ಬಳ್ಳಾರಿ ಫೈರಿಂಗ್ ಮತ್ತು ಕಾರ್ಯಕರ್ತನ ಸಾವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ತರಾಟೆ ತೆಗೆದುಕೊಂಡ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಮತ್ತು ಪರಿಸ್ಥಿತಿ ನಿಯಂತ್ರಿಸುವಂತೆ ಸೂಚನೆ ನೀಡಿದ್ದಾರೆ.
ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಫೈರಿಂಗ್ ಹಾಗೂ ಅದರ ಪರಿಣಾಮವಾಗಿ ಕಾರ್ಯಕರ್ತನೊಬ್ಬನ ಸಾವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿದ್ದ ಜಿಲ್ಲಾ ಉಸ್ತುವಾರಿ ಜಮೀರ್ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆದರು. ಮಾತ್ರವಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಸಿಎಂ ಕ್ಲಾಸ್ ತೆಗೆದುಕೊಂಡರು.
ಕೊಲೆ ನಡೆದಿರುವುದು ಅಕ್ಷಮ್ಯ ಅಪರಾಧ: ಸಿಎಂ
ಘಟನೆಯ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಿದ ಸಿಎಂ, ಬ್ಯಾನರ್ ಕಟ್ಟಿದ ವಿಚಾರ ಸಣ್ಣ ವಿಷಯವಾಗಿರಬಹುದು. ಆದರೆ ಕೊಲೆ ನಡೆದಿರುವುದು ಅಕ್ಷಮ್ಯ ಅಪರಾಧ. ಕಾರ್ಯಕರ್ತನ ಸಾವನ್ನು ನಾನು ಯಾವ ಕಾರಣಕ್ಕೂ ಸಹಿಸಲ್ಲ ಎಂದು ಗರಂ ಆಗಿ ಹೇಳಿದ್ದಾರೆ. ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡರು. ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೇರಿದಂತೆ ಅಧಿಕಾರಿಗಳಿಂದ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡು, ಲೋಪಗಳಿದ್ದರೆ ತಕ್ಷಣ ತಿದ್ದಿಕೊಳ್ಳುವಂತೆ ನಿರ್ದೇಶನ ನೀಡಿದರು.
ಮನೆ ಮುಂದೆ ಹೋಗಿ ಬ್ಯಾನರ್ ಕಟ್ಟುವುದು ರಾಂಗ್ ಡೈರೆಕ್ಷನ್ ಸಿಎಂ ಆಕ್ರೋಶ
ಘಟನೆ ಹಿನ್ನೆಲೆಯಲ್ಲಿ ಬಳ್ಳಾರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರಿಗೆ ಸಿಎಂ ಸೂಚಿಸಿದರು. “ಗಲಾಟೆ ಬೇಕಿರಲಿಲ್ಲ. ಕಾರ್ಯಕರ್ತನೊಬ್ಬನ ಜೀವ ಹೋದ ಮೇಲೆ ಇದು ಸಣ್ಣ ವಿಷಯವಾಗಿ ಉಳಿಯುವುದಿಲ್ಲ. ಅವರ ಮನೆ ಮುಂದೆ ಹೋಗಿ ಬ್ಯಾನರ್ ಕಟ್ಟುವುದು ರಾಂಗ್ ಡೈರೆಕ್ಷನ್ ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲೇ ಶಾಸಕ ಭರತ್ ರೆಡ್ಡಿ ಅವರನ್ನು ಸಂಪರ್ಕಿಸಿ ಮಾತನಾಡಿಸಲು ಜಮೀರ್ ಅಹಮದ್ ಯತ್ನಿಸಿದರೂ, “ನಾನು ಭರತ್ ರೆಡ್ಡಿಯೊಂದಿಗೆ ಮಾತಾಡುವುದಿಲ್ಲ” ಎಂದು ಸಿಎಂ ಫೋನ್‌ನಲ್ಲಿ ಮಾತನಾಡಲು ಒಪ್ಪಲೇ ಇಲ್ಲ.
ಕೊನೆಗೆ ಶಾಸಕರಾದ ಕಂಪ್ಲಿ ಗಣೇಶ್, ನಾಗೇಂದ್ರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಳ್ಳಾರಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ ಇಡುವ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿದರು. ಅಲ್ಲಿನ ಪರಿಸ್ಥಿತಿಯನ್ನು ತಕ್ಷಣ ಕಂಟ್ರೋಲ್ ಮಾಡಿ. ಭರತ್ ರೆಡ್ಡಿಯನ್ನು ಕಂಟ್ರೋಲ್ ಮಾಡಿ, ಸುಮ್ನೆ ಇರಲು ಹೇಳಿ. ಬೇಕಾಬಿಟ್ಟಿ ಮಾತಾಡುವುದನ್ನ ನಿಲ್ಲಿಸುವಂತೆ ಹೇಳಿ ಎಂದು ಇಬ್ಬರು ಶಾಸಕರಿಗೂ ಸಿಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು. ಬಳ್ಳಾರಿ ಫೈರಿಂಗ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.


