಕತೆ ಇದ್ದರೆ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅವಕಾಶ ನೀಡಿದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ಕೋರಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ತಮಗೆ ಬಿಜಿಎಸ್ (BGS) ಅಥವಾ ಹಾಸ್ಮಟ್ (Hosmat) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿ ದರ್ಶನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ, ಜೈಲು ಅಧಿಕಾರಿಗಳು ದರ್ಶನ್ ಅವರ ಆರೋಗ್ಯ ತಪಾಸಣಾ ವರದಿಯನ್ನು ಇ-ಮೇಲ್ ಮೂಲಕ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದರು. ನ್ಯಾಯಾಲಯವು ಈ ವರದಿಯ ಪ್ರತಿಗಳನ್ನು ದರ್ಶನ್ ಪರ ವಕೀಲರು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಅವರಿಗೆ ಹಸ್ತಾಂತರಿಸಿತು.

ಆಪರೇಷನ್ ಥಿಯೇಟರ್‌ನಲ್ಲೇ ಇಂಜೆಕ್ಷನ್ ಕೊಡಬೇಕು: ದರ್ಶನ್ ಪರ ವಕೀಲರ ವಾದ

ವಿಚಾರಣೆ ವೇಳೆ ಜೈಲಿನಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಯ ಲೋಪಗಳ ಕುರಿತು ದರ್ಶನ್ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದರು. ಜೈಲಿನಲ್ಲಿ ಕಳೆದ 7ನೇ ತಾರೀಖು ಮತ್ತು 20ನೇ ತಾರೀಖಿನಂದು ಮಾತ್ರ ಫಿಸಿಯೋಥೆರಪಿ ಮಾಡಿಸಿದ್ದಾರೆ. ಎರಡು ಚಿಕಿತ್ಸೆಗಳ ನಡುವೆ ಇಷ್ಟೊಂದು ದಿನಗಳ ಕಾಲ ಅಂತರವಿದೆ; ಇದಕ್ಕಾಗಿಯೇ ನಾವು ಚಿಕಿತ್ಸೆಗೆ ಅನುಮತಿ ಕೋರಿ ಅರ್ಜಿ ಹಾಕಿದ್ದೇವೆ. 12 ವರ್ಷಗಳ ಹಿಂದೆಯೇ ದರ್ಶನ್ ಬೆನ್ನಿಗೆ ಇಂಜೆಕ್ಷನ್ ತೆಗೆದುಕೊಂಡಿದ್ದರು ಮತ್ತು ಅಂದಿನಿಂದಲೂ ಇಂಜೆಕ್ಷನ್ ಪಡೆಯುತ್ತಾ ಬಂದಿದ್ದಾರೆ. ಈಗಲೂ ಅದರ ಅವಶ್ಯಕತೆ ಇದೆ ಎನಿಸುತ್ತಿದೆ ಎಂದು ವಕೀಲರು ವಾದಿಸಿದರು.

ಬೆನ್ನುನೋವಿನ ಈ ವಿಶೇಷ ಇಂಜೆಕ್ಷನ್ ಅನ್ನು ಜೈಲಿನ ಒಳಗೆ ಕೊಡಲು ಸಾಧ್ಯವಿಲ್ಲ; ಅದನ್ನು ಆಪರೇಷನ್ ಥಿಯೇಟರ್‌ನಲ್ಲಿಯೇ ಕೊಡಬೇಕಾಗುತ್ತದೆ. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ಬೇರೆ-ಬೇರೆ ಮಾದರಿಯ ಫಿಸಿಯೋಥೆರಪಿ ಸೌಲಭ್ಯಗಳಿವೆ ಎಂದು ವಕೀಲರು ವಿವರಿಸಿದರು.

ಅನುಭವ ಇಲ್ಲದ ನರ್ಸ್‌ಗಳ ಬಗ್ಗೆ ಆಕ್ಷೇಪ

ಜೈಲಿನಲ್ಲಿ ಯಾವುದೇ ಅನುಭವ ಇಲ್ಲದವರು ಬಂದು ಫಿಸಿಯೋಥೆರಪಿ ಮಾಡುತ್ತಿದ್ದಾರೆ. ಯಾರೋ ನರ್ಸ್, ಯಾರ್ಯಾರು ಇರುತ್ತಾರೋ ಅವರನ್ನು ಕಳುಹಿಸಿಬಿಡುತ್ತಾರೆ. ಫಿಸಿಯೋಥೆರಪಿ ಮಾಡಲು ಬೃಹತ್ ಮೆಷಿನ್‌ಗಳು ಇರುತ್ತವೆ. ಅವುಗಳನ್ನು ಜೈಲಿನ ಒಳಗೆ ಎತ್ತಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ವಕೀಲರು ಅಸಮಾಧಾನ ವ್ಯಕ್ತಪಡಿಸಿದರು. ದರ್ಶನ್ ಅವರನ್ನು ಅಪೋಲೋ ಆಸ್ಪತ್ರೆಗಾಗಲಿ ಅಥವಾ ಹಾಸ್ಮಟ್ ಆಸ್ಪತ್ರೆಗಾಗಲಿ ಕಳುಹಿಸಿ ಚಿಕಿತ್ಸೆ ಕೊಡಿಸಿ. ಒಂದು ವೇಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ನೀಡಲು ಆಗದೇ ಇದ್ದರೂ, ಕನಿಷ್ಠ ವಿಕ್ಟೋರಿಯಾ ಆಸ್ಪತ್ರೆಯಲ್ಲಾದರೂ ಚಿಕಿತ್ಸೆಗೆ ಅವಕಾಶ ಮಾಡಿಕೊಡಿ ಎಂದು ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಎಸ್‌ಪಿಪಿ ಕಚೇರಿಯಿಂದ ಕಾಲಾವಕಾಶ ಕೋರಿಕೆ; ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ

ಇದಕ್ಕೆ ಪ್ರತ್ಯುತ್ತರ ನೀಡಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಕಚೇರಿ ಪರ ವಕೀಲರು, ನಮಗೆ ಈಗಷ್ಟೇ ಜೈಲು ವೈದ್ಯಾಧಿಕಾರಿಗಳ ಆರೋಗ್ಯ ತಪಾಸಣಾ ವರದಿ ಸಿಕ್ಕಿದೆ. ಎಸ್‌ಪಿಪಿ ಪ್ರಸನ್ನಕುಮಾರ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಶನಿವಾರ ಅಥವಾ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಬೇಕು ಎಂದು ಮನವಿ ಮಾಡಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು, ದರ್ಶನ್ ಅವರಿಗೆ ತಕ್ಷಣಕ್ಕೆ ಫಿಸಿಯೋಥೆರಪಿ ಅವಶ್ಯಕತೆ ಇದ್ದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅವಕಾಶ ನೀಡಿ ಆದೇಶಿಸಿದರು. ಜೊತೆಗೆ, ಖಾಸಗಿ ಆಸ್ಪತ್ರೆ ಚಿಕಿತ್ಸೆ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಸೂಚಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.