ರಾಕಿಂಗ್ ಸ್ಟಾರ್ ಯಶ್ ಮತ್ತು ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಸಿನಿಮಾ ವಿಶ್ವಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ನೇಪಾಳ ಪ್ರಧಾನಿ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದ ಜಾಗತಿಕ ಯಶಸ್ಸನ್ನು ಶ್ಲಾಘಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಲಾಭ ಗಳಿಸುತ್ತಿದ್ದು, ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಪ್ರಧಾನಿ ಮೋದಿ ರಾಮಾಯಣ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಮೋದಿ ಏನು ಹೇಳಿದರು?

ನೇಪಾಳ ಪ್ರಧಾನಿ ಬಾಲೆನ್ ಶಾ ಎರಡು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಇವತ್ತು ಮೋದಿ ಮತ್ತು ಬಾಲೆನ್ ಶಾ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಈ ವೇಳೆ ಮೋದಿ 'ರಾಮಾಯಣ' ಉಲ್ಲೇಖಿಸಿದರು. ಇವತ್ತು ಚಲನಚಿತ್ರಗಳು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ನಮ್ಮ 'ರಾಮಾಯಣ'ದ ಕಥೆ ಜಗತ್ತನ್ನು ತಲುಪುತ್ತಿದೆ. ಇದು ತುಂಬಾ ಸಂತೋಷದ ವಿಚಾರ ಎಂದಿದ್ದಾರೆ.

ಹೊಸ ಹಾಗೂ ಸುಧಾರಿತ ಮಾಧ್ಯಮಗಳ ಸಹಾಯದಿಂದ ತಮ್ಮ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸಲು ಭಾರತ ಮತ್ತು ನೇಪಾಳದ ಯುವ ಸೃಷ್ಟಿಕರ್ತರು (ಕ್ರಿಯೇಟರ್ಸ್) ಒಟ್ಟಾಗಿ ಕೆಲಸ ಮಾಡಬೇಕೆಂದು ಬಯಸುತ್ತೇವೆ. ಮುಂದಿನ ವೇವ್ (WAVE) ಶೃಂಗಸಭೆಯಲ್ಲಿ ನಾವು ನೇಪಾಳದ ಹೊಸ ನಿಯೋಗವನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.

ಭಾರತ ಮತ್ತು ನೇಪಾಳದ ನಡುವಿನ ಸಮಾನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧಗಳ ಬಗ್ಗೆಯೂ ಅವರು ಮಾತನಾಡಿದರು. ಶ್ರೀರಾಮ ಮತ್ತು ಸೀತೆ ಎರಡೂ ದೇಶಗಳ ಒಂದೇ ನಾಗರಿಕತೆ ಹಾಗೂ ನಂಬಿಕೆಯ ಸಂಕೇತಗಳಾಗಿದ್ದಾರೆ. 2018ರಲ್ಲಿ ತಾವು ಜನಕಪುರಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡ ಮೋದಿ, ಭಾರತದ ಪವಿತ್ರ ಯಾತ್ರಾ ಸ್ಥಳಗಳು ಮತ್ತು ಶ್ರೀರಾಮನ ಕಥೆಯು ನೇಪಾಳದೊಂದಿಗೂ ಹೇಗೆ ನಿಕಟವಾಗಿ ಬೆಸೆದುಕೊಂಡಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ.

ರಾಮಾಯಣ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ. ನಮಿತ್ ಮಲ್ಹೋತ್ರಾ ನಿರ್ಮಿಸಿದ್ದಾರೆ. ರಾಮಾಯದ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಚಿತ್ರ ತಂಡದ ಉದ್ದೇಶ ಆಗಿದೆ. ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆ ಪಡೆಯುತ್ತಿದ್ದು, ಜೊತೆಗೆ ಭರ್ಜರಿ ಆದಾಯ ಗಳಿಸುತ್ತಿದೆ.

ನವೆಂಬರ್ 5 ರಂದು ಬಿಡುಗಡೆಯಾದ ರಾಮಾಯಣ 18 ದಿನಗಳಲ್ಲಿ ವಿಶ್ವದಾದ್ಯಂತ ₹1,650 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಇದರೊಂದಿಗೆ ಅತೀ ಹೆಚ್ಚು ಹಣ ಗಳಿಕೆ ಮಾಡಿದ ದೇಶದ ಐದನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ ಚಿತ್ರದ ಕಲೆಕ್ಷನ್ ಇನ್ನೂ ಮುಂದುವರೆದಿದೆ. ಇದು ಭಾರತದ ಅತಿದೊಡ್ಡ ಚಿತ್ರವೂ ಆಗಬಹುದು ಎಂದು ನಂಬಲಾಗಿದೆ. ಭಾರತದ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಸಾಲಿಲ್ಲಿ ದಂಗಲ್ ಅಗ್ರಸ್ಥಾನದಲ್ಲಿದೆ. ಅಮಿರ್ ಖಾನ್ ಅವರ ದಂಗಲ್ ಸಿನಿಮಾ ₹2,070 ಕೋಟಿ ಗಳಿಸಿದೆ.

ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್ ಅಭಿನಯಿಸಿದ್ದಾರೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ರೆ, ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಚಿತ್ರಕ್ಕೆ ಒಟ್ಟು 4 ಸಾವಿರ ಕೋಟಿ ಬಂಡವಾಳ ಹೂಡಲಾಗಿದೆ. ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. ನವೆಂಬರ್ ಐದರಂದು ಮೊದಲ ಭಾಗ ಬಿಡುಗಡೆ ಆಗಿದೆ. 2028ರಲ್ಲಿ ಎರಡನೇ ಭಾಗ ಬರಲಿದೆ.