ನವಲಗುಂದದಲ್ಲಿ ಶಾಸಕ ಕೋನರೆಡ್ಡಿ ತಮ್ಮ ಮಗನ ವಿವಾಹದ ಸಂದರ್ಭದಲ್ಲಿ 75 ಜೋಡಿಗಳಿಗೆ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದೊಂದು ಆದರ್ಶಪ್ರಾಯ ಕಾರ್ಯ ಎಂದು ಶ್ಲಾಘಿಸಿದರು.
ನವಲಗುಂದ (ಡಿ.8): ಶಾಸಕ ಕೋನರೆಡ್ಡಿಯವರು ಸರ್ವಧರ್ಮದ ಮದುವೆಯ ಕಾರ್ಯಕ್ರಮ ಮಾಡಿದ್ದಾರೆ. ತಮ್ಮ ಮಗನ ಮದುವೆಯ ಸಂದರ್ಭದಲ್ಲಿ 75 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ. ಇದೊಂದು ಆದರ್ಶನೀಯ ಕಾರ್ಯಕ್ರಮ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಶ್ಲಾಘಿಸಿದರು.
ಮದುವೆ ಖರ್ಚಿನ ಹಣದಲ್ಲಿ ಸ್ವಂತ ಉದ್ಯೋಗ:
ನವಲಗುಂದದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ವಧು-ವರರಿಗೆ ಅಕ್ಷತೆ ಹಾಕಿ ಅವರು ಮಾತನಾಡಿದರು. ಉಳಿ ಪೆಟ್ಟು ಬಿದ್ದಾಗಲೇ ಕಲ್ಲು ಶಿಲೆಯಾಗಲು ಸಾಧ್ಯ. ಇಲ್ಲಿ ನಿಮ್ಮೆಲ್ಲರ ಆಶೀರ್ವಾದ ಇಲ್ಲದೆ ಈ ಕಾರ್ಯಕ್ರಮ ಸಾಧ್ಯವಾಗುತ್ತಿರಲಿಲ್ಲ. ಹೆಣ್ಣು ಒಂದು ಕಡೆ, ಗಂಡು ಒಂದು ಕಡೆ ಇತ್ತು. ಅವರಿಬ್ಬರೂ ಸೇರಿ ವಧು-ವರರಾದರೆ, ಅಕ್ಕಿ ಒಂದು ಕಡೆ, ಅರಿಶಿನ ಸೇರಿ ಮಂತ್ರಾಕ್ಷತೆಯಾಯಿತು. ಮದುವೆಯ ಖರ್ಚಿನ ಹಣದಿಂದ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ಹೊಸ ಜಗತ್ತಿನಲ್ಲಿ ಮತ್ತೊಬ್ಬರಿಗೆ ಉದ್ಯೋಗ ಕೊಡುವ ರೀತಿಯಲ್ಲಿ ಬೆಳೆಯಿರಿ ಎಂದು ಸಲಹೆ ನೀಡಿದರು.
ಸರ್ವಧರ್ಮ ಕಾರ್ಯಕ್ರಮ,, ಶಾಂತಿಯ ತೋಟ:
ಇದು ಐತಿಹಾಸಿಕ ಕಾರ್ಯಕ್ರಮ. ಇದು ಸರ್ವಧರ್ಮ ಕಾರ್ಯಕ್ರಮ. ಶಾಂತಿಯ ತೋಟ, ಇದೇ ನಮ್ಮ ತತ್ವ. ಕೋನರೆಡ್ಡಿಯವರು ಅವರ ಮಗನ ಮದುವೆಯ ಸಂದರ್ಭದಲ್ಲಿ 75 ಜೋಡಿಗಳ ಸಾಮೂಹಿಕ ವಿವಾಹ ಏರ್ಪಡಿಸಿದ್ದಾರೆ. ನಿಮ್ಮ ಕುಟುಂಬಗಳಿಗೆ ಒಳ್ಳೆಯದಾಗಲಿ. ನೀವೆಲ್ಲರೂ ಆದರ್ಶ ದಂಪತಿಯಾಗಿ ಸುಖದಿಂದ ಬಾಳಿ. ಇಡೀ ಸರಕಾರವೇ ನಿಮ್ಮೆಲ್ಲರಿಗೆ ಆಶೀರ್ವಾದ ಮಾಡಿದೆ ಎಂದರು.


