Chicken rice for dogs in Bengaluru:ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿ ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ಮುಂದಾಗಿದೆ. ಈ ಆಶ್ರಯ ತಾಣದ ನಾಯಿಗಳಿಗೆ ದಿನಕ್ಕೆ ಎರಡು ಬಾರಿ 'ಚಿಕನ್‌ ರೈಸ್‌' ನೀಡಲು ಯೋಜನೆ ರೂಪಿಸಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು (ಡಿ.8): ಬಿಬಿಎಂಪಿಯು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ) ಬದಲಾಗುತ್ತಿದ್ದಂತೆ ರಾಜಧಾನಿಯ ಬೀದಿ ನಾಯಿಗಳಿಗೆ ಅದೃಷ್ಟ ದ್ವಿಗುಣಗೊಂಡಿದ್ದು, ದಿನಕ್ಕೊಂದು ಬಾರಿ ಬದಲು ಎರಡು ಬಾರಿ ‘ಚಿಕನ್‌ ರೈಸ್‌ ಭಾಗ್ಯ’ ನೀಡುವುದಕ್ಕೆ ಸಿದ್ಧತೆ ನಡೆಸಲಾಗಿದೆ.

ಬಿಬಿಎಂಪಿಯ ಅವಧಿಯಲ್ಲಿ ಬೆಂಗಳೂರಿನ ಬೀದಿ ನಾಯಿಗಳಿಗೆ ದಿನಕ್ಕೆ ಒಂದು ಬಾರಿ ಚಿಕನ್‌ ರೈಸ್‌ ನೀಡುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ, ಈ ಬಗ್ಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಯೋಜನೆಯನ್ನು ಬದಿಗೆ ಸರಿಸಲಾಗಿತ್ತು. ಇತ್ತೀಚಿಗೆ ಸುಪ್ರೀಂ ಕೋರ್ಟ್‌ ಬಸ್, ರೈಲು ನಿಲ್ದಾಣ, ಆಸ್ಪತ್ರೆ, ಶಾಲಾ-ಕಾಲೇಜು, ಆಸ್ಪತ್ರೆ, ಹಾಸ್ಟಲ್‌, ವಿಶ್ವವಿದ್ಯಾಲಯ, ತರಬೇತಿ ಸಂಸ್ಥೆ, ಮೈದಾನ, ಸ್ಟೇಡಿಯಂ ಆವರಣದಲ್ಲಿ ಸೇರಿದಂತೆ ಜನನಿಬಿಡ ಪ್ರದೇಶಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ, ಅವುಗಳನ್ನು ನಿರ್ದಿಷ್ಟ \Bಡಾಗ್ ಶೆಲ್ಟರ್‌\Bಗಳಿಗೆ ಸ್ಥಳಾಂತರಿಸಬೇಕು. ಅಲ್ಲದೇ, ನಾಯಿ ಕಡಿತ ತಡೆಯಲು ಆವರಣದಲ್ಲಿ ಬೇಲಿಗಳನ್ನು ಅಳವಡಿಸಬೇಕು ಎಂದು ನಿರ್ದೇಶಿಸಿತ್ತು.

ಈ ಆದೇಶದ ಪಾಲನೆಯ ಅವಕಾಶ ಬಳಸಿಕೊಂಡಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು, ಶೆಲ್ಟರ್‌ಗಳಿಗೆ ಸ್ಥಳಾಂತರಗೊಳ್ಳುವ ಬೀದಿ ನಾಯಿಗಳಿಗೆ ದಿನಕ್ಕೆ ಎರಡು ಬಾರಿ ಚಿಕನ್‌ ರೈನ್‌ ನೀಡುವುದಕ್ಕೆ ನಿರ್ಧರಿಸಿದ್ದಾರೆ.

6 ತಿಂಗಳಲ್ಲಿ ‘ಚಿಕನ್‌ ರೈಸ್‌’ ಬೆಲೆ ₹2.58 ಹೆಚ್ಚಳ:

ಬಿಬಿಎಂಪಿಯ ಅವಧಿಯಲ್ಲಿ ಚಿಕನ್‌ ರೈಸ್‌ಗೆ 22.42 ರು. (ಜೂ.17ಕ್ಕೆ) ನಿಗದಿಪಡಿಸಲಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಕಚ್ಚಾ ಸಾಮಗ್ರಿ ದರ ಹೆಚ್ಚಳ ಹಾಗೂ ಪರಿಷ್ಕರಣೆ ಮಾಡಿ ಒಂದು ಬಾರಿಯ ಚಿಕನ್‌ ರೈಸ್‌ಗೆ 25 ರು. ನಿಗದಿ ಪಡಿಸಲಾಗಿದ್ದು, 6 ತಿಂಗಳ ಅವಧಿಯಲ್ಲಿ ಚಿಕನ್‌ ರೈಸ್‌ ಬೆಲೆ 2.58 ರು. ಹೆಚ್ಚಳವಾದಂತಾಗಿದೆ. ದಿನಕ್ಕೆ ಪ್ರತಿ ನಾಯಿಗೆ 2 ಬಾರಿಯಂತೆ 50 ರು.ಗಳನ್ನು ಚಿಕನ್‌ ರೈಸ್‌ಗೆ ವೆಚ್ಚ ಮಾಡುವುದಕ್ಕೆ ನಿರ್ಧರಿಸಲಾಗಿದೆ.

ಚಿಕನ್‌ ರೈಸ್‌ ರೆಸಿಪಿ:

ಅಕ್ಕಿ-150 ಗ್ರಾಂ, ಚಿಕನ್‌ (ಕೋಳಿ ಮಾಂಸ) 100 ಗ್ರಾಂ, ತರಕಾರಿ-100 ಗ್ರಾಂ, ಎಣ್ಣೆ-10 ಗ್ರಾಂ, ಉಪ್ಪು-5 ಗ್ರಾಂ, ಅರಿಶಿಣ-2.5 ಗ್ರಾಂ ಸೇರಿ ಒಟ್ಟು 367.5 ಗ್ರಾಂ ಆಗಲಿದೆ. ಅಡುಗೆ ಮಾಡಿದ ನಂತರ 600 ಗ್ರಾಂ ಆಗಲಿದೆ. ಈ ಹಿಂದೆ ಬಿಬಿಎಂಪಿಯ ಅವಧಿಯಲ್ಲಿ ಸಿದ್ದಪಡಿದ ರೆಸಿಪಿಗೆ ಹೋಲಿಕೆ ಮಾಡಿದರೆ, 50 ಗ್ರಾಂ ರೈಸ್‌ ಹೆಚ್ಚಳ ಮಾಡಿ, 50 ಗ್ರಾಂ ಚಿಕನ್‌ ಕಡಿಮೆ ಮಾಡಲಾಗಿದೆ. ಆದರೆ, ಪ್ರತಿ ಚಿಕನ್‌ ರೈಸ್‌ ದರ ಮಾತ್ರ 2.58 ರು. ಹೆಚ್ಚಳ ಮಾಡಲಾಗಿದೆ.

ಮಾಸಿಕ ಪ್ರತಿ ನಾಯಿಗೆ \B\B3,035 ರುಪಾಯಿ ವೆಚ್ಚ:

ಆಶ್ರಯ ತಾಣಗಳಿಗೆ ಬೀದಿ ನಾಯಿಗಳನ್ನು ಸ್ಥಳಾಂತರ ಮತ್ತು ನಿರ್ವಹಣಾ ವೆಚ್ಚ ನಿಗದಿ ಪಡಿಸುವುದಕ್ಕೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಜೋಳನ್‌ ಅಧ್ಯಕ್ಷೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಆಹಾರ, ಸಿಬ್ಬಂದಿ ವೇತನ, ಔಷಧಿ, ಸ್ವಚ್ಛತಾ ಸಾಮಾಗ್ರಿ ಆಡಳಿತ ವೆಚ್ಚ ಒಳಗೊಂಡಂತೆ ಮಾಸಿಕ 3035 ರು. ವೆಚ್ಚ ಮಾಡುವುದಕ್ಕೆ ನಿರ್ಧರಿಸಲಾಗಿದೆ. ಮೊದಲ ತಿಂಗಳ ಒಂದು ನಾಯಿ ಹಿಡಿಯುವುದು, ಸಾಗಾಣಿಕೆ ಮತ್ತು ಲಸಿಕೆಗೆ 300 ರು. ಹೆಚ್ಚುವರಿ ವೆಚ್ಚ ಸೇರಿಸಲಾಗಿದೆ. ಟೆಂಡರ್‌ ಆಹ್ವಾನಿಸಿ ಸ್ವಯಂ ಸೇವಾ ಸಂಸ್ಥೆಗಳಿಗೆ ಆಶ್ರಯ ತಾಣಗಳ ನಿರ್ವಹಣೆ ಗುತ್ತಿಗೆ ನೀಡಲು ಈಗಾಗಲೇ ಐದು ನಗರ ಪಾಲಿಕೆ ಆಯುಕ್ತರಿಗೆ ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ ನಿರ್ದೇಶಿಸಿದ್ದಾರೆ.

ಸದ್ಯಕ್ಕೆ 2,206 ಬೀದಿ \B\Bನಾಯಿ ಗುರುತು:

ತಮ್ಮ ಸಂಸ್ಥೆಯ ಆವರಣದಲ್ಲಿರುವ ಬೀದಿ ನಾಯಿಗಳ ವಿವರ ನೀಡುವಂತೆ ನೀಡಲಾದ ನೋಟಿಸ್‌ನಿಂದ ಈವರೆಗೆ ನಗರದ ವಿವಿಧ ಸಂಸ್ಥೆಗಳು ನೀಡಿರುವ ಮಾಹಿತಿ ಪ್ರಕಾರ ಬೆಂ.ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 1623 ಬೀದಿ ನಾಯಿ ಇದ್ದು, ಬೆಂ.ದಕ್ಷಿಣ 131, ಬೆಂ.ಕೇಂದ್ರ 222, ಬೆಂ.ಪಶ್ಚಿಮ 37 ಹಾಗೂ ಬೆಂ. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ 193 ಬೀದಿ ನಾಯಿ ಇವೆ ಎಂದು ಮಾಹಿತಿ ಲಭ್ಯವಾಗಿದೆ. ಈ ಸಂಖ್ಯೆಯ ಪ್ರಕಾರ, ಪ್ರತಿ ತಿಂಗಳಿಗೆ 66.95 ಲಕ್ಷ ರು.ವೆಚ್ಚ ಮಾಡಬೇಕಾಗಲಿದೆ. ವಾರ್ಷಿಕ 8.03 ಕೋಟಿ ರು. ಬೇಕಿದ್ದು, ಬೀದಿ ನಾಯಿಗಳ ಸಂಖ್ಯೆ ಹೆಚ್ಚಾದರೆ, ವೆಚ್ಚವು ಅಧಿಕವಾಗಲಿದೆ. ಈ ವೆಚ್ಚವನ್ನು ಆಯಾ ನಗರ ಪಾಲಿಕೆಗಳು ಭರಿಸುವಂತೆ ಸೂಚಿಸಲಾಗಿದೆ.

ಆಶ್ರಯ ತಾಣ ಎಲ್ಲೆಲ್ಲಿ?:

ಬೆಂ.ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂಬೇಡ್ಕರ್‌ ನಗರ, ಬೆಂ.ದಕ್ಷಿಣ ನಗರ ಪಾಲಿಕೆಯು ಎಸ್‌.ಬಿಂಗಿಪುರ, ಬೆಂ.ಕೇಂದ್ರ ನಗರ ಪಾಲಿಕೆ ಕಂಟೋನ್ಮೆಂಟ್‌ನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆವರಣ, ಬೆಂ.ಪಶ್ಚಿಮ ನಗರ ಪಾಲಿಕೆಯಿಂದ ಕೊಟ್ಟಿಗೆಪಾಳ್ಯದ ನಿರಾಶ್ರಿತರ ಸಮಿತಿ ಹಾಗೂ ಬೆಂ.ಪೂರ್ವ ನಗರ ಪಾಲಿಕೆಯಿಂದ ಸಾದಮಂಗಲ ಮತ್ತು ವರ್ತೂರಿನಲ್ಲಿ ಆಶ್ರಯತಾಣಕ್ಕೆ ಸ್ಥಳ ಗುರುತಿಸಲಾಗಿದೆ.

ಆಶ್ರಯ ತಾಣದ ಪ್ರತಿ 100 ಬೀದಿ ನಾಯಿಯ ಮಾಸಿಕ ವೆಚ್ಚದ ವಿವರ

ಪ್ಲಾನ್‌ ವೆಚ್ಚ (ರು.ಗಳಲ್ಲಿ)

  • ನಾಯಿ ಹಿಡಿಯುವುದು, ಸಾಗಾಣಿಕೆ, ಲಸಿಕೆ 30,000 (ಏಕ ಬಾರಿ ವೆಚ್ಚ)
  • ಆಹಾರ 1,50,000( ದಿನಕ್ಕೆ 2 ಬಾರಿ)
  • ಸಿಬ್ಬಂದಿ ವೇತನ 1,18,483 (ಒಬ್ಬ ಪ್ಯಾರಾವೆಟ್‌, ನಾಲ್ವರು ಸಹಾಯಕರು)\B\B
  • ಔಷಧಿ ವೆಚ್ಚ 15,000
  • ಸ್ವಚ್ಛತಾ ಸಾಮಗ್ರಿ 10,000
  • ಆಡಳಿತ ವೆಚ್ಚ 10,000
  • ಒಟ್ಟು 3,33,483