ತುಮಕೂರಿನ ಅಮಾನಿಕೆರೆಯಲ್ಲಿ 3.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ತೇಲುವ ಸಂಗೀತ ಕಾರಂಜಿ ಕೇವಲ 15 ದಿನಗಳಲ್ಲೇ ಸ್ಥಗಿತಗೊಂಡಿದೆ. ದಸರಾ ವೇಳೆ ತರಾತುರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಿದ್ದೇ ಇದಕ್ಕೆ ಕಾರಣವಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ತುಮಕೂರು: ಅಮಾನಿಕೆರೆಯಲ್ಲಿ ಸ್ಥಾಪಿಸಲಾದ 'ತೇಲುವ ಸಂಗೀತ ಕಾರಂಜಿ'ಯು (Floating Musical Fountain) ಆರಂಭವಾದ ಕೆಲವೇ ದಿನಗಳಲ್ಲೇ ಸ್ಥಗಿತಗೊಂಡಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಈಗ ಬಂದ್ ಮಾಡಿರೋದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

ಏನಾಯ್ತು?

2026ರ ತುಮಕೂರು ದಸರಾ ಅಂಗವಾಗಿ ಅಕ್ಟೋಬರ್ 11 ರಂದು ಈ ಸಂಗೀತ ಕಾರಂಜಿ ಆರಂಭಿಸಲಾಗಿತ್ತು. ಅದಕ್ಕಾಗಿ ತುಮಕೂರು ನಗರಾಭಿವೃದ್ಧಿಗಾಗಿ (ಟೂಡಾ) 3.8 ಕೋಟಿ ರೂಪಾಯಿ ಹಣ ಖರ್ಚು ಮಾಡಿತ್ತು. ಕೆರೆಯಲ್ಲಿ 210 ಅಡಿ ಅಗಲ ಮತ್ತು 45 ಅಡಿ ಉದ್ದದಲ್ಲಿ ಕಾರಂಜಿ ನಿರ್ಮಿಸಲಾಗಿತ್ತು. ಅಲ್ಲಿಂದ ನೀರು 30 ಮೀಟರ್ ಎತ್ತರಕ್ಕೆ ಚಿಮ್ಮುವ ವ್ಯವಸ್ಥೆಯನ್ನ ಮಾಡಲಾಗಿತ್ತು. ನೋಡುಗರಿಗೆ ಥ್ರಿಲ್ಲಿಂಗ್ ಅನುಭವ ನೀಡುತ್ತಿತ್ತು. ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿತ್ತು.

ಕಾರ್ಯಾಚರಣೆ ಆರಂಭವಾದ 15 ದಿನಗಳ ಬೆನ್ನಲ್ಲೇ ಕಾರಂಜಿ ಸ್ಥಗಿತಗೊಂಡಿದೆ. ಧ್ವನಿವರ್ಧಕ, ವಿದ್ಯುತ್ ಕೇಬಲ್ ಸಂಪರ್ಕ ಬದಲಾವಣೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮತ್ತೆ ಪುನರ್ ಆರಂಭ ಯಾವಾಗ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳನ್ನ ಕೇಳಿದ್ರೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದಿದ್ದಾರೆ. ವಾರಾಂತ್ಯದಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ತೇಲುವ ಕಾರಂಜಿ ವ್ಯವಸ್ಥೆ ನಿರ್ಮಾಣ ಮಾಡಲಾಗಿದೆ. ನಗರದ ಜನರು ಸಂಜೆ ವೇಳೆ ತಮ್ಮ ಕುಟುಂಬ ಸಮೇತ ಇಲ್ಲಿಗೆ ಬಂದು ಎಂಜಾಯ್ ಮಾಡಲು ಸೂಕ್ತ ಸ್ಥಳವಾಗಿದೆ.

ದಸರಾ ತರಾತುರಿಯಲ್ಲಿ ಕಾರಂಜಿಯನ್ನು ಸಿದ್ಧಪಡಿಸಲಾಗಿತ್ತು. ಇದೀಗ ಕಾರಂಜಿ ಕೈಕೊಟ್ಟಿದೆ. ದಸರಾ ವೇಳೆ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಸ್ಥಳೀಯ ಸ್ಪೀಕರ್‍‌ಗಳನ್ನು ಅಳವಡಿಸಿದ್ದರು. ಅಲ್ಲಿರುವ ವಿದ್ಯುತ್ ಕೇಬಲ್‌ಗಳ ಅವೈಜ್ಞಾನಿಕವಾಗಿ ಕೂಡಿದ್ದವು. ಶೀಘ್ರದಲ್ಲೇ ಅವೆಲ್ಲವನ್ನೂ ಮರುಜೋಡಿಸಿ 15 ದಿನಗಳೊಳಗೆ ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಇನ್ನು ಕಾರಂಜಿ ಆರಂಭವಾದ ಬೆನ್ನಲ್ಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸಂಜೆ ವೇಳೆ ಒಳ್ಳೆ ಎಂಟರ್ಟೈನ್‌ಮೆಂಟ್ ಸಿಗ್ತಿರೋದ್ರಿಂದ ವೀಕೆಂಡ್‌ಗಳಲ್ಲಿ ಜನ ಸಾಗರವೇ ಹರಿದು ಬರುತ್ತಿತ್ತು. ಆರಂಭವಾದ ಮೊದಲ ದಿನದಿಂದ ಇಲ್ಲಿಯವರೆಗೆ ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಇಲ್ಲಿಯವರೆಗೆ 28 ಲಕ್ಷ ರೂಪಾಯಿ ಶುಲ್ಕ ಸಂಗ್ರಹ ಆಗಿದೆ.

ಇಲ್ಲಿ ಬೋಟಿಂಗ್, ಜಿಪ್‌ಲೈನ್, ಕಯಾಕಿಂಗ್, ಕನೋಯಿಂಗ್ ಟ್ರೈನಿಂಗ್ ಅಕಾಡೆಮಿ, ಫುಡ್ ಕೋರ್ಟ್ ಸೇರಿದಂತೆ ಅನೇಕ ವ್ಯವಸ್ಥೆಗಳು ಇಲ್ಲಿವೆ. ಹೀಗಾಗಿ ಅಮಾನಿಕೆರೆ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿದೆ. ಇದೇ ಕಾರಣಕ್ಕೆ ಕಾರಂಜಿ ವೀಕ್ಷಣೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇನ್ನು ಕಾರಂಜಿ ಕೆಟ್ಟು ನಿಂತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದ್ದು, ಚರ್ಚೆಗೆ ಕಾರಣವಾಗಿದೆ. 3.8 ಕೋಟಿ ಖರ್ಚು ಮಾಡಿ ಏನು ಪ್ರಯೋಜನ ಬಂತು. ಆದಷ್ಟು ಬೇಗ ಸಾರ್ವಜನಕರ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕು ಎಂಬ ಆಗ್ರಹ ಕಳಿಬಂದಿದೆ.