Vijayapura: ತವರು ಜಿಲ್ಲೆಗೆ ಭೇಟಿ ನೀಡಿದ ಲೋಕಾಯುಕ್ತ ಬಿ.ಎಸ್.ಪಾಟೀಲ್!
ಲೋಕಾಯುಕ್ತರಾದ ಬಳಿಕ ಬಿ.ಎಸ್.ಪಾಟೀಲ ಅವರು ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಯಾದ ವಿಜಯಪುರ ಜಿಲ್ಲೆಯ ಪ್ರವಾಸ ಕೈಗೊಂಡು ಜೂನ್ 24ರಂದು ನಗರದ ಕರ್ನಾಟಕ ಲೋಕಾಯುಕ್ತ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿದರು.
ವಿಜಯಪುರ (ಜೂ.25): ಲೋಕಾಯುಕ್ತರಾದ ಬಳಿಕ ಬಿ.ಎಸ್.ಪಾಟೀಲ ಅವರು ಮೊದಲ ಬಾರಿಗೆ ತಮ್ಮ ತವರು ಜಿಲ್ಲೆಯಾದ ವಿಜಯಪುರ ಜಿಲ್ಲೆಯ ಪ್ರವಾಸ ಕೈಗೊಂಡು ಜೂನ್ 24ರಂದು ನಗರದ ಕರ್ನಾಟಕ ಲೋಕಾಯುಕ್ತ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿದರು.
ವಿಜಯಪುರ-ಬಾಗಲಕೋಟೆ ಲೋಕಾಯುಕ್ತ ಅಧಿಕಾರಿಗಳ ಜೊತೆಗೆ ಸಭೆ: ಲೋಕಾಯುಕ್ತ ವಿಜಯಪುರ ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಆವರಣದಲ್ಲಿ ಸಸಿ ನೆಡಿಸಿ ಬಳಿಕ, ಲೋಕಾಯುಕ್ತ ವಿಜಯಪುರ ಕಚೇರಿಯ ಅಧೀಕ್ಷಕರಾದ ಅನಿತಾ ಹದ್ದನ್ನವರ, ಲೋಕಾಯುಕ್ತದ ವಿಜಯಪುರ ಉಪ ಅಧೀಕ್ಷಕರಾದ ಅರುಣ ನಾಯಕ, ಬಾಗಲಕೋಟೆಯ ಶಂಕರ ರಾಗಿ ಅವರ ಸಮ್ಮುಖದಲ್ಲಿ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾನಾ ವಿಷಯಗಳನ್ನು ಚರ್ಚಿಸಿದರು.
ಈ ವೇಳೆ ಮಾತನಾಡಿದ ಲೋಕಾಯುಕ್ತರು, ಯಾವ ಕಚೇರಿಗೆ ಹೋದರೂ, ಯಾರನ್ನೇ ಭೇಟಿ ಮಾಡಿದರು ಸಹ ಏನೂ ಆಗುವುದಿಲ್ಲ ಎನ್ನುವ ಮನೋಭಾವ ಸಾರ್ವಜನಿಕರಲ್ಲಿ ಬೇರೂರಿದೆ. ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆ ಆಲಿಸುವ ವೇಳೆಯಲ್ಲಿ ಜನರ ಸಮಸ್ಯೆ ಏನು ಎಂಬುದರ ಬಗ್ಗೆ ಆಪ್ತವಾಗಿ ಅವರೊಂದಿಗೆ ಮಾತನಾಡಿದಲ್ಲಿ ನಿರುತ್ಸಾಹಗೊಂಡ ಜನರಲ್ಲಿ ವಿಶ್ವಾಸವು ಮೂಡುತ್ತದೆ ಎಂದು ತಿಳಿಸಿದರು.
Vijayapura: ರಾಷ್ಟ್ರ ಮಟ್ಟದಲ್ಲಿ ಮುಸ್ಲಿಂ ಯುವಕನ ಯೋಗ ಸಾಧನೆ..!
ಮಾಧ್ಯಮಗಳ ಸುದ್ದಿ ಲಗತ್ತಿಸಿ ದೂರು ಬಂದಲ್ಲಿ ಕ್ರಮಕೈಗೊಳ್ಳಿ: ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿದ ಬಳಿಕ ಸಭಾ ನಡಾವಳಿ ಸಿದ್ಧಪಡಿಸಿ ಕಳುಹಿಸಬೇಕು. ದೂರು ಆಧರಿಸಿ ಭೇಟಿ ನೀಡಿದಾಗ ಅಲ್ಲಿನ ದುರಾವಸ್ಥೆಯ ಬಗ್ಗೆ ಸಮಗ್ರ ವಿವರ ಸಿದ್ಧಪಡಿಸಿ, ಪತ್ರಿಕಾ ತುಣುಕುಗಳನ್ನು ಲಗತ್ತಿಸಿ ಇಂತಲ್ಲಿ ಈ ರೀತಿ ಅವ್ಯವಸ್ಥೆ ಇದೆ ಎಂದು ಪತ್ರ ಕಳುಹಿಸಿದರೆ ಆ ಬಗ್ಗೆ ನಾವು ಪರಿಶೀಲಿಸಿ ದೂರು ದಾಖಲಿಸಿಕೊಂಡು ರಾಜ್ಯಮಟ್ಟದಲ್ಲಿ ನಿರ್ವಹಣೆ ಮಾಡುತ್ತೇವೆ ಎಂದರು.
ಸಾರ್ವಜನಿಕ ದೂರು ದುಮ್ಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ರೂಪಿಸುವ ದೂರು ನಿರ್ವಹಣೆಯ ವ್ಯವಸ್ಥೆಯು ಇತರ ಜಿಲ್ಲೆಗಳಿಗೆ ಮಾದರಿಯಾಗುವಂತಿರಬೇಕು. ಈ ನಿಟ್ಟಿನಲ್ಲಿ ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತರು ಸಲಹೆ ನೀಡಿದರು. ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಾರೆ ಎನ್ನುವ ಆರೋಪ ಬರದಂತೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಲೋಕಾಯುಕ್ತರು, ಲೋಕಾಯುಕ್ತ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವ ಸಂದೇಶ ಸಮಾಜಕ್ಕೆ ಹೋಗುವ ಹಾಗೆ ಕಾರ್ಯ ನಿರ್ವಹಿಸಬೇಕು ಎಂದರು.
ಕುಂದುಕೊರತೆ ಸಭೆ ನಡೆಸಲು ಲೋಕಾ ಅಧಿಕಾರಿಗಳಿಗೆ ಸಲಹೆ: ನಾನಾ ತೊಂದರೆಗಳಿಗೆ ಸಿಲುಕಿದ ನೊಂದ ಜನತೆ ದೂರು ಹೊತ್ತು ಬರುವ ಹಾಗೆ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸುವ ಮುನ್ನ ಸಾಕಷ್ಟು ಪ್ರಚಾರ ನಡೆಸಬೇಕು. ತಾಲೂಕುವಾರು ಕಡ್ಡಾಯ ವಹಿ ಮಾಡಿ, ಅದರಲ್ಲಿ ದಾಖಲಾದ ದೂರುಗಳು, ವಿಲೇವಾರಿ, ಬಾಕಿ ಉಳಿದ ವಿವರಗಳನ್ನು ದಾಖಲಿಸಬೇಕು. ಕಚೇರಿಗಳಿಗೆ ಭೇಟಿ ನೀಡಿದಾಗ ಕಡತಗಳ ವಿಲೇವಾರಿಯ ಬಗ್ಗೆ ಪರಿಶೀಲಿಸಬೇಕು. ಕಡತಗಳು ಎಷ್ಟು ಇವೆ? ಎಷ್ಟು ವಿಲೇ ಆಗಿವೆ? ಬಾಕಿ ಎಷ್ಟು ಇವೆ? ಕಡತಗಳು ಬಾಕಿ ಇದ್ದರೆ ಯಾವ ಕಾರಣಕ್ಕೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು. ಸಕಾರಣವಿರದೇ ಕಡತಗಳನ್ನು ವಿಲೇವಾರಿ ಮಾಡದೇ ಹಾಗೆ ಇಟ್ಟಿದ್ದರೆ ಆ ಬಗ್ಗೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಹಳ್ಳಿಗಳತ್ತಲೂ ಗಮನ ಹರಿಸಿ: ತಾಲೂಕು ಕೇಂದ್ರಗಳ ಪ್ರವಾಸ ಸಂದರ್ಭದಲ್ಲಿ ಆಯಾ ಕಡೆಗೆ ಹಳ್ಳಿಗಳಿಗೂ ಭೇಟಿ ಮಾಡಿ, ಶಾಲೆ, ಅಂಗನವಾಡಿ, ರೈತ ಸಂಪರ್ಕ ಕೇಂದ್ರ, ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲಿಸಿ ಅಲ್ಲಿನ ವಸ್ತುಸ್ಥಿತಿಯ ಬಗ್ಗೆ ವರದಿ ಸಿದ್ದಪಡಿಸಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ತಪ್ಪುಗಳು ಕಂಡುಬಂದಲ್ಲಿ ಮುಲಾಜಿಲ್ಲದೇ ಪ್ರಕರಣ ದಾಖಲಿಸಬೇಕು. ಅತಿ ಹೆಚ್ಚು ಫಲಾನುಭವಿಗಳು ಇರುವ, ಸಾರ್ವಜನಿಕರು ಹೆಚ್ಚು ಭೇಟಿ ನೀಡುವ ಆರ್‌ಟಿಓ, ಸಬ್ ರಜಿಸ್ಟರ್, ತಹಸೀಲ್ದಾರ ಕಚೇರಿ, ಮಹಾನಗರ ಪಾಲಿಕೆ, ಕೃಷಿ, ಆಸ್ಪತ್ರೆಗಳಲ್ಲಿ ಏನಾದರು ಲೋಪಗಳು ಇರುವ ಬಗ್ಗೆ ದೂರುಗಳು ಕಂಡು ಬಂದಲ್ಲಿ ಅದನ್ನು ಗುರುತಿಸಿ ಮುಂದಿನ ಕ್ರಮ ಎಂದು ತಿಳಿಸಿದರು.
ಗ್ರಾಮದ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಮೀನು ದಾನ ನೀಡಿದ ದಂಪತಿ..!
ಆಸ್ಪತ್ರೆಗಳ ಮೇಲೆ ನಿಗಾವಹಿಸಿ: ಕೆಲವು ಖಾಸಗಿ ಆಸ್ಪತ್ರೆಗಳು ಹಣ ಸುಲಿಗೆ ಮಾಡುತ್ತವೆ. ಇದು ತಪ್ಪಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಇಂದಿನ ಅತೀ ಜರೂರು ಆಗಿದೆ. ಔಷಧಿ ವಿತರಣೆ ಸೇರಿದಂತೆ ಇನ್ನೀತರ ವ್ಯವಸ್ಥೆಯ ಬಗ್ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವ ನಿಯಮ ಅನುಸರಿಸುತ್ತಾರೆ ಎಂಬುದರ ಬಗ್ಗೆ ಕೂಡ ನಿಗಾ ವಹಿಸಬೇಕು ಎಂದರು. ಸಭೆಯಲ್ಲಿ ಲೋಕಾಯುಕ್ತದ ವಿಜಯಪುರ ಜಿಲ್ಲೆಯ ಪೊಲೀಸ್ ನಿರೀಕ್ಷಕರಾದ ಆನಂದ ಟಕ್ಕನ್ನವರ, ಗುರುನಾಥ ಚವ್ಹಾಣ್, ಬಾಗಲಕೋಟೆ ಜಿಲ್ಲೆಯ ಮಹೇಂದ್ರ ನಾಯಕ, ಎಂ.ಎಚ್.ಬಿದರಿ ಹಾಗೂ ಇತರರು ಇದ್ದರು.