ಕೋಲಾರದಲ್ಲಿ ಕೊರೋನಾ ಬ್ಲಾಸ್ಟ್ : ಸಂಪೂರ್ಣ ಲಾಕ್ ?
ಕೋಲಾರ ಜಿಲ್ಲೆಯು ಡೇಂಜರ್ ಝೋನ್‌ನಲ್ಲಿದ್ದು ಅತಿ ಹೆಚ್ಚು ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದಲ್ಲಿ ಡೇಂಜರಸ್ ಜಿಲ್ಲೆಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯನ್ನು ಸಂಪೂರ್ಣ ಲಾಕ್ ಮಾಡುವ ಸಾಧ್ಯತೆ ಇದೆ.
ಕೋಲಾರ (ಏ.30): ಕೋಲಾರ ಜಿಲ್ಲೆಯಲ್ಲಿ ಕೊರೋನಾ ತಾಂಡವವಾಡುತ್ತಿದ್ದು, ದಿನಂಪ್ರತಿ ಪತ್ತೆಯಾಗುವ ಸೋಂಕಿನ ಪ್ರಕರಣಗಳಲ್ಲಿ ರಾಜ್ಯದಲ್ಲಿಯೇ ಮೂರನೇ ಸ್ಥಾನಕ್ಕೆ ಏರಿರುವುದು ಆತಂಕವನ್ನುಂಟು ಮಾಡಿದೆ. ಅಲ್ಲದೇ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಡೇಂಜರ್ ಝೋನ್‌ನಲ್ಲಿರುವ 8 ಜಿಲ್ಲೆಗಳಲ್ಲಿ ಕೋಲಾರ ಜಿಲ್ಲೆಯೂ ಒಂದಾಗಿರುವುದು ಅಪಾಯವನ್ನು ಸೂಚಿಸುತ್ತದೆ. ಜಿಲ್ಲೆಯಲ್ಲಿ ಶೇ.18.20 ಸೋಂಕು ಏರಿಕೆಯಾಗಿದ್ದು, ಶೇಕಡಾವಾರು ಸ್ಥಾನವನ್ನು ಬೆಂಗಳೂರು ನಂತರ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಈವರೆಗೆ 17 ಸಾವಿರ ಸೋಂಕಿತರು ವರದಿಯಾಗಿದ್ದು 212 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 3872 ಮಂದಿ ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಹರಡುತ್ತಿರುವುದು ಚಿಂತೆಗೀಡು ಮಾಡಿದೆ. ಇನ್ನೆಂದೂ ಇಲ್ಲದಂತೆ ಅನೇಕ ಗ್ರಾಮಗಳು ಸೀಲ್‌ಡೌನ್ ಆಗಿದ್ದು ಗ್ರಾಮೀಣ ಜನರನ್ನು ಚಿಂತೆಗೀಡು ಮಾಡಿದೆ.
ಅಪಾಯದ ಮಟ್ಟ ದಾಟಿದ ರಾಜ್ಯದ 19 ಜಿಲ್ಲೆಗಳು : ಜನರೇ ಎಚ್ಚರ! ..
ಮೊದಲ ಹಂತದ ಕೊರೋನಾ ಬಂದಾಗ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿಗೆ ಹರಡಲು ಸಾಧ್ಯವಾಗಿರಲಿಲ್ಲ, ನಗರ ಪ್ರದೇಶಗಳಲ್ಲಿಯೇ ಹೆಚ್ಚಿಗೆ ಸೋಂಕು ಹರಡಿತ್ತು, ಆಗ ಸಾವಿನ ಸಂಖ್ಯೆಯೂ ಕಡಿಮೆ ಇತ್ತು. ಮೊದಲ ಹಂತದ ಸೋಂಕು ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಹರಡಿತ್ತು, ಹೊರ ರಾಜ್ಯಗಳಿಂದ ಬರುವವರನ್ನು ಗಡಿ ಭಾಗದಲ್ಲೇ ತಡೆದಿದ್ದರಿಂದ ಸೋಂಕು ಜಿಲ್ಲೆಯಲ್ಲಿ ಹೆಚ್ಚಿಗೆ ಹರಡಲು ಸಾಧ್ಯವಾಗಿರಲಿಲ್ಲ.
ಆದರೆ ಎರಡನೇ ಅಲೆಯು ಜಿಲ್ಲೆಯಲ್ಲಿ ಹೆಚ್ಚಿಗೆ ಹರಡಲು ಬೆಂಗಳೂರು ಕಾರಣವಾಗಿದೆ. ಜಿಲ್ಲೆಯ ಸಾವಿರಾರು ಮಂದಿ ಬೆಂಗಳೂರಿಗೆ ಪ್ರತಿನಿತ್ಯ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಿದ್ದರಿಂದ ಸೋಂಕು ಅಲ್ಲಿಂದ ವೇಗವಾಗಿ ಹರಡಲು ಸಾಧ್ಯವಾಯಿತು. ಮುಖ್ಯವಾಗಿ ಬಂಗಾರಪೇಟೆ, ಕೆಜಿಎಫ್, ಮಾಲೂರು ತಾಲೂಕುಗಳಿಂದ ಪ್ರತಿನಿತ್ಯ ಉದ್ಯೋಗಕ್ಕಾಗಿ ರೈಲುಗಳಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು. ಅಲ್ಲದೆ ಬೆಂಗಳೂರಿನಿಂದ ಬಂದ ಅನೇಕರಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಹರಡಲು ಸಾಧ್ಯವಾಯಿತು.
ಅಪಾಯದ ಮಟ್ಟ ದಾಟಿದ ರಾಜ್ಯದ 19 ಜಿಲ್ಲೆಗಳು : ಜನರೇ ಎಚ್ಚರ! ...
ಸಾವಿನ ಸಂಖ್ಯೆ ಹೆಚ್ಚು: ಜಿಲ್ಲೆಯಲ್ಲಿ ಎರಡನೆಯ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾದ ಸಮಸ್ಯೆ ಹಾಗೂ ಸೋಂಕಿತರು ಸಕಾಲಕ್ಕೆ ಆಸ್ಪತ್ರೆಗಳಿಗೆ ಬಾರದೆ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗಳಿಗೆ ಬರುತ್ತಿರುವುದರಿಂದ ಸೋಂಕು ಉಲ್ಭಣಗೊಂಡು ಸಾವುಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ವೈದ್ಯಾಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
ಮೊದಲ ಅಲೆಯಲ್ಲಿ ಸೋಂಕಿತರಿಗೆ ಉತ್ತಮ ಶುಶ್ರೂಷೆ ಒದಗಿಸಿ ಅವರನ್ನು ಗುಣಮುಖರನ್ನಾಗಿಸಿ ಸಾರ್ವಜನಿಕರ ಮನ್ನಣೆ ಪಡೆದುಕೊಂಡಿದ್ದ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಎರಡನೇ ಅಲೆಯಲ್ಲಿ ಸಾವುಗಳು ಹೆಚ್ಚಿಗೆ ಸಂಭವಿಸುತ್ತಿವೆ. ಪ್ರತಿದಿನ 3-8 ಸೋಂಕಿತರು ಮೃತಪಟ್ಟಿರುವುದು ಕಂಡು ಬಂದಿದೆ. ಇತ್ತೀಚೆಗೆ ಅಮ್ಲಜನಕ ಕೊರತೆಯಿಂದ ಒಂದೇ ಬಾರಿಗೆ 5 ಮಂದಿ ಮೃತಪಟ್ಟಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸಿತು.
ಈ ಮಧ್ಯೆ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇಲ್ಲ ಎಂದು ಹೇಳಿಕೊಂಡರೂ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರು ಆಮ್ಲಜನಕದ ಕೊರತೆ ಇರುವುದನ್ನು ವಿಡಿಯೋಗಳ ಮೂಲಕ ಸಾಮಾಜಿಕ ತಾಣಗಳಿಗೆ ಹರಿಬಿಡುತ್ತಿರುವುದು ಸಂಶಯಕ್ಕೆ ಈಡುಮಾಡಿದೆ.
ಸದ್ಯ ಜಿಲ್ಲೆಗೆ ಎದುರಾಗಿರುವ ಈ ಆರೋಗ್ಯ ಸಮಸ್ಯೆಯನ್ನು ಎದುರಿಸುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಲಾಕ್‌ಡೌನ್ ನಡುವೆಯೂ ಮಾಸ್ಕ್ ಧರಿಸದೆ ಯಾವುದೇ ಅಂಜಿಕೆ ಇಲ್ಲದೆ ತಿರುಗಾಡುವವರಿಗೆ ಸರಿಯಾದ ಪಾಠ ಕಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ದಿಟ್ಟಹೆಜ್ಜೆ ಇಡಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆಯೂ ಜಾಗೃತರಾಗಿ ಈ ಕೊರೋನಾ ಸೋಂಕಿಗೆ ತಡೆ ಮಾಡದೆ ಹೋದರೆ ದೊಡ್ಡ ಅಪಾಯ ಮತ್ತು ತೀವ್ರ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona