Asianet Suvarna News Asianet Suvarna News

India@75: ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿ ತರೀಕೆರೆ ಹಳೆ ತಾಲೂಕು ಕಚೇರಿ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಹಳೇ ತಾಲೂಕು ಕಟ್ಟಡ ಇಂದಿಗೂ ಸ್ವಾತಂತ್ರ್ಯ ಹೋರಾಟದ ಹಲವು ಕಥಾನಕಗಳಿಗೆ ಸಾಕ್ಷಿಯಾಗಿ ನಿಂತಿದೆ. 

Azadi Ki Amrit Mahothsav Chikkamagaluru Tarikere Witness to Freedom Fight hls
Author
Bengaluru, First Published Jul 22, 2022, 12:12 PM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಹಳೇ ತಾಲೂಕು ಕಟ್ಟಡ ಇಂದಿಗೂ ಸ್ವಾತಂತ್ರ್ಯ ಹೋರಾಟದ ಹಲವು ಕಥಾನಕಗಳಿಗೆ ಸಾಕ್ಷಿಯಾಗಿ ನಿಂತಿದೆ. ಈ ಕಟ್ಟಡದಲ್ಲಿ ಜೈಲು, ತಾಲೂಕು ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ಪೊಲೀಸ್‌ ಠಾಣೆ ಇತ್ತು. ಇದೇ ಕಟ್ಟಡದಲ್ಲಿ ಧ್ವಜ ಸ್ತಂಭವೂ ಇದೆ. ಇಲ್ಲೇ 1940ರ ದಶಕದಲ್ಲಿ ಯುವ ತರುಣನೊಬ್ಬ ಭಾರತ ಮಾತೆಗೆ ಜೈಕಾರ ಹಾಕಿ ಹೋರಾಟದ ಕಿಚ್ಚು ಹಚ್ಚಿದ್ದ.

ಅದು 1944ರ ಕಾಲಘಟ್ಟ. ಒಂದು ದಿನ ಬೆಳಗ್ಗೆ 11 ಗಂಟೆ ಸುಮಾರಿಗೆ ಹಳೇ ತಾಲೂಕು ಕಟ್ಟಡದ ಮುಂದೆ ಇದ್ದಕ್ಕಿದ್ದಂತೆ ‘ಭಾರತ್‌ ಮಾತಾಕೀ ಜೈ’ ಎಂಬ ಜೈಕಾರದ ಧ್ವನಿ ಕೇಳಿ ಬಂತು. ಒಂದೆರಡು ಬಾರಿ ಅಲ್ಲ, ಸುಮಾರು 12 ಬಾರಿ ಗಟ್ಟಿಧ್ವನಿಯಲ್ಲಿ ಈ ಜೈಕಾರ ಕೇಳಿಬರುತ್ತಿದ್ದಂತೆ ಸರ್ಕಾರಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ, ಸಾರ್ವಜನಿಕರು ಹೊರಗೋಡಿ ಬಂದರು. ಸುಮಾರು 16 ವರ್ಷ ವಯಸ್ಸಿನ ತರುಣನೊಬ್ಬ ಧ್ವಜ ಸ್ತಂಭದ ಮೇಲೆ ಹತ್ತಿ ನಿಂತಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಧಾವಿಸಿ ಬಂದ ಪೊಲೀಸರು ‘ಭಾರತ್‌ ಮಾತಾಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದ ಯುವಕನನ್ನು ವಶಕ್ಕೆ ಪಡೆದುಕೊಂಡರು.

India@75:ಮಹಿಳೆಯರ ಹೋರಾಟಕ್ಕೆ ಸಾಕ್ಷಿ ಸಿದ್ದಾಪುರದ ಮಾವಿನಗುಂಡಿ

ಆ ರೀತಿ ಘೋಷಣೆ ಕೂಗಿದ್ದು ಬೇರಾರೂ ಅಲ್ಲ. ಯುವ ಸ್ವಾತಂತ್ರ್ಯ ಹೋರಾಟಗಾರ ಶಿವಾನಂದಪ್ಪ (ಶಿವು). 16 ವರ್ಷದ ಶಿವಾನಂದಪ್ಪ ಅಂದು ಸರ್ಕಾರಿ ಕಟ್ಟಡದಲ್ಲಿರುವ ಧ್ವಜ ಸ್ತಂಭದ ಮೇಲೆ ಭಾರತದ ಧ್ವಜ ಹಾರಿಸಿ, 16 ಬಾರಿ ಭಾರತ್‌ ಮಾತಾಕೀ ಜೈ ಘೋಷಣೆ ಹಾಕುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದ. ಅದರಂತೆ ಬೆಳಗ್ಗೆ ಸ್ಥಳದಲ್ಲಿದ್ದ ಪೊಲೀಸರ ಹಾಗೂ ಸರ್ಕಾರಿ ಅಧಿಕಾರಿಗಳ ಕಣ್ತಪ್ಪಿಸಿ ಕಟ್ಟಡದಲ್ಲಿದ್ದ ಧ್ವಜ ಸ್ತಂಭ ಏರಿ ಸ್ವಾತಂತ್ರ್ಯದ ಧ್ವಜ ಹಾರಿಸಿದ್ದ. ನಂತರ ‘ಭಾರತ್‌ ಮಾತಾಕೀ ಜೈ’ ಘೋಷಣೆ ಹಾಕಿದ. ಆತನ ಗುರಿ 16 ಬಾರಿ ಭಾರತ್‌ ಮಾತಾ ಕೀ ಜೈ ಎಂಬ ಘೋಷಣೆ ಕೂಗುವುದಾಗಿತ್ತು. ಆದರೆ, 12 ಬಾರಿ ಜೈಕಾರ ಹಾಕುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ಶಿವಾನಂದಪ್ಪನನ್ನು ವಶಕ್ಕೆ ಪಡೆದು, ಜೈಲಿಗೆ ತಳ್ಳಿದರು.

ಗಾಂಧೀಜಿಯಿಂದ ಪ್ರೇರಣೆ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದೇಶಾದ್ಯಂತ ಸಂಚರಿಸುತ್ತಿದ್ದರು. ಆ ಸಂದರ್ಭದಲ್ಲಿ ಕಡೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗೂ ಆಗಮಿಸಿದ್ದರು. ಅವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕರೆಗೆ ಶಿವು ಸೇರಿ ತರೀಕೆರೆಯ ಹಲವು ಮಂದಿ ತರುಣರು ಹೋರಾಟಕ್ಕೆ ಧುಮುಕಿದರು.

ಶಿವಾನಂದಪ್ಪ ಹೋರಾಟಕ್ಕೆ ತಾಯಿ ಚಂದಮ್ಮ ಅವರ ವಿಶೇಷ ಬೆಂಬಲವೂ ಇತ್ತು. ಚಂದಮ್ಮ ಅವರಿಗೆ ಶಿವಾನಂದಪ್ಪ ಸೇರಿ ಒಟ್ಟು 8 ಮಕ್ಕಳಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕಾಗಿ ಒಬ್ಬ ಮಗ ಪ್ರಾಣ ತೆತ್ತರೂ ಪರವಾಗಿಲ್ಲ ಎಂಬ ದೃಢ ಸಂಕಲ್ಪ ಹೊಂದಿದ್ದರು. ಮನೆಯಲ್ಲಿ ತಾಯಿ ಕೊಟ್ಟಪ್ರೋತ್ಸಾಹದ ಜತೆಗೆ ಅದೇ ತರೀಕೆರೆ ಪಟ್ಟಣದ ಹಿರಿಯ ಹೋರಾಟಗಾರರಾದ ಗೋವಿಂದಪ್ಪ, ಟಿ.ಆರ್‌.ಪರಮೇಶ್ವರಪ್ಪ, ಎಲ್‌.ವಿ.ಬಸಪ್ಪ, ಸಿದ್ದಪ್ಪ, ಮಹಾದೇವಯ್ಯ, ಸಿದ್ರಾಮಯ್ಯ ಬೆಂಬಲ ಶಿವಾನಂದಪ್ಪಗಿತ್ತು. ಎಲ್ಲರೂ ಸೇರಿ ಬ್ರಿಟಿಷರ ವಿರುದ್ಧ ಸಾಮೂಹಿಕವಾಗಿ ಹೋರಾಟಕ್ಕೆ ಧುಮುಕಿದ್ದರು. ಅಸಹಕಾರ ಚಳವಳಿ ಸೇರಿ ಹಲವು ಚಳವಳಿಗಳಲ್ಲಿ ಶಿವಾನಂದಪ್ಪ ಪಾಲ್ಗೊಂಡು ಇತರರಿಗೂ ಸ್ಫೂರ್ತಿಯಾಗಿದ್ದರು.

India@75:ನೂರಾರು ಮಂದಿಯ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿ ಮಂಗಳೂರಿನ ಕೆನರಾ ಶಾಲೆ

ತಲುಪುವುದು ಹೇಗೆ?

ತರೀಕೆರೆ ತಾಲೂಕು ಕೇಂದ್ರ ಬೆಂಗಳೂರಿನಿಂದ 240 ಕಿ.ಮೀ, ಜಿಲ್ಲಾ ಕೇಂದ್ರ ಚಿಕ್ಕಮಗಳೂರಿಂದ ಸುಮಾರು 58 ಕಿ.ಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ- 206 ಪಟ್ಟಣದಲ್ಲಿ ಹಾದು ಹೋಗಿರುವುದರಿಂದ ಬಸ್ಸಿನ ವ್ಯವಸ್ಥೆಯೂ ಇದೆ. ಜತೆಗೆ ರೈಲು ಸಂಪರ್ಕ ಕೂಡ ಇದೆ.

- ಆರ್‌. ತಾರಾನಾಥ್‌

Follow Us:
Download App:
  • android
  • ios