ಸಂಪತ್‌ ತರೀಕೆರೆ

ಬೆಂಗಳೂರು [ಆ.25] :  ಭಾರಿ ಮಳೆ ಹಾಗೂ ನೆರೆ ಪರಿಸ್ಥಿತಿಯಿಂದಾಗಿ ರಾಜ್ಯದ ನದಿಗಳು ತುಂಬಿ ಹರಿದ ಪರಿಣಾ ಬೆಂಗಳೂರಿನಲ್ಲಿ ಎಂ. ಸ್ಯಾಂಡ್‌ಗೆ ಭಾರಿ ಬೇಡಿಕೆ ಉಂಟಾಗಿದೆ. ಪರಿಣಾಮ ಎಂ.ಸ್ಯಾಂಡ್‌ ದರ ಪ್ರತಿ ಟನ್‌ಗೆ 150ರಿಂದ 200 ರು. ವರೆಗೆ ಏರಿಕೆಯಾಗಿದೆ. ಹೀಗಾಗಿ ಈ ಹಿಂದೆ ಟನ್‌ಗೆ 600 ಇದ್ದ ಎಂ.ಸ್ಯಾಂಡ್‌ ದರ 800 ರು. ಗಳಿಗೆ ಜಿಗಿದಿದೆ.

ತೀವ್ರ ಮಳೆ ಮತ್ತು ನೆರೆಯಿಂದ ರಾಜ್ಯದ ನದಿಗಳು ತುಂಬಿ ಹರಿಯುತ್ತಿದ್ದು, ನದಿ ಮರಳು ತೆಗೆಯುವುದು ಸಂಪೂರ್ಣ ನಿಂತು ಹೋಗಿದೆ. ಜತೆಗೆ ಫಿಲ್ಟರ್‌ ಮರಳು ದಂಧೆಯ ಮೇಲೆ ಕಟ್ಟೆಚ್ಚರ ವಹಿಸಿ ಕಾನೂನು ಕ್ರಮಕೈಗೊಂಡಿರುವ ಹಿನ್ನೆಲೆಯಲ್ಲಿ ಫಿಲ್ಟರ್‌ ಮರಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಎಂ.ಸ್ಯಾಂಡ್‌ಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಮೂಲ ಸೌಕರ್ಯ ಕಾಮಗಾರಿಗಳ ಜತೆಗೆ ಕಾಂಕ್ರೀಟ್‌ ಕಟ್ಟಡಗಳ ನಿರ್ಮಾಣವೂ ಹೆಚ್ಚಾಗಿದ್ದು, ಎಂ.ಸ್ಯಾಂಡ್‌ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ರಾಜ್ಯದಲ್ಲಿ ವಾರ್ಷಿಕ 40ರಿಂದ 50 ಲಕ್ಷ ಮೆಟ್ರಿಕ್‌ ಟನ್‌ ಮರಳಿಗೆ ಬೇಡಿಕೆ ಇದ್ದು, ಸಿಲಿಕಾನ್‌ ಸಿಟಿ ಒಂದಕ್ಕೇ ಸುಮಾರು 8ರಿಂದ 10 ಲಕ್ಷ ಮೆಟ್ರಿಕ್‌ ಟನ್‌ ಮರಳು ಬೇಕಿದೆ. ಈ ಪೈಕಿ 5ರಿಂದ 6 ಲಕ್ಷ ಮೆಟ್ರಿಕ್‌ ಟನ್‌ನಷ್ಟುಬೇಡಿಕೆಯನ್ನು ಎಂ.ಸ್ಯಾಂಡ್‌(ಮ್ಯಾನುಫ್ಯಾಕ್ಚರ್‌) ಪೂರೈಸುತ್ತಿದೆ.

ಬೆಂಗಳೂರು ನಗರ ಜಿಲ್ಲೆ, ತುಮಕೂರು, ಗ್ರಾಮಾಂತರ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಎಂ.ಸ್ಯಾಂಡ್‌ ಬಳಕೆ ಹೆಚ್ಚಿದೆ. ಬೆಂಗಳೂರು ಜಿಲ್ಲೆಯೊಂದಕ್ಕೆ ಪ್ರತಿ ತಿಂಗಳು 60ರಿಂದ 65 ಸಾವಿರ ಮೆಟ್ರಿಕ್‌ ಟನ್‌ ಎಂ.ಸ್ಯಾಂಡ್‌ಗೆ ಬೇಡಿಕೆ ಇದೆ. ವಾರ್ಷಿಕ 5ರಿಂದ 6 ಲಕ್ಷ ಮೆಟ್ರಿಕ್‌ ಟನ್‌ ಎಂ.ಸ್ಯಾಂಡ್‌ ಅಗತ್ಯವಿದೆ. ಕಳೆದೆರಡು ವರ್ಷಗಳಿಂದ ಪ್ರತಿ ಟನ್‌ ಎಂ.ಸ್ಯಾಂಡ್‌ಗೆ 500ರಿಂದ 600ರು.ಗಳಷ್ಟಿತ್ತು. ಇದೀಗ ಡೀಸೆಲ್‌ ದರ ಏರಿಕೆ, ನೈಸರ್ಗಿಕ ಮರಳಿನ ಕೊರತೆ, ಫಿಲ್ಟರ್‌ ಮರಳಿನ ಅಲಭ್ಯತೆ ಹಾಗೂ ಗುಣಮಟ್ಟವಲ್ಲದ ಮಲೇಷ್ಯಾ ಮರಳನ್ನುಕೇಳುವವರು ಗತಿ ಇಲ್ಲದ ಪರಿಣಾಮ ಎಂ.ಸ್ಯಾಂಡ್‌ ಬೆಲೆಯಲ್ಲಿ ಏರಿಕೆಯಾಗಿದೆ.

ಇದೀಗ ಪ್ರತಿ ಮೆಟ್ರಿಕ್‌ ಟನ್‌ ಎಂ.ಸ್ಯಾಂಡ್‌ ಬೆಲೆ 700ರಿಂದ 800 ರು.ಗಳಾಗಿದ್ದು, ಕೆಲವೊಮ್ಮೆ 850 ರು.ಗಳಿಗೂ ಮಾರಾಟ ಮಾಡಲಾಗುತ್ತಿದೆ. ಹೆಚ್ಚು ಎಂ.ಸ್ಯಾಂಡ್‌ ಖರೀದಿ ಮಾಡಿದಾಗ ಒಂದಷ್ಟುರಿಯಾಯಿತಿ ಸಿಗುತ್ತದೆ. ಆದರೆ ಸಾರಿಗೆ ದುಬಾರಿಯಾಗಿದೆ. ಈ ಹಿಂದೆ ಸಾರಿಗೆ ಖರ್ಚು ಸೇರಿ ಕೇವಲ 650ರಿಂದ 700 ರು.ಖರ್ಚಾಗುತ್ತಿತ್ತು. ಈಗ ಕಟ್ಟಡ ನಿರ್ಮಾಣ ಮಾಡುವ ಮಾಲಿಕ ಅಥವಾ ಗುತ್ತಿಗೆದಾರನಿಗೆ ಒಂದು ಟನ್‌ ಎಂ.ಸ್ಯಾಂಡ್‌ ಸಾಗಿಸಲು ಬರೋಬ್ಬರಿ 900ರಿಂದ 1000 ರು.  ಖರ್ಚಾಗುತ್ತಿದೆ ಎನ್ನುತ್ತಾರೆ ಕಟ್ಟಡ ನಿರ್ಮಾಣ ಗುತ್ತಿಗೆದಾರ ಕುಮರನ್‌.

 ನಗರದಲ್ಲಿ ರಾಜಧನ ಹೆಚ್ಚು: ಮಾಲಿಕರಿಗೆ ನಷ್ಟ

ಖಾಸಗಿ ನಿರ್ಮಾಣ ಕಾಮಗಾರಿ ಮಾತ್ರವಲ್ಲ ಸರ್ಕಾರದ ನಾನಾ ಇಲಾಖೆಗಳು ಕೈಗೊಳ್ಳುವ ಸಿವಿಲ್‌ ಕಾಮಗಾರಿಗಳಲ್ಲಿ ಶೇ.50ರಷ್ಟುಕೆಲಸಗಳಿಗೆ ಎಂ.ಸ್ಯಾಂಡ್‌ ಬಳಕೆ ಮಾಡಲಾಗುತ್ತಿತ್ತು. ಆದರೆ ಕಳೆದ ಮೈತ್ರಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯಲಿಲ್ಲ. ಈಗ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಯಾವುದೇ ಕಾಮಗಾರಿ ಆರಂಭಿಸಿಲ್ಲ. ಬಿಬಿಎಂಪಿ ಅಕ್ರಮ- ಸಕ್ರಮ ಯೋಜನೆ ಇನ್ನೂ ಜಾರಿಯಾಗಿಲ್ಲ. ಹೀಗಾಗಿ ಬ್ಯಾಂಕ್‌ಗಳಲ್ಲಿ ಸಾಲ ಸಿಗುತ್ತಿಲ್ಲ. ಇದರಿಂದಾಗಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಹೆಚ್ಚಾಗಿ ನಡೆಯುತ್ತಿಲ್ಲ. ಅಲ್ಲಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಆಗುತ್ತಿವೆ. ಆದರೆ ಸಾರಿಗೆ ವೆಚ್ಚವೇ ಜಾಸ್ತಿಯಾಗುತ್ತಿದ್ದು, ಎಂ.ಸ್ಯಾಂಡ್‌ಗೆ ಲಾಭವಾಗುತ್ತಿಲ್ಲ. ಪ್ರಸ್ತುತ 700ರಿಂದ 800 ರು. ಗಳಿಗೆ ಪ್ರತಿ ಟನ್‌ ಎಂ.ಸ್ಯಾಂಡ್‌ ಮಾರಾಟ ಮಾಡಲಾಗುತ್ತಿದೆ.

ಮಳೆಗಾಲದ ಹಿನ್ನೆಲೆ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯದ ಕಾರಣ ಎಂ.ಸ್ಯಾಂಡ್‌ ಮಾರಾಟ ಕಡಿಮೆಯಾಗಿದೆ. ಮುಖ್ಯವಾಗಿ ಹೊಸೂರಿನಿಂದ ಸಾವಿರಾರು ಮೆಟ್ರಿಕ್‌ ಟನ್‌ ಎಂ.ಸ್ಯಾಂಡ್‌ ಬರುತ್ತಿದ್ದು, ಸ್ಥಳೀಯ ಮಾರುಕಟ್ಟೆಗಿಂತ ಸುಮಾರು 150ರಿಂದ 200 ರು.ಗಳಷ್ಟುಕಡಿಮೆ ಬೆಲೆಗೆ ಎಂ.ಸ್ಯಾಂಡ್‌ ಮಾರಾಟ ಮಾಡಲಾಗುತ್ತಿದೆ. ಅಲ್ಲಿ ಕೇವಲ 30 ರು. ರಾಜಧನವಿದ್ದು, ಇಲ್ಲಿ 100 ರು. ಇದೆ. ಹೊರಗಿನಿಂದ ಬರುವ ಎಂ-ಸ್ಯಾಂಡ್‌ಗೆ ಇಲ್ಲಿ ರಾಜಧನ ವಿಧಿಸುವುದಿಲ್ಲ. ಇದರಿಂದ ಸ್ಥಳೀಯ ಕ್ರಷರ್‌ ಮಾಲಿಕರಿಗೆ ನಷ್ಟಉಂಟು ಮಾಡುತ್ತಿದೆ ಎಂದು ಕರ್ನಾಟಕ ಫೆಡರೇಷನ್ಸ್‌ ಕ್ವಾರಿ ಓನ​ರ್‍ಸ್ ಆ್ಯಂಡ್‌ ಸ್ಟೋನ್‌ ಕ್ರಷರ್‌ ಅಸೋಷಿಯೇಷನ್‌ ಉಪಾಧ್ಯಕ್ಷ ಡಿ.ಸಿದ್ದರಾಜು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಪೂರೈಕೆ ಕಡಿಮೆ :  ಚಿಕ್ಕಬಳ್ಳಾಪುರದಲ್ಲಿ 85 ಎಂ.ಸ್ಯಾಂಡ್‌ ಘಟಕಗಳು, ಕೋಲಾರದಲ್ಲಿ 18, ಬಿಡದಿಯಲ್ಲಿ 36, ದೊಡ್ಡ ಆಲದ ಮರದ ಬಳಿ 60 ಎಂ.ಸ್ಯಾಂಡ್‌ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಲಕ್ಷಾಂತರ ಮೆಟ್ರಿಕ್‌ ಟನ್‌ ಎಂ.ಸ್ಯಾಂಡ್‌ ಈ ಘಟಕಗಳಲ್ಲಿ ದಾಸ್ತಾನು ಮಾಡಲಾಗಿದೆ. ಸರ್ಕಾರ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಿ ದಾಸ್ತಾನು ಇರುವ ಎಂ.ಸ್ಯಾಂಡ್‌ ಖರೀದಿಸುವ ಅಗತ್ಯತೆ ಇದೆ. ಪ್ರಸ್ತುತ ರಾಜ್ಯದಲ್ಲಿ 6.50 ಲಕ್ಷ ಮೆಟ್ರಿಕ್‌ ಟನ್‌ ಬೇಡಿಕೆ ಇದ್ದು, ಕೇವಲ 3.25 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ಮಾಡಲಾಗುತ್ತಿದೆ. ಹೀಗಾಗಿ ಕ್ರಷರ್‌ ಹೊಂದಿರುವ ಎಲ್ಲರಿಗೂ ಎಂ.ಸ್ಯಾಂಡ್‌ ಉತ್ಪಾದನೆಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ಫೆಡರೇಷನ್ಸ್‌ ಕ್ವಾರಿ ಓನ​ರ್‍ಸ್ ಆ್ಯಂಡ್‌ ಸ್ಟೋನ್‌ ಕ್ರಷರ್‌ ಅಸೋಷಿಯೇಷನ್‌ ಅಧ್ಯಕ್ಷ ಸಂಜೀವ ಹಟ್ಟಿಹೊಳಿ ಮನವಿ ಮಾಡಿದ್ದಾರೆ.