ಕಾರ್ಗಿಲ್ ವಿಜಯ್ ದಿವಸ್: ವೀರ ಯೋಧರಿಗೆ ನುಡಿನಮನ ಸಲ್ಲಿಸಿದ ಟೀಂ ಇಂಡಿಯಾ ಕ್ರಿಕೆಟಿಗರು
* ಕಾರ್ಗಿಲ್ ವಿಜಯ್ ದಿವಸ್ ಸ್ಮರಿಸಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗರು
* ಜುಲೈ 26ರಂದು ದೇಶಾದಾದ್ಯಂತ ಕಾರ್ಗಿಲ್ ವಿಜಯ ದಿನವನ್ನಾಗಿ ಆಚರಿಸಲಾಗುತ್ತದೆ
* ಇಂದು 22ನೇ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತಿದೆ
ನವದೆಹಲಿ(ಜು.26): ಇಡೀ ದೇಶವೇ ಇಂದು(ಜು.26) ಅತ್ಯಂತ ಸಡಗರದಿಂದ 22ನೇ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿದೆ. 1999ರಲ್ಲಿ ನೆರೆಯ ಪಾಕಿಸ್ತಾನದ ಸೈನಿಕರ ಕುತಂತ್ರವನ್ನು ಭಾರತೀಯ ವೀರ ಯೋಧರು ಮೆಟ್ಟಿನಿಂತು ಟೈಗರ್ ಹಿಲ್ಸ್ ವಶಪಡಿಸಿಕೊಂಡ ನೆನಪಿಗಾಗಿ ಕಾರ್ಗಿಲ್ ವಿಜಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭಾರತ ಹಾಗೂ ಪಾಕಿಸ್ತಾನ ಸೈನಿಕರ ನಡುವಿನ ಕಾರ್ಗಿಲ್ ಯುದ್ದವು ಮೇ 2, 1999ರಲ್ಲಿ ಆರಂಭವಾಗಿ ಜುಲೈ 26ಕ್ಕೆ ಕೊನೆಗೊಂಡಿತು. ಕಾರ್ಗಿಲ್ ವಶಪಡಿಸಿಕೊಳ್ಳಲು ಹವಣಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ವೀರ ಯೋಧರು ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ನೀಡಿದ್ದರು. ಅಂದಿನ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ನಾವು ಕಾರ್ಗಿಲ್ ಯುದ್ದ ಗೆದ್ದಿದ್ದೇವೆ ಎಂದು ಘೋಷಿಸುವ ಮೂಲಕ ಯುದ್ದಕ್ಕೆ ಅಂತ್ಯಬಿದ್ದಿತು.
ಎಂದೂ ಮರೆಯದ ಕಾರ್ಗಿಲ್ ಸಮರ: ದುಷ್ಟ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದ ಭಾರತ!
ಈ ಭೀಕರ ಯುದ್ದದಲ್ಲಿ ಭಾರತದ 527 ಮಂದಿ ವೀರ ಮರಣವನ್ನಪ್ಪಿದರೆ, ಪಾಕಿಸ್ತಾನದ 1200ಕ್ಕೂ ಅಧಿಕ ದುಷ್ಟರು ಭಾರತದ ಸೈನಿಕರ ಗುಂಡಿಗೆ ಬಲಿಯಾಗಿದ್ದರು. ಭಾರತೀಯ ವೀರ ಯೋಧರ ಶೌರ್ಯ, ಸಾಹಸಗಳನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ನುಡಿನಮನ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಸುರೇಶ್ ರೈನಾ, ವಿವಿಎಸ್ ಲಕ್ಷ್ಮಣ್, ಗೌತಮ್ ಗಂಭೀರ್ ಟ್ವೀಟ್ ಮೂಲಕ ವೀರ ಯೋಧರ ಬಲಿದಾನಕ್ಕೆ ನುಡಿನಮನ ಸಲ್ಲಿಸಿದ್ದಾರೆ.
ಈ ಯುದ್ದಕ್ಕೇಕೆ ಅಷ್ಟೊಂದು ಮಹತ್ವ?
ಭಾರತೀಯ ಯುದ್ದ ಇತಿಹಾಸದಲ್ಲಿ ಕಾರ್ಗಿಲ್ ಯುದ್ದಕ್ಕೆ ಮಹತ್ತರವಾದ ಸ್ಥಾನವಿದೆ. ಪ್ರತಿಕೂಲದ ಪರಿಸ್ಥಿತಿಯ ಹೊರತಾಗಿಯೂ ದೇಶದ ರಕ್ಷಣೆಯ ವಿಚಾರದಲ್ಲಿ ಜೀವದ ಹಂಗು ತೊರೆದು ಹೋರಾಡುವ ಮೂಲಕ ಕಾರ್ಗಿಲ್ ವಶಪಡಿಸಿಕೊಳ್ಳುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದು ಒಂದು ಐತಿಹಾಸಿಕ ಕ್ಷಣವೆಂದರೆ ತಪ್ಪಾಗಲಾರದು. ಹೀಗಾಗಿ ಜುಲೈ 26ರಂದು ಪ್ರತಿ ವರ್ಷ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ.