ಚಿಕ್ಕಮಗಳೂರಿನಲ್ಲಿ ಗಿಡ ನೆಟ್ಟು ಕಾರ್ಗಿಲ್ ವಿಜಯ್ ದಿವಸ್ ಅರ್ಥಪೂರ್ಣ ಆಚರಣೆ
ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಸಾರ್ವಜನಿಕರು, ಮಾಜಿ ಸೈನಿಕರು , ವಿವಿಧ ಸಂಘಸಂಸ್ಥೆಗಳ ಮುಖಂಡರು ಸೈನಿಕರ ತ್ಯಾಗ , ಶೌರ್ಯ, ಬಲಿದಾನವನ್ನು ನೆನೆಪು ಮಾಡಿಕೊಂಡು ಅವರ ನೆನೆಪಿನಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಣೆ ಮಾಡಿದರು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು : ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಸಾರ್ವಜನಿಕರು, ಮಾಜಿ ಸೈನಿಕರು , ವಿವಿಧ ಸಂಘಸಂಸ್ಥೆಗಳ ಮುಖಂಡರು ಸೈನಿಕರ ತ್ಯಾಗ , ಶೌರ್ಯ, ಬಲಿದಾನವನ್ನು ನೆನೆಪು ಮಾಡಿಕೊಂಡು ಅವರ ನೆನೆಪಿನಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಣೆ ಮಾಡಿದರು. ಚಿಕ್ಕಮಗಳೂರು ನಗರದ ಎಐಟಿ ಕಾಲೇಜ್ ಆವರಣದಲ್ಲಿ ಮಾಜಿ ಸೈನಿಕ ಸಂಘ, ಲಯನ್ಸ್ ಸಂಸ್ಥೆ, ಲಯನ್ಸ್ ಸೇವಾ ಟ್ರಸ್ಟ್, ವಿವಿಧ ಸಂಘ ಸಂಸ್ಥೆಗಳಿಂದ ಕಾರ್ಗಿಲ್ ವಿಜಯ್ ದಿವಸ್' ಆಚರಣೆಯನ್ನು ಮಾಡಲಾಯಿತು.
ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಕರ್ನಲ್ ಪಿ.ವಿ.ಹರಿ ದೇಶದ ಗಡಿಯಲ್ಲಿ ನೂರಾರು ಮಂದಿ ಸೈನಿಕರ ತ್ಯಾಗ, ಶೌರ್ಯ, ಬಲಿದಾನದಿಂದಾಗಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತಿದ್ದು ಸೈನಿಕರ ಸೇವೆಯನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡಾಗ ದೇಶ ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದರು. ಸೈನಿಕ ವೃತ್ತಿಯಲ್ಲಿ ಸತತವಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರುವುದಾಗಿ ತಿಳಿಸಿದ ಅವರು ಸೇನೆಯು ದೇಶದ ಒಂದು ಅವಿಭಾಜ್ಯ ಅಂಗವಾಗಿದೆ. ಇಂದಿನ ಯುವಪೀಳಿಗೆ ದೇಶ ಹಾಗೂ ನಾಡನ್ನು ರಕ್ಷಿಸುವ ಸಲುವಾಗಿ ಸೈನ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಸೇವೆಯಲ್ಲಿ ತೊಡಗಬೇಕು ಎಂದರು. ಭಾರತೀಯ ಸೈನಿಕನು ತಮ್ಮ ಕುಟುಂಬದ ನಂಟನ್ನು ಕಳೆದುಕೊಂಡು ಶತ್ರು ದೇಶಗಳ ವಿರುದ್ದ ಹೋರಾಡಿ ಸೇವೆ ಸಲ್ಲಿಸುತ್ತಿದ್ದಾನೆ. ಅಂತಹ ವೀರಪುತ್ರರನ್ನು ಸಮಾಜದ ನಾಗರಿಕರು ಗೌರವಿಸುವ ಕೆಲಸ ಮಾಡುವುದರಿಂದ ನಿವೃತ್ತಿ ನಂತರವು ಮಾಜಿ ಸೈನಿಕರಿಗೆ ಉತ್ಸಾಹ ತುಂಬಿದಂತಾಗುತ್ತದೆ ಎಂದು ಹೇಳಿದರು.
India@75: ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿ ತರೀಕೆರೆ ಹಳೆ ತಾಲೂಕು ಕಚೇರಿ
ಲಯನ್ಸ್ ಕ್ಲಬ್ ಸದಸ್ಯ ಎಂ.ವಿ.ನಾಗೇಂದ್ರ ಮಾತನಾಡಿ, ಪ್ರತಿಯೊಬ್ಬ ಭಾರತೀಯ ದೇಹದ ಕಣ ಕಣದಲ್ಲೂ ದೇಶಭಕ್ತಿ ಹೊಂದಿರಬೇಕು. ಇದರಿಂದ ನಮ್ಮ ದೇಶವನ್ನು ಸದೃಢ, ಸ್ವಚ್ಚಂದವಾಗಿ ರೂಪುಗೊಳಿಸಲು ಸಾಧ್ಯ. ಕುಟುಂಬದ ನಂಟನ್ನು ಕಳೆದುಕೊಂಡು ದೇಶ ಸೇವೆಗೆ ತೆರಳುವ ಸೈನಿಕನನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿನಿತ್ಯವು ವಂದನೆಗಳನ್ನು ನಾಗರೀಕರು ಸಲ್ಲಿಸಬೇಕು ಎಂದರು. ನಮ್ಮ ಸೈನಿಕರು ಪ್ರತಿನಿತ್ಯವು ದೇಶದ ನಾಗರಿಕರಿಗೆ ರಕ್ಷಣೆ ನೀಡುವ ಉನ್ನತ ಸೇವೆ ಮಾಡುತ್ತಿದ್ದು ನಾವುಗಳು ನೆಮ್ಮದಿಯಾಗಿ ಜೀವಿಸಲು ಮುಖ್ಯ ಕಾರಣವೇ ಸೈನಿಕರು ಹಾಗಾಗಿ ಅವರನ್ನು ಸ್ಮರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದೇ ವೇಳೆ ನಿವೃತ್ತ ಮಾಜಿ ಸೈನಿಕರಿಗೆ ವಿವಿಧ ಸಂಸ್ಥೆಗಳಿಂದ ಗೌರವಿಸಿ ನೆನಪಿನ ಕಾಣಿಕೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಲೆ: ಕಮಾಂಡರ್ ಡಾ|| ಆರ್.ಶ್ರೀನಿವಾಸ್, ಕ್ಯಾಪ್ಟನ್ ಈ.ಕೃಷ್ಣೇಗೌಡ, ಐಡಿಎಸ್‌ಜಿ ಪ್ರಾಂಶುಪಾಲ ಡಾ. ಕೆ.ಎ.ರಾಜಣ್ಣ, ಲಯನ್ಸ್ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಸಿ.ಶಶಿಪ್ರಸಾದ್ ಮತ್ತಿತರರು ಹಾಜರಿದ್ದರು.
ಸೈನಿಕರ ಸಾಹಸ, ಶೌರ್ಯ, ಬಲಿದಾನವನ್ನು ದೇಶ ಸದಾ ಸ್ಮರಿಸುತ್ತದೆ
24 ವರ್ಷದ ಹಿಂದೆ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದೆ ದೇಶದ ಒಂದಿಂಚು ನೆಲವನ್ನು ಬಿಡುವುದಿಲ್ಲ ಎಂಬ ಸಂಕಲ್ಪ ಮಾಡಿದಾಗ ಸಾವಿರಾರು ಸೈನಿಕರು ತಮ್ಮ ಪ್ರಾಣ ತೆತ್ತು ಭಾರತದ ಸಾರ್ವಭೌಮತೆಯನ್ನು ರಕ್ಷಿಸಿದ ಕ್ಷಣವೇ ಕಾರ್ಗಿಲ್ ವಿಜಯೋತ್ಸವ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿ.ಟಿ ರವಿ ಪಾಕಿಸ್ಥಾನಿ ಸೈನ್ಯ 1998 ರಲ್ಲಿ ಅಧಿಕೃತವಾಗಿ ಕಾರ್ಗಿಲ್ ಮೇಲೆ ಅಕ್ರಮಣ ನಡೆಸಿತ್ತು. ನಮ್ಮ ಸೈನಿಕರ ಸಾಹಸ, ಶೌರ್ಯ, ಬಲಿದಾನವನ್ನು ದೇಶದ ಜನ ಸದಾಕಾಲ ಸ್ಮರಿಸುವ ಮೂಲಕ ಕೃತಜ್ಞತೆ ಸಮರ್ಪಿಸುತ್ತದೆ. ಈ ದೇಶವನ್ನು ಕಾಯುತ್ತಿರುವುದೇ ಸೈನಿಕರು ಹಾಗೂ ರೈತರು, ರೈತರು ಅಕ್ಕಿ ಬೆಳೆದು 130 ಕೋಟಿ ಜನರ ಹೊಟ್ಟೆ ತುಂಬಿಸುವ ಕೆಲಸ ಮಾಡಿದರೆ , ಅತ್ತ ಸೈನಿಕರು ಪ್ರಾಣವನ್ನು ಕೊಟ್ಟು ದೇಶ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಸದಾಕಾಲಕ್ಕೂ ದೇಶ ವಾಸಿಗಳಿಗೆ ಪ್ರೇರಣೆ ತಂದು ಕೊಡುತ್ತದೆ ಎಂದರು.
ಕಾರ್ಗಿಲ್ ವಿಜಯ್ ದಿವಸ್: ವೀರ ಯೋಧರಿಗೆ ನುಡಿನಮನ ಸಲ್ಲಿಸಿದ ಟೀಂ ಇಂಡಿಯಾ ಕ್ರಿಕೆಟಿಗರು