ಟಿಪ್ಪು ಸುಲ್ತಾನ್‌ಗೆ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಿಸಬೇಕು ಎನ್ನುವ ಯೋಚನೆ ಇತ್ತು ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.

ಬೆಂಗಳೂರು (ಆ.06): ಟಿಪ್ಪು ಸುಲ್ತಾನ್‌ಗೆ ಕಾವೇರಿ ನದಿಗೆ ಅಡ್ಡಲಾಗಿ ಡ್ಯಾಂ ಕಟ್ಟಿಸಬೇಕು ಎನ್ನುವ ಯೋಚನೆ ಇತ್ತು. ಆದರೆ, ಬಿಜೆಪಿಯವರಿಗೆ ಟಿಪ್ಪು ಸುಲ್ತಾನ್ ಮತ್ತು ಅಲ್ಪಸಂಖ್ಯಾತರ ವಿಚಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಬರೀ ಜಾತಿ ಭೇದ ತಂದಿಡುವ ಕೆಲಸವನ್ನಷ್ಟೇ ಅವರು ಮಾಡುತ್ತಾರೆ ಎಂದು ವಸತಿ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಆರ್‌ಎಸ್ ಜಲಾಶಯಕ್ಕೆ ಟಿಪ್ಪು ಹೆಸರಿಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕರು ನೀಡಿರುವ ಹೇಳಿಕೆ ಕುರಿತು ಮಂಗಳವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವರು, ಕಾವೇರಿ ನದಿಗೆ ಡ್ಯಾಂ ನಿರ್ಮಾಣವಾಗಬೇಕು ಎನ್ನುವ ಯೋಚನೆ ಟಿಪ್ಪುಗೆ ಇತ್ತು. ಆದರೆ, ಬಿಜೆಪಿಯವರಿಗೆ ಕೇವಲ ರಾಜಕೀಯ ಮಾಡುವುದು ಮಾತ್ರ ಗೊತ್ತು ಎಂದರು.

ಕೇಂದ್ರ ಸರ್ಕಾರ ಬಡವರಿಗಾಗಿ ಏನು ಅಭಿವೃದ್ಧಿ ಕೆಲಸ ಮಾಡಿದೆ? ಇತ್ತೀಚೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮುಸ್ಲಿಮರು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಡೆದೆವು ಎಂದು ದೊಡ್ಡದಾಗಿ ಹೇಳಿಕೆ ನೀಡಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡುವುದನ್ನು ತಡೆದರೆ ನಾವು ಮನೆಯಲ್ಲೇ ಮಾಡುತ್ತೇವೆ. ಅದನ್ನು ನಿಲ್ಲಿಸಲು ಹೇಳಿ ಎಂದು ಜಮೀರ್ ಸವಾಲು ಹಾಕಿದರು.

ಮತಗಳ್ಳತನ ಬಗ್ಗೆ ಪ್ರತಿಭಟನೆ ಮಾಡ್ತೇವೆ: ಮಹದೇವಪುರದಲ್ಲಿ ಯಾವುದೇ ಅಭಿವೃದ್ಧಿ ಮಾಡದಿದ್ದರೂ ಲೋಕಸಭೆ ಚುನಾವಣೆಯಲ್ಲಿ ಆ ಕ್ಷೇತ್ರದಿಂದ ಬಿಜೆಪಿಗೆ 1.20 ಮತಗಳ ಲೀಡ್ ಸಿಕ್ಕಿದೆ. ಅದು ಹೇಗೆ ಸಾಧ್ಯ? ಈ ಕುರಿತು ರಾಹುಲ್ ಗಾಂಧಿ ಅಧ್ಯಯನ ಮಾಡಿದ್ದಾರೆ. ಸರಿಯಾದ ಸಾಕ್ಷಿ ಇದೆ. ಹೀಗಾಗಿ, ಆ.8ರಂದು ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತೇವೆ. ಬಿಜೆಪಿಯವರು ಅದಕ್ಕೆ ಅಡ್ಡಿಮಾಡಲು ಯತ್ನಿಸುತ್ತಿದ್ದಾರೆ. ಆದರೆ, ನಮ್ಮ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಸಚಿವ ಜಮೀರ್ ತಿಳಿಸಿದರು.