ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ 17 ಕೆಜಿ ತೂಕದ ಬೃಹತ್ ಗಾತ್ರದ ಅಪರೂಪದ ಮುಡಾವು ಮೀನು ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಇನ್ನೊಂದೆಡೆ, ಯಲ್ಲಾಪುರದಲ್ಲಿ ಮೀನು ಮಾರುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಬೈಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಗಾತ್ರದ ಮುಡಾವು ಮೀನು ಮೀನುಗಾರರು ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ. ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಈ ಅಪರೂಪದ ಗಾತ್ರದ ಮುಡಾವು ಮೀನು ಸಿಕ್ಕಿದೆ. ಬರೋಬ್ಬರಿ 17 ಕೆಜಿ ತೂಕ ಹೊಂದಿತ್ತು. ಈ ಮುಡಾವು ಮೀನನ್ನು ಕೆಜಿಗೆ 500 ರು.ಯಂತೆ 8,500 ರು.ಗೆ ಮಾರಾಟ ಮಾಡಲಾಗಿದ್ದು, ಬೃಹತ್ ಗಾತ್ರದ ಮೀನು ಬಂದರಿಗೆ ಬರುತ್ತಿದ್ದಂತೆ ಅದನ್ನು ನೋಡಲು ಮೀನುಗಾರರು ಹಾಗೂ ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿದ್ದರು. ಸಾಮಾನ್ಯ ಮುಡಾವು ಮೀನಿಗಿಂತ ಈ ಮೀನು ವಿಭಿನ್ನವಾಗಿತ್ತು.

ಮಹಿಳೆಯೊಂದಿಗೆ ಅನುಚಿತ ವರ್ತನೆ: ಬೈಂದೂರು ಮುಖ್ಯಾಧಿಕಾರಿಗೆ ಗೂಸ

ಯಲ್ಲಾಪುರ: ಮೀನು ಮಾರುತ್ತಿದ್ದ ಮಹಿಳೆಯೊಬ್ಬರ ಬಳಿ ಅನುಚಿತವಾಗಿ ನಡೆದುಕೊಂಡ ಆರೋಪದ ಮೇಲೆ ಉಡುಪಿ ಜಿಲ್ಲೆಯ ಬೈಂದೂರಿನ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಅಜಯ್‌ ಗಣೇಶ ಭಂಡಾರ್ಕರ್‌ ಎಂಬುವರಿಗೆ ಸಾರ್ವಜನಿಕರು ಥಳಿಸಿರುವ ಘಟನೆಯು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ ಮಾಗೋಡು ಕ್ರಾಸ್‌ ಬಳಿ ಸೋಮವಾರ ನಡೆದಿದೆ.

ಮಾಗೋಡು ಕ್ರಾಸ್ ಬಳಿ ಕೆಲವರು ಮೀನು ಹಾಗೂ ತರಕಾರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿರುವ ಅಜಯ ಗಣೇಶ ಭಂಡಾರ್ಕರ್ ಮದ್ಯ ಸೇವಿಸಿ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಮೀನು ಮಾರುತ್ತಿದ್ದ ಮಹಿಳೆಯ ಬಳಿ ಉಚಿತವಾಗಿ ಮೀನು ನೀಡುವಂತೆ ಒತ್ತಾಯಿಸಿದ್ದು, ಮೀನು ನೀಡದ ಹಿನ್ನೆಲೆ ಬುಟ್ಟಿಯಲ್ಲಿದ್ದ ಮೀನುಗಳನ್ನು ಚೆಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ, ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳೆಯೊಂದಿಗೂ ಅಸಭ್ಯವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ಅಜಯ ಗಣೇಶ ಭಂಡಾರ್ಕರ್‌ ಅವರನ್ನು ಪ್ರಶ್ನಿಸಿದ್ದು, ಮಾತಿನ ಸಂದರ್ಭದಲ್ಲಿ ಇಲ್ಲಿ ಮೀನು ಮಾರಾಟ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಮಾತಿನ ಚಕಮಕಿ ಮುಂದುವರಿದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಅವರು ಕೈ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅಜಯ ಗಣೇಶ ಭಂಡಾರ್ಕರರನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಅವರನ್ನು ಬಿಡಿಸಲು ಬಂದಿದ್ದ ಸ್ನೇಹಿತನಿಗೂ ಸಾರ್ವಜನಿಕರಿಂದ ಏಟು ಬಿದ್ದಿವೆ.

ಘಟನೆಯ ದೃಶ್ಯಾವಳಿಗಳು ಸ್ಥಳದಲ್ಲಿದ್ದ ಕೆಲವರ ಮೊಬೈಲ್‌ಗಳಲ್ಲಿ ಸೆರೆಯಾಗಿವೆ. ಘಟನೆಯ ಬಳಿಕ ಸಂತ್ರಸ್ತರು ಪೊಲೀಸರ ಮೊರೆ ಹೋಗಿ, ಪ್ರಕರಣ ದಾಖಲಿಸಿದ್ದಾರೆ. ವಿಚಾರಣೆ ಮುಂದುವರಿದಿದೆ.