Asianet Suvarna News Asianet Suvarna News

Wildlife: ನೀರು-ಆಹಾರ ಅರಸಿ ನಾಡಿಗೆ ಬಂದು ಮೃತಪಡುತ್ತಿರುವ ಕಾಡುಪ್ರಾಣಿಗಳು!

ಉರಿ ಬಿಸಿಲಿನ ತಾಪಮಾನದಿಂದ ಅರಣ್ಯ ಪ್ರದೇಶದ ಜಲಾಶಯ, ಕೆರೆ, ಹಳ್ಳ ಗುಂಡಿಗಳೆಲ್ಲ ಬತ್ತಿ ಹೋಗಿದ್ದು, ಕಾಡು ಪ್ರಾಣಿಗಳು ನೀರಡಿಕೆ ದಾಹ ತೀರಿಸಿಕೊಳ್ಳಲು ನೀರು ಮತ್ತು ಆಹಾರ ಅರಸಿ ನಾಡಿಗೆ ಬಂದು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

Lack of rain wild animals dies in mundagodu at uttara kannada district rav
Author
First Published May 25, 2023, 11:03 AM IST

ಸಂತೋಷ ದೈವಜ್ಞ

ಮುಂಡಗೋಡ (ಮೇ.25) : ಉರಿ ಬಿಸಿಲಿನ ತಾಪಮಾನದಿಂದ ಅರಣ್ಯ ಪ್ರದೇಶದ ಜಲಾಶಯ, ಕೆರೆ, ಹಳ್ಳ ಗುಂಡಿಗಳೆಲ್ಲ ಬತ್ತಿ ಹೋಗಿದ್ದು, ಕಾಡು ಪ್ರಾಣಿಗಳು ನೀರಡಿಕೆ ದಾಹ ತೀರಿಸಿಕೊಳ್ಳಲು ನೀರು ಮತ್ತು ಆಹಾರ ಅರಸಿ ನಾಡಿಗೆ ಬಂದು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ತಾಲೂಕಿನ ಬಹುತೇಕ ಭಾಗ ಅರಣ್ಯದಿಂದ ಕೂಡಿದ್ದು, ಇಲ್ಲಿ ಜಿಂಕೆ, ಸಾರಂಗಗಳು, ಕರಡಿ, ಕಾಡು ಹಂದಿ, ನರಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ವನ್ಯ ಜೀವಿಗಳು ವಾಸಿಸುತ್ತವೆ. ಈ ಹಿಂದೆ ಕಾಡುಗಳ್ಳ ಬೇಟೆಗಾರರ ಕೈಗೆ ಸಿಕ್ಕು ಮಾತ್ರ ಬಲಿಯಾಗುತ್ತಿದ್ದ ಪ್ರಾಣಿಗಳೀಗ ನೀರಿನ ದಾಹ ತಣಿಸಿಕೊಳ್ಳಲು ನಾಡಿಗೆ ಬಂದು ತಾವೇ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.

ಬೇಸಿಗೆ ರಜೆಯಲ್ಲಿ ಮಕ್ಕಳ ಜಗಳ ಬಿಡಿಸಿ ಸುಸ್ತಾಗಿದ್ಯಾ... ಹಾಗಿದ್ರೆ ಈ ವಿಡಿಯೋ ನೋಡಿ

ಪ್ರಸಕ್ತ ಸಾಲಿನಲ್ಲಿ ಸಮರ್ಪಕ ಮಳೆಯಾಗದೇ ಇರುವುದರಿಂದ ಜಲಾಶಯ, ಕೆರೆ ಕಟ್ಟೆಗಳು ಸೇರಿದಂತೆ ಹಳ್ಳ ಕೊಳ್ಳಗಳು ಕೂಡ ನೀರಿಲ್ಲದೆ ಬರಡು ಗುಂಡಿಯಂತೆ ಆಗಿರುವುದರಿಂದ ಕಾಡು ಪ್ರಾಣಿಗಳೆಲ್ಲ ನೀರಡಿಕೆ ದಾಹವನ್ನು ತಣಿಸಿಕೊಳ್ಳಲು ಕಾಡಿನಿಂದ ನಾಡಿನತ್ತ ಲಗ್ಗೆ ಇಡುತ್ತಿವೆ. ಆದರೆ ಇದರಿಂದ ಪ್ರಾಣಿಗಳಿಗೆ ಕುಡಿಯಲು ನೀರು ಸಿಗದೇ ಹೋದರೂ ಸಾವು ಮಾತ್ರ ಸಿಗುತ್ತಿದೆ!

ಇನ್ನುಳಿದ ದಿನಗಳಲ್ಲಿ ಹಸಿರಿನಿಂದ ಕಂಗೊಳಿಸುವ ಕಾಡು ಈಗ ಬಿಸಿಲಿನ ರಭಸಕ್ಕೆ ಸಂಪೂರ್ಣ ಒಣಗಿ ಹೋಗಿದ್ದು, ರಣ ರಣ ಎನ್ನುತ್ತಿದೆ. ತಂಗಲು ನೆರಳು ಕೂಡ ಸಿಗದೆ ರಣ ಬಿಸಿಲಿನ ಕಾವಿನಿಂದ ಕಂಗೆಟ್ಟು ಹೋಗಿರುವ ಪ್ರಾಣಿಗಳು ನೀರನ್ನು ಅರಸಿ ಅರಣ್ಯದ ಅಂಚಿನ ಗ್ರಾಮಗಳಿಗೆ ಪ್ರವೇಶ ಮಾಡುತ್ತಿವೆ. ಈ ಸಂದರ್ಭದಲ್ಲಿ ಗ್ರಾಮದ ಬೀದಿ ನಾಯಿಗಳು ಇವುಗಳನ್ನು ಬೆನ್ನಟ್ಟಿಕಚ್ಚಿ ಗಾಯಗೊಳಿಸುತ್ತಿದೆ. ಇದರಿಂದ ಜಿಂಕೆಗಳು ಹೃದಯಾಘಾತಗೊಂಡು ಸಾವನ್ನಪ್ಪುತ್ತವೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಸಾಕಷ್ಟುಜಿಂಕೆ, ಸಾರಂಗಗಳು ಸಾವನ್ನಪ್ಪಿರುವ ವರದಿಯಾಗಿದೆ.

ಆತಂಕ:

ಬೇಸಿಗೆ ಪ್ರಾರಂಭವಾದಾಗಿನಿಂದ ತಾಲೂಕಿನ ಬಹುತೇಕ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆಗೆ ಸಾಕಷ್ಟುಪ್ರಮಾಣದ ಅರಣ್ಯ ನಾಶವಾಗಿದೆ. ಆಗಾಗ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಭಯಭೀತಗೊಳ್ಳುವ ಕಾಡು ಪ್ರಾಣಿಗಳು ನಾಡಿಗೆ ಬಂದು ಸಾವನ್ನಪ್ಪುತ್ತಿರುವುದರಿಂದ ಭಯಾನಕ ವಾತಾವರಣ ನಿರ್ಮಾಣವಾಗಿದೆ. ಮೇ ತಿಂಗಳು ಕಳೆಯುತ್ತ ಬಂದರೂ ಕೂಡ ಸಮರ್ಪಕ ಮಳೆಯಾಗದೆ ಇರುವುದು ಜನರನ್ನು ಕಂಗೆಡಿಸಿದೆ.

ಮುಂಜಾಗ್ರತೆ ಕೊರತೆ:

ಕೆರೆ ಕಟ್ಟೆಗಳೆಲ್ಲ ಬತ್ತಿ ಹೋಗಿದ್ದು, ನೀರಿನ ಸಮಸ್ಯೆಎದುರಾಗುತ್ತಿರುವ ವಿಷಯ ಮನಗಂಡರೂ ಕೂಡ ವನ್ಯ ಜೀವಿಗಳ ರಕ್ಷಣೆ ದೃಷ್ಟಿಯಿಂದ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳಿಗೆ ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆಗಾಗಿ ಬೋರವೆಲ್‌ ಅಥವಾ ಸಮರ್ಪಕ ಗುಂಡಿಗಳನ್ನು ತೆಗೆಸಿ ನೀರು ತುಂಬಿಸುವ ಕೆಲಸವಾಗಲಿ ಅರಣ್ಯ ಇಲಾಖೆಯಿಂದ ನಡೆಯದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದನಕರುಗಳ(ಜಾನುವಾರುಗಳ) ಪರಿಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಕುಡಿಯಲು ನೀರು ಸಿಗದೇ ಜಾನುವಾರುಗಳು ಕೂಡ ಪರದಾಡುತ್ತಿವೆ.

ವನ್ಯಜೀವಿಗಳ ಅಂಗಾಂಗ ಸಾಗಾಟ : ಓರ್ವನ ಬಂಧನ

ವನ್ಯಜೀವಿಗಳು ನಾಡಿಗೆ ಬಂದು ನಾಯಿಗಳ ದಾಳಿಗೊಳಗಾಗುತ್ತಿವೆ. ಗ್ರಾಮಸ್ಥರ ಸಹಕಾರದಿಂದ ಅರಣ್ಯದ ಹಲವು ಭಾಗಗಳಲ್ಲಿ ಗುಂಡಿ ನಿರ್ಮಿಸಿ ಪ್ರಾಣಿಗಳಿಗೆ ಕುಡಿಯಲು ನೀರು ನಿಲ್ಲಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುಗುಂಡಿಗಳನ್ನು ನಿರ್ಮಿಸಿ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುವುದು.

ಸುರೇಶ ಕುಳ್ಳೊಳ್ಳಿ, ಮುಂಡಗೋಡ ವಲಯ ಅರಣ್ಯಾಧಿಕಾರಿ

ಮಳೆಯ ಕೊರತೆಯಿಂದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯಲು ಕಿಂಚಿತ್ತು ನೀರಿಲ್ಲದಂತಾಗಿರುವುದರಿಂದ ಪ್ರಾಣಿಗಳು ನಾಡಿನತ್ತ ಮುಖ ಮಾಡಲು ಕಾರಣವಾಗಿದೆ. ವನ್ಯಜೀವಿ ಸಂರಕ್ಷಣೆಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸುತ್ತದೆ. ಮಲೆನಾಡಿನಲ್ಲಿ ಅರಣ್ಯ ಇಲಾಖೆಯಿಂದ ಸಿಮೆಂಟ್‌ನಲ್ಲಿ ಗಿಡ ಹಾಗೂ ಪ್ರಾಣಿಗಳ ಚಿತ್ರ ಬಿಡಿಸಿ ಉದ್ಯಾನವನ ನಿರ್ಮಾಣ ಮಾಡುವ ಬದಲು ಅರಣ್ಯ ಪ್ರದೇಶದಲ್ಲಿ ಅಗತ್ಯ ಬೋರವೆಲ್‌ ಕೊರೆಸಿ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು.

ರಾಜು ಗುಬ್ಬಕ್ಕನವರ, ಸಾಮಾಜಿಕ ಕಾರ್ಯಕರ್ತ

Follow Us:
Download App:
  • android
  • ios