ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಮತ್ತು ಸಂಘರ್ಷದ ಕುರಿತು ಸಚಿವ ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ. ತನಿಖೆಯಾಗದೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಕಾನೂನು ಸುವ್ಯವಸ್ಥೆ ಕುರಿತ ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧ (ಜ.2): ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಹಾಗೂ ಸಂಘರ್ಷದ ಕುರಿತು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಇಂದು ವಿಧಾನಸೌಧದಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಘಟನೆಯ ಕುರಿತು ತನಿಖೆಯಾಗದೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಮೂಲಕ ಘಟನೆ ಗೊತ್ತಾಗಿದೆ:
ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ ನಡೆದಿರುವ ಗಲಾಟೆಯ ಬಗ್ಗೆ ಮಾತನಾಡಿದ ಸಚಿವರು, ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಗಲಾಟೆ ನಡೆದಿದೆ ಎಂಬುದು ಮಾಧ್ಯಮಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಒಂದು ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಲೋಪವಾಗಿದ್ದರೆ ಅಥವಾ ವೈಫಲ್ಯ ಕಂಡುಬಂದಿದ್ದರೆ, ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿದೆ, ಎಂದು ತಿಳಿಸಿದರು.
ಬಿಜೆಪಿಯ 'ರಿಪಬ್ಲಿಕ್ ಆಫ್ ಕಾಂಗ್ರೆಸ್' ಟೀಕೆಗೆ ತಿರುಗೇಟು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಇದು 'ರಿಪಬ್ಲಿಕ್ ಆಫ್ ಕಾಂಗ್ರೆಸ್' ಆಗುತ್ತಿದೆ ಎಂಬ ಬಿಜೆಪಿಯ ಟೀಕೆಗೆ ಸಚಿವರು ಖಾರವಾಗಿ ಪ್ರತಿಕ್ರಿಯಿಸಿದರು. ಬಿಜೆಪಿಯವರ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಕಾಲದಲ್ಲಿ ಬೇರೆ ರೀತಿ ಇತ್ತು. ಈಗ ಕಾಂಗ್ರೆಸ್ ಏನು ಮಾಡಿದೆ ಅಂತ ಅವರು ಟೀಕಿಸುತ್ತಿದ್ದಾರೆ? ಸುಮ್ಮನೆ 'ರಿಪಬ್ಲಿಕ್ ಆಫ್ ಕಾಂಗ್ರೆಸ್' ಅಂದುಬಿಟ್ಟರೆ ಸಾಲದು, ಸತ್ಯಾಸತ್ಯತೆ ತಿಳಿಯಬೇಕು ಎಂದು ತಿರುಗೇಟು ನೀಡಿದರು.
ಜನಾರ್ದನ ರೆಡ್ಡಿ ಟಾರ್ಗೆಟ್ ವಿಚಾರ: ತನಿಖೆಗೆ ಆಗ್ರಹ
ಶಾಸಕ ಜನಾರ್ದನ ರೆಡ್ಡಿ ಅವರನ್ನೇ ಟಾರ್ಗೆಟ್ ಮಾಡಿ ಫೈರಿಂಗ್ ಮಾಡಲಾಗಿದೆ ಎಂಬ ಆರೋಪದ ಕುರಿತು ಉತ್ತರಿಸಿದ ಮಹದೇವಪ್ಪ, ಅವರನ್ನು ಟಾರ್ಗೆಟ್ ಮಾಡಿ ಫೈರಿಂಗ್ ಮಾಡಿದ್ದನ್ನು ನೋಡಿದವರು ಯಾರು? ಅವರು ಹೇಳಿಬಿಟ್ಟ ತಕ್ಷಣ ಅದು ನಿಜವಾಗಲು ಸಾಧ್ಯವೇ? ಪ್ರತಿಯೊಂದಕ್ಕೂ ತನಿಖೆ ನಡೆಯಬೇಕಾಗುತ್ತದೆ. ತನಿಖೆಯಾದ ನಂತರವಷ್ಟೇ ಎಲ್ಲೆಲ್ಲಿ ಲೋಪವಾಗಿದೆ ಎಂಬುದು ತಿಳಿಯಲಿದೆ. ತನಿಖೆಗೂ ಮುನ್ನವೇ ಆರೋಪ ಮಾಡುವುದು ಸರಿಯಲ್ಲ ಎಂದರು.
ಘಟನೆ ಹಿನ್ನೆಲೆ:
ಬಳ್ಳಾರಿಯಲ್ಲಿ ಹೊಸವರ್ಷದಂದು ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಭಾರಿ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಶಾಸಕ ಜನಾರ್ದನ ರೆಡ್ಡಿ ಅವರ ಮೇಲೆ ಹಲ್ಲೆ ಯತ್ನ ಹಾಗೂ ಫೈರಿಂಗ್ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಮಹದೇವಪ್ಪ ಅವರು ಸರ್ಕಾರದ ಪರವಾಗಿ ಸ್ಪಷ್ಟನೆ ನೀಡಿದ್ದಾರೆ.


