ಚಿನ್ನದ ಬೆಲೆ ಏರುತ್ತಿರುವ ನಡುವೆ ಮಾರುಕಟ್ಟೆಯಲ್ಲಿ ಕಲಬೆರಕೆ ಚಿನ್ನದ ಹಾವಳಿ ಹೆಚ್ಚಾಗಿದೆ. ರೀನಿಯಮ್, ಟಂಗ್‌ಸ್ಟನ್ ಪುಡಿ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಇದು ಹಾಲ್‌ಮಾರ್ಕ್ ಪರೀಕ್ಷೆಯಲ್ಲೂ ಪತ್ತೆಯಾಗುತ್ತಿಲ್ಲ.

ಉಮಾಶಂಕರ ಕಾರ್ಯ

ಬೆಂಗಳೂರು: ದುಬಾರಿಯಾಗುತ್ತಿರುವ ಚಿನ್ನ ಒಂದು ಕಡೆಯಾದರೆ, ಇನ್ನೊಂದು ಕಡೆ ಮಾರುಕಟ್ಟೆಯಲ್ಲಿ ಕಲಬೆರಕೆ ಚಿನ್ನದ ಹಾವಳಿ ಜನಸಾಮಾನ್ಯರಿಗೆ ಹೊಸ ತಲೆನೋವು ತಂದಿಟ್ಟಿದೆ. ಚಿನ್ನದ ಜೊತೆ ರೀನಿಯಮ್, ಟಂಗ್‌ಸ್ಟನ್ ಪುಡಿ ಮಿಶ್ರಣ ಮಾಡಿ ಮಾರಾಟ ಮಾಡುವ ದಂಧೆ ಈಗ ಭಾರತದಲ್ಲೂ ವ್ಯಾಪಕವಾಗುತ್ತಿದ್ದು, ಈಗಾಗಲೇ ಲಕ್ಷಾಂತರ ರುಪಾಯಿ ಕೊಟ್ಟು ಇಂಥ ಆಭರಣ ಖರೀದಿಸಿರುವ ಗ್ರಾಹಕರು ಹಾಗೂ ವ್ಯಾಪಾರಿಗಳ ನಿದ್ದೆಗೆಟ್ಟಿದೆ.

ಭಾರತ ಸರ್ಕಾರ ಪ್ರತಿಯೊಂದು ಆಭರಣಗಳಿಗೂ ಬಿಐಎಸ್ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದ್ದರೂ ಹಾಲ್ ಮಾರ್ಕ್ ಪರೀಕ್ಷೆಯಲ್ಲೂ ಈ ಮಿಶ್ರಣ ಪತ್ತೆಯಾಗದಿರುವುದು ಗ್ರಾಹಕರ ಆತಂಕ ಮತ್ತಷ್ಟು ಹೆಚ್ಚಿಸಿದೆ. ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ ಕಡಿಮೆ ಬೆಲೆಗೆ ಸಿಗುವ ಈ ರಾಸಾಯನಿಕ ಮಿಶ್ರಣ ಮಾಡಿ ಚಿನ್ನ ಮಾರಾಟ ಮಾಡಿರುವ ಖದೀಮರು ಕಳೆದೊಂದು ವರ್ಷದಿಂದ ಕೋಟಿ ಕೋಟಿ ರುಪಾಯಿ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ.

3 ಮಾರ್ಗಗಳಿಂದ ಚಿನ್ನ ಪೂರೈಕೆ

ಭಾರತದ ಮಾರುಕಟ್ಟೆಗೆ 3 ಮಾರ್ಗಗಳಿಂದ ಚಿನ್ನ ಪೂರೈಕೆಯಾಗುತ್ತದೆ. ಇದರಲ್ಲಿ ಮೊದಲನೆಯದು ವಿದೇಶಗಳಿಂದ, 2ನೇಯದು ದೇಶೀಯ ಮೂಲಗಳಿಂದ ಅಂದರೆ ರಾಜ್ಯದ ಹಟ್ಟಿ ಚಿನ್ನದ ಗಣಿ, ಹಳೇ ಚಿನ್ನಾಭರಣ ಕರಗಿಸುವುದರಿಂದ, 3ನೇ ಮಾರ್ಗ ಕಳ್ಳದಾರಿಯಲ್ಲಿ ತರುವ ಚಿನ್ನ. ಕಳ್ಳದಾರಿಯಲ್ಲಿ ಬರುವ ಚಿನ್ನದಲ್ಲೇ ಈ ಮಿಶ್ರಣ ಹೆಚ್ಚಿದ್ದು, ದೇಶದ ಒಳಗಿರುವವರೇ ಈ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆಂದು ಬೆಂಗಳೂರಿನ ಜ್ಯುವೆಲ್ಲರಿ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಶ್ರೀನಿವಾಸ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ರೀನಿಯಮ್ ಪುಡಿ ಮಿಶ್ರಣ

ಒಂದು ಕೆ.ಜಿ. ರೀನಿಯಮ್ ಪುಡಿ ಮೌಲ್ಯ 2.3 ಲಕ್ಷದಿಂದ 5.44 ಲಕ್ಷ ರು.ವರೆಗೆ ಇದೆ. ಚಿನ್ನಕ್ಕಿಂತ ಇದರ ಮೌಲ್ಯ ಕಡಿಮೆ ಎನ್ನುವ ಕಾರಣಕ್ಕೆ ಇದನ್ನು ಮಿಶ್ರಣ ಮಾಡುತ್ತಾರೆ. ಒಂದು ಕೆ.ಜಿ. ಆಭರಣ ಚಿನ್ನಕ್ಕೆ 1 ಕೆಜಿಯಷ್ಟು ಇಂಥ ಪೌಡರ್‌ ಮಿಶ್ರಣ ಮಾಡಿದರೆ 1.20 ಕೋಟಿ (ಈಗಿನ ಚಿನ್ನದ ದರದಂತೆ)ವರೆಗೆ ಲಾಭ ಸಿಗುತ್ತದೆ ಎನ್ನಲಾಗಿದೆ.

ವಿಪರ್ಯಾಸವೆಂದರೆ, ಈ ಮಿಶ್ರಣ ಆಭರಣ ವ್ಯಾಪಾರಿಗಳಿಗೂ ಪತ್ತೆಹಚ್ಚಲು ಆಗಲ್ಲ. ಹೀಗಾಗಿ ಈಗಾಗಲೇ ಒಂದು ವರ್ಷದಿಂದ ರಾಜ್ಯದಲ್ಲಿ ಸುಮಾರು 1,250 ಕೆ.ಜಿ.ಯಿಂದ 2 ಸಾವಿರ ಕೆ.ಜಿ.ವರೆಗೆ ಮಾರಾಟವಾಗಿರುವ ಚಿನ್ನಾಭರಣಗಳಲ್ಲಿ ಯಾವ ಆಭರಣಗಳಲ್ಲಿ, ಎಷ್ಟು ಮಿಶ್ರಣ ಮಾಡಲಾಗಿದೆ ಎಂಬುದೇ ತಿಳಿಯದಂಥ ಸ್ಥಿತಿ ಇದೆ.

ಕಲೆಬೆರಕೆ ಚಿನ್ನ ಹಿಂದೆಯೂ ಇತ್ತು. ಹೆರಿಡಿಯಮ್, ರಿಥೇನಿಯಮ್, ಒಸ್ಮಿಯಮ್ ಎಂಬ 3 ಪುಡಿಗಳನ್ನು ಮಿಶ್ರಣ ಮಾಡಿ ಹಾಲ್ ಮಾರ್ಕ್ ಪರೀಕ್ಷೆಯಲ್ಲೂ ಪತ್ತೆಯಾಗದಂತೆ ಖದೀಮರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು. ಆದರೆ, ಇವುಗಳನ್ನು ಪತ್ತೆ ಹಚ್ಚಲು ಎಕ್ಸ್‌ಆರ್‌ಎಫ್ ಎಂಬ ಯಂತ್ರ ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ಖದೀಮರು ಹಾಲ್‌ ಮಾರ್ಕ್‌ ಪರೀಕ್ಷೆಯಲ್ಲೂ ಪತ್ತೆಯಾಗದ ರೀನಿಯಮ್, ಟಂಗ್‌ಸ್ಟನ್ ಪುಡಿಗಳ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಶ್ರೀನಿವಾಸ್‌.

ಈ ಪುಡಿ ಎಲ್ಲಿಂದ ಬರುತ್ತಿದೆ?

ಚಿಲಿ, ಚೀನಾ, ಪೋಲೆಂಡ್, ಅಮೆರಿಕ (ಅರಿಜೋನಾ, ಉತಾಹ್, ನ್ಯೂ ಮೆಕ್ಸಿಕೋದ ಮಾಲಿಬ್ಡಿನಮ್ ಗಣಿ) ಉಜ್ಬೇಕಿಸ್ತಾನ್, ದಕ್ಷಿಣ ಕೊರಿಯಾ, ಕಝಕಿಸ್ತಾನ್, ಅರ್ಮೇನಿಯಾ ದೇಶಗಳಲ್ಲಿ ಈ ಪುಡಿಗಳು ದೊರೆಯುತ್ತವೆ. ಚಿಲಿ, ಚೀನಾ, ಪೋಲೆಂಡ್ ರಾಷ್ಟ್ರಗಳು ಜಗತ್ತಿನ ಸುಮಾರು ಶೇ.74 ರಷ್ಟು ರೀನಿಯಮ್‌, ಟಂಗಸ್ಟನ್‌ ಪುಡಿ ಉತ್ಪಾದಿಸುತ್ತವೆ.

ಮಿಶ್ರಣ ಪತ್ತೆಗೆ ಯಂತ್ರ ಖರೀದಿ, ಸಾರ್ವಜನಿಕರ ಆಭರಣ ಪರೀಕ್ಷಿಸಲು ಅವಕಾಶ: ಶ್ರೀನಿವಾಸ್

ರೀನಿಯಮ್, ಟಂಗ್‌ಸ್ಟನ್ ಮಿಶ್ರಣ ಪತ್ತೆಗೆ ಬೆಂಗಳೂರು ಆಭರಣ ವ್ಯಾಪಾರಿಗಳ ಸಂಘದಿಂದ ಸುಮಾರು 35 ಲಕ್ಷ ರು. ಬೆಲೆಯ ಎಕ್ಸ್ಆರ್‌ಎಫ್ ಯಂತ್ರ ಖರೀದಿಸಿದ್ದು, ಪರೀಕ್ಷಾರ್ಥ ಪ್ರಯೋಗ ಮುಗಿದ ನಂತರ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ನಮ್ಮ ಕಚೇರಿಗೆ ಭೇಟಿ ನೀಡಿ ಚಿನ್ನ ಪರೀಕ್ಷಿಸಿಕೊಳ್ಳಬಹುದು ಎಂದು ಬೆಂಗಳೂರು ಆಭರಣ ವ್ಯಾಪಾರಿಗಳ ಸಂಘದ ಗೌರವ ಕಾರ್ಯದರ್ಶಿ ಶ್ರೀನಿವಾಸ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಕಳೆದ ಒಂದು ತಿಂಗಳಿನಿಂದ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದೆ. ಈಗಾಗಲೇ 100 ರಿಂದ 120 ಸ್ಯಾಂಪಲ್ ಗಳನ್ನು (ಚಿನ್ನದ ಬಾರ್) ಪರೀಕ್ಷೆಗೆ ಒಳಪಡಿಸಲಾಗಿದೆ. ಇವುಗಳಲ್ಲಿ ಎರಡು ಅಥವಾ ಮೂರು ಸ್ಯಾಂಪಲ್ ಗಳಲ್ಲಿ ರೀನಿಯಮ್ ಹಾಗೂ ಟಂಗ್‌ಸ್ಟನ್ ಪುಡಿ ಮಿಶ್ರಣ ಪತ್ತೆಯಾಗಿದೆ ಎಂದು ತಿಳಿಸಿದರು.

ಇನ್ನು 10 ದಿನಗಳಲ್ಲಿ ಪರೀಕ್ಷಾರ್ಥ ಪ್ರಯೋಗ ಪೂರ್ಣಗೊಳ್ಳಲಿದ್ದು, ಪ್ರಮಾಣ ಪತ್ರ ನೀಡುವುದೂ ಸೇರಿ ಇತರೆ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯದಲ್ಲೇ ನಮ್ಮ ಸಂಘದಲ್ಲಿ ಪ್ರಥಮ ಬಾರಿಗೆ ಈ ದುಬಾರಿ ಯಂತ್ರ ಖರೀದಿಸಲಾಗಿದೆ. ಆಭರಣಗಳಲ್ಲಿ ಎಷ್ಟು ಪ್ರಮಾಣದಲ್ಲಿ ಈ ಮಿಶ್ರಣವಾಗಿದೆ ಎಂಬುದು ಸದ್ಯಕ್ಕೆ ಪತ್ತೆ ಹಚ್ಚಲು ಆಗಲ್ಲ. ಆದರೆ, ಪುಡಿ ಮಿಶ್ರಣ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದು ಎಂದು ವಿವರಿಸಿದರು.