ಶಂಕರ್ ಪರಂಗಿ

ಬೆಂಗಳೂರು[ಮಾ.22]:  ವಿಶ್ವವ್ಯಾಪಿ ಹರಡುತ್ತಿರುವ ಕೊರೋನಾ ಭೀತಿ ಹಿನ್ನಲೆ ರಾಜ್ಯದ ಬಹುತೇಕ ಐಟಿ, ಬಿಟಿ ಕಂಪನಿ ಸೇರಿದಂತೆ ವಿವಿಧ ಸಂಸ್ಥೆಗಳು ನೌಕರರಿಗೆ ವರ್ಕ್ ಫ್ರಮ್ ಹೋಮ್ ಗೆ ಅವಕಾಶ ನೀಡಿವೆ. ಆದರೆ ಇಂಟರ್‌ನೆಟ್‌ಗಾಗಿ ವೈಫೈ ಹಾಟ್‌ಸ್ಪಾಟ್, ಡಾಂಗಲ್ ಸಿಗದೇ ನೌಕರರು ಪರದಾಡುವಂತಾಗಿದೆ. 

ಬೆಂಗಳೂರಿನಾದ್ಯಂತ ಟೆಕ್ಕಿಗಳು ಹಾಗೂ ನೌಕರರು ಇಂದಿರಾನಗರ, ವಿಜಯನಗರ, ಜಯನಗರ, ರಾಜಾಜಿನಗರ, ಬಸವೇಶ್ವರ ನಗರ, ನಾಗರಭಾವಿ, ಆರ್.ಆರ್.ನಗರ ಸೇರಿದಂತೆ ಬಹುತೇಕ ನಗರದಲ್ಲಿರುವ ಜಿಯೋ, ವೋಡಾಫೋನ್, ಏರ್‌ಟೆಲ್ ಸೇರಿದಂತೆ ವಿವಿಧ ಕಂಪನಿಗಳ ಡಿವೈಸ್ ಸ್ಟೋರ್‌ಗಳಿಗೆ ವೈಫೈ ಹಾಟ್‌ಸ್ಪಾಟ್, ಡೊಂಗಲ್ ಖರೀದಿಸಲು ಅಲೆಯುತ್ತಿದ್ದಾರೆ. ಆದರೆ ಅನೇಕ ಕಂಪನಿಗಳು ಮನೆಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದರಿಂದ ಸ್ಟೋರ್‌ಗಳಲ್ಲಿ ಇದೀಗ ಉತ್ಪನ್ನಗಳ ಕೊರತೆ ಎದುರಾಗಿದೆ. 

ಮೋದಿಗೆ ಸಾಥ್‌: 5 ಗಂಟೆಗೆ ಚಪ್ಪಾಳೆ ಜೊತೆ ಮೊಳಗುತ್ತೆ ಚರ್ಚ್‌ ಬೆಲ್ಸ್..!

ಕೊರೋನಾ ಭೀತಿಯಿಂದ ಸುಮಾರು ಹತ್ತು ದಿನದ ಹಿಂದಿಯೇ ಸಂಸ್ಥೆಗಳು ವರ್ಕ್‌ಫ್ರಮ್ ಹೋಮ್ ಮೊರೆ ಹೋಗಿದ್ದರಿಂದ ಇಂಟರ್‌ನೆಟ್ ಸೌಲಭ್ಯ ಒದಗಿಸುವ ಡಿವೈಸ್‌ಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ವಿಜಯನಗರ ರಿಲಯನ್ಸ್ ಡಿಜಿಟಲ್ ಸ್ಟೋರ್‌ವೊಂದರಲ್ಲೇ ಕಳೆದ ಒಂದು ವಾರದಲ್ಲಿ ಡಿವೈಸ್‌ಗಾಗಿ ಸುಮಾರು 40ಕ್ಕೂ ಅಧಿಕ ಬೇಡಿಕೆಗಳು ಬಂದಿವೆ. ಅಲ್ಲದೇ ಬೆಂಗಳೂರಿನಾದ್ಯಂತ ಇರುವ ಜಿಯೋ ಸ್ಟೋರ್‌ಗಳಲ್ಲಿ ಉತ್ಪನಗಳು ಖಾಲಿಯಾಗಿವೆ. 

ಹಲವು ನೌಕರರು ಫ್ಲಿಪ್‌ಕಾರ್ಟ್, ಅಮೇಝಾನ್ ನಂತಹ ಆನ್‌ಲೈನ್ ಜಾಲತಾಣ ಮೂಲಕ ಡಿವೈಸ್ ಖರೀದಿಸಲು ಮುಂದಾಗಿದ್ದಾರೆ. ಆದರೆ ಇಂದು ಬುಕ್ ಮಾಡಿದರೆ ವಾರ ಇಲ್ಲವೇ 10 ದಿನ ನಂತರ ಡಿಲಿವರಿ ಮಾಡುವುದಾಗಿ ಆನ್‌ಲೈನ್ ಕಂಪನಿಗಳು ತಿಳಿಸಿವೆ. ಇದರಿಂದ ಏಕಾಎಕಿ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ ಪಡೆದುಕೊಂಡ ನೌಕರರಿಗೆ ಹಾಗೂ ಇದೇ ಮೊದಲ ಬಾರಿಗೆ ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರಿಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ಕೆಲವರು ಮೊಬೈಲ್ ಹಾಟ್‌ಸ್ಪಾಟ್ ಬಳಸುತ್ತಿದ್ದಾರೆ. 

ನೇರ ಇಂಟರ್‌ನೆಟ್ ಸಂಪರ್ಕ:

ಡಿವೈಸ್‌ಗಳು ಸಿಗದ ಕಾರಣ ಟೆಕ್ಕಿಗಳು ತಾವಿರುವ ಮನೆ ಅಥವಾ ಕೊಠಡಿಗಳಿಗೆ ಮೂರು ತಿಂಗಳ ಮಟ್ಟಿಗೆ ನೇರವಾಗಿ ವೈಯರ್ ಸಹಿತ ಇಂಟರ್‌ನೆಟ್ ಸಂಪರ್ಕ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ನಾಲ್ಕೈದು ಜನರ ಗುಂಪಾಗಿ ಸಂಪರ್ಕ ಪಡೆದು ಮನೆಯಲ್ಲೇ ಕುಳಿತು ಒಂದೆಡೆ ಕೆಲಸ ಮಾಡುತ್ತಿದ್ದಾರೆ. ವೈಯರ್ ಮೂಲಕ ನೀಡುವ ಈ ನೇರ ಇಂಟರ್ ನೆಟ್ ಸಂಪರ್ಕಕ್ಕೆ ಹೆಚ್ಚು ವೆಚ್ಚ ತಗಲುತ್ತದೆ. ಹಾಗಾಗಿ ವರ್ಕ್ ಫ್ರಾಮ್ ಹೋಮ್‌ಗಾಗಿ ಕೇವಲ ೧೫ರಿಂದ ಇಪ್ಪತ್ತು ದಿನಕ್ಕೆ ಮಾತ್ರ ಹೊಸ ಸಂಪರ್ಕ ಕೇಳಿದ್ದ ನೌಕರರಿಂದ ಹೆಚ್ಚು ಹಣ ಪಡೆದು ಮೂರು ತಿಂಗಳ ಷರತ್ತು ವಿಧಿಸಿ ಸಂಪರ್ಕ ಕೊಡುವುದು ಕಂಡು ಬಂದಿದೆ.

ಕಿಕ್‌ ಬಾಕ್ಸಿಂಗ್‌ ವೀಕ್ಷಿಸಿದ 72 ಮಂದಿಗೆ ಸೋಂಕು!

ವರ್ಕ್ ಫ್ರಮ್ ಹೋಮ್‌ನಿಂದ ಇಂಟರ್‌ನೆಟ್ ಡಿವೈಸ್‌ಗಳ ಬೇಡಿಕೆ ಅಧಿಕವಾಗಿದೆ. ಹೆಚ್ಚು ಹಣ ನೀಡಿದರೂ ಸಹ ಪ್ರಮುಖ ಸ್ಟೋರ್‌ಗಳಲ್ಲಿ ಹಾಗೂ ಆನ್‌ಲೈ ನ್‌ನಲ್ಲೂ ಸಿಗುತ್ತಿಲ್ಲ. ಹೀಗಾಗಿ ಹಲವರು ಕೊರೋನಾ ಭೀತಿ ನಡುವೆಯೂ ಕಂಪನಿಗಳಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ ಎಂದು ಸಾಫ್ಟವೇರ್ ಎಂಜಿನಿಯರ್ ಸತೀಶ್ ಕಳ್ಳಿಮನಿ ಹೇಳಿದ್ದಾರೆ.