ಮೈಸೂರು ರಸ್ತೆಯ ದೀಪಾಂಜಲಿ ನಗರದಿಂದ ಹೊಸಕೆರೆಹಳ್ಳಿ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ 1.5 ಕಿ.ಮೀ ಉದ್ದದ ಹೊಸ ರಸ್ತೆ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ. ಈ ರಸ್ತೆಯು ನಾಯಂಡಹಳ್ಳಿ ಟ್ರಾಫಿಕ್ ತಪ್ಪಿಸಿ, ಕೆಂಗೇರಿ ಕಡೆಗೆ ಸಾಗುವ ಪ್ರಯಾಣಿಕರ 15-20 ನಿಮಿಷಗಳ ಸಮಯವನ್ನು ಉಳಿಸಲಿದೆ.
ಮಂಜುನಾಥ್ ಕೆ.
ಬೆಂಗಳೂರು (ಡಿ.8): ಮೈಸೂರು ರಸ್ತೆ ಕಡೆಯಿಂದ ಕೆಂಗೇರಿ ಸೇರಿ ಇತರೆ ಕಡೆ ಪ್ರಯಾಣಿಸುವ ವಾಹನ ಸವಾರರಿಗೆ ಸದ್ಯದಲ್ಲಿಯೇ ಗುಡ್ ನ್ಯೂಸ್ ನೀಡಲಿರುವ ನೈಸ್ ಸಂಸ್ಥೆ ದೀಪಾಂಜಲಿ ನಗರ ಜಂಕ್ಷನ್‌ನಲ್ಲಿ (ಬಿಎಚ್‌ಇಎಲ್) ಬಳಿ ನಿರ್ಮಾಣವಾಗಿರುವ ಒಂದೂವರೆ ಕಿ.ಮೀ ಉದ್ದದ ರಸ್ತೆ ಶೀಘ್ರದಲ್ಲಿಯೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.
ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೈಸ್) ಸಂಸ್ಥೆಯು ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಸಮೀಪದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ನಾಲ್ಕು ಪಥದ ರಸ್ತೆಗೆ ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಿತ್ತು. ಅದನ್ನು ಕಾರ್ಯ ರೂಪಕ್ಕೂ ತರಲು ಮುಂದಾಗಿದ್ದರು. ಆದರೆ ಕೆಲವೊಂದು ಭೂ ವಿವಾದ ಮತ್ತು ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾದರಿಂದ ಆ ಯೋಜನೆಯನ್ನು ಅರ್ಧಕ್ಕೆ ಮೊಟಕುಗೊಳಿಸಿತ್ತು. ಇದೀಗ ಈ ಯೋಜನೆಯನ್ನು ಪೂರ್ಣಗೊಳಿಸಿರುವ ನೈಸ್ ಸಂಸ್ಥೆಯು ಸದ್ಯದಲ್ಲಿಯೇ ಆ ರಸ್ತೆಯನ್ನು ಪ್ರಯಾಣಿಕರ ಬಳಕೆಗೆ ನೀಡಲಿದೆ.
ಸಮಯ ಉಳಿತಾಯ:
ಈ ಒಂದೂವರೆ ಕಿ.ಮೀ ಉದ್ದದ ನೈಸ್ ರಸ್ತೆಯ ಆರಂಭದಿಂದ ಮೈಸೂರು ರಸ್ತೆಯಿಂದ ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ಸೇರಿ ಇತರೆ ಮಾರ್ಗಗಳ ಕಡೆ ಪ್ರಯಾಣಿಸುವ ವಾಹನ ಸವಾರರಿಗೆ 15 ರಿಂದ 20 ನಿಮಿಷ ಸಮಯ ಉಳಿತಾಯವಾಗಲಿದೆ. ಮೊದಲು ನೈಸ್ ರಸ್ತೆಗೆ ಹೋಗಲು ನಾಯಂಡಹಳ್ಳಿ ರಿಂಗ್ ರಸ್ತೆ ಮೂಲಕ ಹೊಸಕೆರೆಹಳ್ಳಿವರೆಗೂ ಟ್ರಾಫಿಕ್‌ನಲ್ಲಿ ನಿಂತು ಒದ್ದಾಡಿ ನೈಸ್ ರಸ್ತೆಗೆ ಎಂಟ್ರಿಕೊಡಬೇಕಿತ್ತು. ಇದರಿಂದ ನಾಯಂಡಹಳ್ಳಿ ಮತ್ತು ವೀರಭದ್ರನಗರ ಸಿಗ್ನಲ್‌ವರೆಗೂ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುತ್ತಿತ್ತು.
ಇದೀಗ ಈ ನೂತನ ರಸ್ತೆಯ ಆರಂಭದಿಂದ ಕೇವಲ ಎರಡ್ಮೂರು ನಿಮಿಷಗಳಲ್ಲಿಯೇ ನೈಸ್ ರಸ್ತೆಯ ಟೋಲ್‌ಗೇಟ್‌ವರೆಗೂ ತಲೆಬಿಸಿ ಇಲ್ಲದೇ ಸಂಚರಿಸಬಹುದು. ಇದರಿಂದ ವಾಹನ ಸವಾರರ ಸಮಯದ ಉಳಿತಾಯದ ಜತೆಗೆ ಈ ಭಾಗದ ಸಂಚಾರ ದಟ್ಟಣೆಗೆ ಕೊಂಚ ಮುಕ್ತಿ ಸಿಗಲಿದೆ. ವಿಜಯನಗರ, ಬಾಪೂಜಿನಗರ, ಬ್ಯಾಟರಾಯನಪುರ, ಮೆಜೆಸ್ಟಿಕ್ ಹಾಗೂ ಕೆ.ಆರ್.ಮಾರುಕಟ್ಟೆ ಭಾಗಗಳಿಂದ ಮೈಸೂರು ರಸ್ತೆಗೆ ಆಗಮಿಸುವ ಸವಾರರಿಗೆ ಈ ರಸ್ತೆ ಹೆಚ್ಚಿನ ಅನುಕೂಲವಾಗಿದೆ.
ರಸ್ತೆ ನಿರ್ಮಾಣ ಕಾಮಗಾರಿ ಕೊನೆ ಹಂತದಲ್ಲಿದೆ:
ದೀಪಾಂಜಲಿ ನಗರದಿಂದ ನೈಸ್‌ರಸ್ತೆಯ ಟೋಲ್‌ಗೇಟ್‌ವರೆಗೂ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಭಗವಾನ್ ಜೈನ್ ಆಸ್ಪತ್ರೆಯ ಬಳಿಯ ರಸ್ತೆಯಲ್ಲಿ ಬಂಡೆ ಇದ್ದುದ್ದರಿಂದ ಅದನ್ನು ಹೊಡೆದು ರಸ್ತೆ ನಿರ್ಮಿಸಲಾಗುತ್ತಿದ್ದು, ಜೈನ್ ಆಸ್ಪತ್ರೆಯ ಬಳಿ ರಸ್ತೆಗೆ ಡಾಂಬರೀಕರಣ ಮಾಡುವ ಕೆಲಸ ಮತ್ತು ತಡೆಗೋಡೆ ನಿರ್ಮಿಸುವ ಕೆಲಸ ಭರದಿಂದ ಸಾಗಿದೆ. ಅದು ಪೂರ್ಣಗೊಂಡರೆ ಈ ರಸ್ತೆ ಜನರ ಉಪಯೋಗಕ್ಕೆ ಆದಷ್ಟು ಬೇಗ ಸಿಗಲಿದೆ.
ಒಂದು ತಿಂಗಳಿನಲ್ಲಿ ಉದ್ಘಾಟನಾ ಭಾಗ್ಯ!
ಎಲ್ಲವೂ ಅಂದುಕೊಂಡಂತೆ ಆದರೆ ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಲ್ಲಿ ಬಳಿಯಿಂದ ಪಿಇಎಸ್ ಕಾಲೇಜು ಸಮೀಪದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಇನ್ನು ಒಂದು ತಿಂಗಳಿನಲ್ಲಿಯೇ ಚಾಲನೆ ಸಿಗಲಿದೆ ಎಂದು ನೈಸ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖಾಂಶಗಳು:
* ಒಂದೂವರೆ ಕಿ.ಮಿ ಉದ್ದದ ನಾಲ್ಕುಪಥದ ರಸ್ತೆ ಇದಾಗಿದೆ
* ಇನ್ನು ಒಂದು ತಿಂಗಳಿನಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತ
* 30 ನಿಮಿಷದಲ್ಲಿ ಚಲ್ಲಘಟ್ಟ ತಲುಪಬಹುದು
* ಮೈಸೂರು ಎಕ್ಸ್‌ಪ್ರೆಸ್ ವೇ ತಲುಪಲು ಹೆಚ್ಚಿನ ಸಹಕಾರಿ
* ಮೈಸೂರು ರಸ್ತೆಯ ವಾಹನ ಸವಾರರಿಗೆ ಹೆಚ್ಚಿನ ಅನುಕೂಲ
\Bದೊಡ್ಡ ವೃತ್ತದಿಂದ ಒಂದಿಷ್ಟು ಸಮಸ್ಯೆ:\B
ದೀಪಾಂಜಲಿನಗರ ಜಂಕ್ಷನ್ ಬಳಿ ದೊಡ್ಡದಾದ ವೃತ್ತವನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಇಲ್ಲಿನ ರಸ್ತೆಗಳ ಅಗಲ ಕೊಂಚ ಚಿಕ್ಕದಾಗಿದೆ. ಇದೀಗ ಇದೇ ಜಂಕ್ಷನ್‌ನಲ್ಲಿ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ನೈಸ್ ರಸ್ತೆಗೆ ಆಗಮಿಸಲು ಒಂದೊಮ್ಮೆ ಭಾರಿ ವಾಹನಗಳು ಬಂದರೆ ಅಥವಾ ಸಾಲುಗಟ್ಟಿ ನಿಂತರೆ ಈ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಮತ್ತೊಂದು ಸಮಸ್ಯೆ ತಲೆದೋರಲಿದೆ ಎಂಬುದು ಇಲ್ಲಿನ ಸ್ಥಳೀಯರ ಆತಂಕವಾಗಿದೆ.
ಮೊದಲು ನೈಸ್ ರಸ್ತೆಗೆ ಹೋಗಬೇಕಾದರೆ ನಾಯಂಡಹಳ್ಳಿ ಜಂಕ್ಷನ್ ಕಡೆಯಿಂದ ಅಥವಾ ವೀರಭದ್ರನಗರ ಸಿಗ್ನಲ್ ಕಡೆಯಿಂದ ಬಂದು ಟೋಲ್‌ಗೇಟ್ ತಲುಪಬೇಕಿತ್ತು. ಇದೀಗ ದೀಪಾಂಜಲಿ ನಗರ ಜಂಕ್ಷನ್ ಬಳಿಯ ನೈಸ್ ರಸ್ತೆಯ ಆರಂಭವಾಗುತ್ತಿರುವುದರಿಂದ ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೇ ಕೆಲವೇ ನಿಮಿಷಗಳಲ್ಲಿ ನೈಸ್ ರಸ್ತೆಯನ್ನು ತಲುಪಬಹುದಾಗಿದೆ.
ಪ್ರಭಾಕರ್, \Bಸ್ಥಳೀಯ ನಿವಾಸಿ
ದೀಪಾಂಜಲಿ ನಗರ ಜಂಕ್ಷನ್‌ನಲ್ಲಿಯೇ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸಿರುವುದರಿಂದ ಈ ಭಾಗದ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಾಹನ ಸವಾರರ ಸಮಯ ಉಳಿತಾಯವಾಗುವುದರ ಜತೆಗೆ ಈ ಭಾಗದ ಸಂಚಾರ ದಟ್ಟಣೆಗೆ ಕೊಂಚ ಮಟ್ಟಿಗೆ ಮುಕ್ತಿ ಸಿಗಲಿದೆ.
ಕಾರ್ತಿಕ್, \Bಸ್ಥಳೀಯ ನಿವಾಸಿ


