ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಸಾವು ನೋವಿನ ಪ್ರಮಾಣ ವಿಪರೀತದ ಮಟ್ಟಕ್ಕೆ ಏರಿದ್ದು 5 ನಿಮಿಷಕ್ಕೊಂದು ಸಾವುಗಳಾಗುತ್ತಿದೆ. ಇದೀಗ ರಾಜ್ಯದ 19 ಜಿಲ್ಲೆಗಳು ಡೇಂಜರಸ್ ಎನ್ನಲಾಗಿದೆ. 

ನವದೆಹಲಿ (ಏ.30): ಕಳೆದ ಒಂದು ವಾರದ ಅವಧಿಯಲ್ಲಿ ಪಾಸಿಟಿವಿಟಿ ಪ್ರಕರಣ ಶೇ.10ಕ್ಕಿಂತ ಹೆಚ್ಚಿರುವ ಮತ್ತು ಆಸ್ಪತ್ರೆಗಳ ಹಾಸಿಗೆ ಶೇ.60ರಷ್ಟುಭರ್ತಿಯಾಗಿರುವ ಜಿಲ್ಲೆಗಳಲ್ಲಿ ತೀವ್ರ ಮತ್ತು ಸ್ಥಳೀಯ ಕಂಟ್ಮೈನ್‌ಮೆಂಟ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ಇರುವ ಜಿಲ್ಲೆಗಳು ಕರ್ನಾಟಕದಲ್ಲಿ 19 ಇವೆ. ಹೀಗಾಗಿ ಈ ಜಿಲ್ಲೆಗಳಲ್ಲೂ ಶೀಘ್ರ ಕಠಿಣ ನಿಯಮಗಳು ಜಾರಿಗೊಳ್ಳುವ ಸಾಧ್ಯತೆ ಇದೆ.

ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸೋಂಕು ನಿಯಂತ್ರಣಕ್ಕೆ ಇಂಥದ್ದೊಂದು ಕ್ರಮ ಅಗತ್ಯವೆಂದು ಪ್ರಸ್ತಾಪಿಸಲಾಗಿತ್ತು. ಅದರ ಬೆನ್ನಲ್ಲೇ ಗುರುವಾರ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ರವಾನಿಸಿರುವ ಕೇಂದ್ರ ಗೃಹ ಸಚಿವಾಲಯವು, ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಹಾಗೂ ಪ್ರಾದೇಶಿಕ ಮಟ್ಟದಲ್ಲಿ ಕ್ರಮಗಳನ್ನು ಕೈಗೊಳ್ಳುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ಆದರೆ, ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ ಲಾಕ್‌ಡೌನ್‌ ಜಾರಿ ಮಾಡಿ ಎಂಬ ಪದವನ್ನು ಬಳಕೆ ಮಾಡಲಾಗಿಲ್ಲ.

ರಾಜ್ಯದ 10 ಜಿಲ್ಲೆಗಳು ಮೋಸ್ಟ್ ಡೇಂಜರಸ್ : ಇಲ್ಲಿ ಎಲ್ಲವೂ ಸಂಪೂರ್ಣ ಲಾಕ್ ಆಗುತ್ತಾ..?

ಇದೇ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏ.25ರಂದು ಹೊರಡಿಸಿರುವ ಸಲಹೆ ಸೂಚನೆಗಳನ್ನು ಪಾಲಿಸುವಂತೆಯೂ ರಾಜ್ಯಗಳಿಗೆ ತಿಳಿಸಲಾಗಿದೆ. ಕೇಂದ್ರ ಸರ್ಕಾರದ ಈ ಆದೇಶ ಮೇ 31ರ ವರೆಗೂ ಜಾರಿಯಲ್ಲಿ ಇರಲಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona