One Child Dead, Three Missing After Drowning in Kaveri River During Picnic ಮೈಸೂರಿನ ಮದರಸದಿಂದ ಪ್ರವಾಸಕ್ಕೆಂದು ಮಂಡ್ಯಕ್ಕೆ ಬಂದಿದ್ದ ನಾಲ್ವರು ಮಕ್ಕಳು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ.
ಮಂಡ್ಯ (ನ.1): ಪ್ರವಾಸಕ್ಕೆಂದು ಬಂದಿದ್ದ ಮಕ್ಕಳು ಕಾವೇರಿ ನದಿಯಲ್ಲಿ ಕೊಚ್ಚಿಹೋಗಿರುವ ಭೀಕರ ಘಟನೆ ಮಂಡ್ಯದಲ್ಲಿ ಸಂಭವಿಸಿದೆ. ಕಾವೇರಿ ನದಿಯಲ್ಲಿ ಒಟ್ಟು ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದು, ಒಬ್ಬ ಬಾಲಕಿ ಸಾವು ಕಂಡಿದ್ದಾಳೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ರಾಮಸ್ವಾಮಿ ನಾಲೆಯ ಬಳಿ ಘಟನೆ ಸಂಭವಿಸಿದೆ.
ಮೈಸೂರಿನ ಶಾಂತಿನಗರದ ಮದರಸದಿಂದ ಮಕ್ಕಳನ್ನು ಪಿಕ್‌ನಿಕ್‌ಗೆ ಕರೆದುಕೊಂಡು ಬರಲಾಗಿತ್ತು. ಪ್ರವಾಸಕ್ಕೆ ಬಂದ ಮಕ್ಕಳು ನಾಲೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ ಒಟ್ಟು ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ವೇಳೆ 13 ವರ್ಷದ ಐಶಾ ಎನ್ನುವ ಬಾಲಕಿಯನ್ನು ರಕ್ಷಣೆ ಮಾಡಲಾಗಿತ್ತಾದರೂ, ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆಗೆ ಸ್ಪಂದಿಸದೇ ಐಶಾ ಸಾವು ಕಂಡಿದ್ದಾಳೆ.
ನಾಳೆ ಮುಂದುವರಿಯಲಿದೆ ಶೋಧ ಕಾರ್ಯ
ಇನ್ನುಳಿದಂತೆ 14 ವರ್ಷದ ಹನಿ, 13 ವರ್ಷದ ಅರ್ಫಿನ್ ಹಾಗೂ 13 ವರ್ಷದ ತರ್ವಿನ್ ನಾಪತ್ತೆಯಾಗಿದ್ದಾರೆ. ಮಕ್ಕಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಕತ್ತಲು ಆವರಿಸಿದ ಕಾರಣ ಶೋಧ ಕಾರ್ಯ ಸ್ಥಗಿತಗೊಂಡಿದೆ. ನಾಳೆ ಬೆಳಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಲಿದ್ದಾರೆ. ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
