ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಎನ್. ರಾಜಣ್ಣ, ದಲಿತರಲ್ಲಿ ಹೆಚ್ಚುತ್ತಿರುವ ಹೋಮ-ಹವನ ಸಂಸ್ಕೃತಿಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ದಲಿತರು ತಮ್ಮನ್ನು 'ಕೆಳವರ್ಗ' ಎಂದು ಕರೆದುಕೊಳ್ಳುವುದನ್ನು ವಿರೋಧಿಸಿದ ಅವರು, ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಲು ಕರೆ ನೀಡಿದರು.

ತುಮಕೂರು: ದಲಿತರಲ್ಲಿ ಹೋಮ-ಹವನ ಮಾಡಿಸುವುದು ಹೆಚ್ಚಾಗಿದೆ. ದೈವಭಕ್ತಿಯ ಜಾಸ್ತಿಯಾಗಿದೆ. ಇದರಿಂದ ಬ್ರಾಹ್ಮಣರು ಲಾಭ ಮಾಡಿಕೊಳ್ಳುತ್ತಾರೆ ಇದು ಸರಿ-ತಪ್ಪು ಎಂದು ಹೇಳುವುದಲ್ಲ, ನಮಗೆ ನಾವೇ ಅರ್ಥ ಮಾಡಿಕೊಳ್ಳಬೇಕಿದೆ ಎನ್ನುವ ಮೂಲಕ ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕ ಕೆ.ಎನ್‌.ರಾಜಣ್ಣ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಚರಕ ಚಾರಿಟೆಬಲ್ ಟ್ರಸ್ಟ್ ತುಮಕೂರು ವತಿಯಿಂದ ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಹವನ ಮಾಡಿಸುವವರು ನಾವೇ. ಕಾಣಿಕೆ ಕೊಡುವುದು ನಾವೇ

ಇತ್ತೀಚಿನ ದಿನಗಳಲ್ಲಿ ಪೂಜೆ, ಹೋಮ ಮಾಡಿಸುವವರು ನಾವೇ. ಹವನ ಮಾಡಿಸುವವರು ನಾವೇ. ಕಾಣಿಕೆ ಕೊಡುವುದು ನಾವೇ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವ ಸತ್ಯವನ್ನು ಜನರಿಗೆ ಅರ್ಥ ಮಾಡಿಸಬೇಕು. ವಾಸ್ತವಿಕತೆಯಿಂದ ದೂರ ಹೋಗಬಾರದು. ವಾಸ್ತವದ ಸತ್ಯ ಸಂಗತಿಗಳನ್ನು ನಿರ್ಭೀತಿಯಿಂದ ಹೇಳಿ ಜನರಲ್ಲಿ ಅರಿವು ಮೂಡಿಸಬೇಕು. ಸತ್ಯ ಹೇಳುವುದನ್ನು ಎಲ್ಲ ಯುವಕರು ಕಲಿಯಬೇಕು. ಇತಿಹಾಸ ಅರಿಯದೆ ಇತಿಹಾಸ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.

ನಾವ್ಯಾಕೆ ಕೆಳವರ್ಗ ಅಂತ ಹೇಳಿಕೊಳ್ಳಬೇಕು

ನಮಗೆ ನಾವೇ ಕೆಳವರ್ಗ ಅಂತ ಯಾಕೆ ಹೇಳಿಕೊಳ್ಳಬೇಕು. ಈ ವಿಚಾರವನ್ನು ನಾನು ಒಪ್ಪುವುದಿಲ್ಲ. ನಾವು ಕೆಳವರ್ಗ ಮತ್ತು ಮೇಲ್ವರ್ಗ ಅಂತ ಹೇಳಿಕೊಳ್ಳುವುದರ ಬದಲು ಹಿಂದುಳಿದವರು ಮತ್ತು ಮುಂದುವರೆದವರು ಅಂತ ಹೇಳಿಕೊಳ್ಳಲಿ. ಯಾರೆಲ್ಲ ಬಡವರು ಇರುತ್ತಾರೆ. ಅಸಹಾಯಕರು ಇರುತ್ತಾರೆ. ದನಿ ಇಲ್ಲದವರು ಇರುತ್ತಾರೆ. ಶೋಷಿತ ಸಮುದಾಯ ಇರುತ್ತದೆ, ಅವರು ಯಾವತ್ತೂ ಕೂಡ ಇನ್ನೊಬ್ಬರಿಗೆ ಮೋಸ ಮಾಡುವಂತಹ, ಅನ್ಯಾಯ ಮಾಡುವಂತಹ, ಸುಳ್ಳು ಹೇಳುವಂತಹ ಕೆಲಸವನ್ನು ಮಾಡುವುದಿಲ್ಲ. ನಾವು ಬೇರೆಯವರಿಗಿಂತ ಬುದ್ದಿವಂತರಿದ್ದೇವೆ. ಹಾಗಾಗಿ ನಾವ್ಯಾಕೆ ಕೆಳವರ್ಗ ಅಂತ ಹೇಳಿಕೊಳ್ಳಬೇಕು ಇದು ಸರಿಯಾದ ಚಿಂತನೆಯಲ್ಲ. ಕೆಳವರ್ಗ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಮುಂದೆ ಇಂತಹ ಪದಗಳನ್ನು ಬಳಸಬಾರದು ಎಂದು ಕಿವಿಮಾತು ಹೇಳಿದರು.

ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ.ಬೇರೆಯವರಿಗೆ ತೊಂದರೆ ಕೊಡುವುದು ಬೇಡ. ನಮ್ಮ ಮೇಲೆ ಯಾರಾದರೂ ದಬ್ಬಾಳಿಕೆ, ದೌರ್ಜನ್ಯ ಮಾಡುವಂತಹ ಸಂದರ್ಭಗಳು ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡೋಣ. ಆದರೆ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ. ದಲಿತ ಸಂಘಟನೆಯ ಯುವಕರೇ ಬೇರೆಯವರ ಪರ ಬಂದು ಬಿಡುತ್ತಾರೆ. ಸ್ವಾರ್ಥಕ್ಕೋಸ್ಕರ ಈ ರೀತಿ ಮಾಡುವುದು ಬೇಡ. ಇಂತಹ ಘಟನೆಗಳು ಆಗಬಾರದು. ಅಕ್ಷರ ಜ್ಞಾನದ ಆಧಾರದ ಮೇಲೆ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸುವಂತಹ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ದಲಿತ ಚಳವಳಿಯ ಸವಾಲು ಮತ್ತು ಸಾಧ್ಯತೆಗಳು

ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ‘ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು ವಿಷಯದ ಕುರಿತು ಮಾತನಾಡಿದರು. ರವಿಕುಮಾರ್ ಬಾಗಿ ಅವರು ‘ದಲಿತ ಚಳವಳಿಯ ಸವಾಲು ಮತ್ತು ಸಾಧ್ಯತೆಗಳು ಕುರಿತು ಮತ್ತು ವಿ.ಎಲ್.ನರಸಿಂಹಮೂರ್ತಿ ಅವರು, ‘ಸಮಕಾಲೀನ ಕರ್ನಾಟಕ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ವಿಷಯದ ಕುರಿತು ಮಾತನಾಡಿದರು.

ಇದೇ ವೇಳೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ತುಂಬಾಡಿ ರಾಮಯ್ಯ, ಬಾಬು ಜಗಜೀವನ್ ರಾಮ್ ರಾಜ್ಯ ಪ್ರಶಸ್ತಿ ಪುರಸ್ಕೃತ ಹೋರಾಟಗಾರರಾದ ಕುಂದೂರು ತಿಮ್ಮಯ್ಯ ಮತ್ತು ಕೆ.ದೊರೈರಾಜ್ ಅವರನ್ನು ಅಭಿನಂದಿಸಲಾಯಿತು.

ಇದನ್ನೂ ಓದಿ: ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ

ಸಮಾರಂಭದ ಅಧ್ಯಕ್ಷತೆಯನ್ನು ಚರಕ ಚಾರಿಟಬಲ್ ಮುಖ್ಯಸ್ಥ ಡಾ.ಬಸವರಾಜು ವಹಿಸಿ ಮಾತನಾಡಿದರು. ಎ.ರಾಮಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಕುಂದೂರು ಮುರಳಿ ಸ್ವಾಗತಿಸಿದರು. ಅಧ್ಯಾಪಕ ಡಾ.ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ತುಮಕೂರು ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸಾಮಾಜಿಕ ಹೋರಾಟಗಾರ ಶ್ರೀಪಾದ ಭಟ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು ಭಾಗವಹಿಸಿದ್ದರು.

ಇದನ್ನೂ ಓದಿ: ಧಾರವಾಡ: ಮಹಿಳೆ ಅಪಘಾತದಲ್ಲಿ ಸಾವು ಪ್ರಕರಣಕ್ಕೆ ರೋಚಕ ತಿರುವು: ಬಸ್‌ನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ