ಮಂಡ್ಯದಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 2.71 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ, 70 ದುಬಾರಿ ಮದ್ಯದ ಬಾಟಲಿಗಳು ಹಾಗೂ ಸರ್ಕಾರಿ ಹಾಸ್ಟೆಲ್ ಸಾಮಗ್ರಿಗಳು ಪತ್ತೆಯಾಗಿವೆ.

ಮಂಡ್ಯ (ಸೆ.23): ರಾಜ್ಯಾದ್ಯಂತ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಿವೃತ್ತ ಹಾಸ್ಟೆಲ್‌ ಅಧೀಕ್ಷಕರ ಶಿವರಾಜು ಅವರ ಬಳಿ ದುಬಾರಿ ಬೆಲೆಯ 70 ಮದ್ಯದ ಬಾಟಲಿಗಳ ದಾಸ್ತಾನು ಪತ್ತೆಯಾಗಿದೆ.

ಪಟ್ಟಣದ ಕೊಲ್ಲಿ ವೃತ್ತದ ಬಳಿಯ ವಿನಾಯಕ ಬಡಾವಣೆಯ ಮನೆ ಹಾಗೂ ತಾಲೂಕಿನ ಹೂತಗೆರೆಯಲ್ಲಿರುವ ಫಾರ್ಮ್‌ಹೌಸ್‌ ಸೇರಿದಂತೆ ಒಟ್ಟು 2 ಪ್ರಮುಖ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರು ರು. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳು ಪತ್ತೆಯಾಗಿದೆ.

ಫಾರ್ಮ್‌ಹೌಸಲ್ಲಿ ಮಿನಿ ಬಾರ್‌:

ದಾಳಿ ವೇಳೆ ಶಿವರಾಜು ಫಾರ್ಮ್‌ಹೌಸ್‌ನಲ್ಲಿ ದುಬಾರಿ ಬೆಲೆಯ 70 ಮದ್ಯದ ಬಾಟಲಿಗಳ ದಾಸ್ತಾನು ಪತ್ತೆಯಾಗಿದೆ. ಅದಕ್ಕಾಗಿ ಮಿನಿ ಬಾರ್‌ ಮಾಡಿಕೊಂಡಿದ್ದರು. ಜೊತೆಗೆ ಹಾಸ್ಟೆಲ್‌ಗೆ ಕೊಡಬೇಕಿದ್ದ ಸರ್ಕಾರಿ ಪುಸ್ತಕಗಳು, ಬೆಡ್‌ಶೀಟ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನು ಶಿವರಾಜು ತಮ್ಮ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

ಎಂ.ಶಿವರಾಜು, ಹಾಸ್ಟೆಲ್‌ ಸೂಪರಿಂಡೆಂಟ್‌, ಬಿಎಂಸಿ ಹಾಸ್ಟೆಲ್ ನಿವೃತ್ತ ವಾರ್ಡನ್ ಆಗಿರುವ ಶಿವರಾಜ್ ಅವರ ಮನೆ ಹಾಗೂ ಫಾರ್ಮ್‌ ಹೌಸ್‌ ಸೇರಿ 2 ಕಡೆ ದಾಳಿ ಮಾಡಲಾಗಿತ್ತು.ಈ ವೇಳೆ 5 ನಿವೇಶನ, 2 ವಾಸದ ಮನೆ, 2 ವಾಣಿಜ್ಯ ಮಳಿಗೆ, 1 ಫಾರ್ಮ್‌ ಹೌಸ್‌, ₹4.10 ಲಕ್ಷ ಮೌಲ್ಯದ ಕೃಷಿ ಜಮೀನು, ₹2.5 ಲಕ್ಷ ನಗದು, ₹33.80 ಲಕ್ಷ ಮೌಲ್ಯದ ಚಿನ್ನಾಭರಣ, ₹15 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು ₹2.71 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.