ಮಂಗಳೂರು(ಮಾ.22): ಮಂಗಳೂರು ಕೆಥೋಲಿಕ್‌ ಧರ್ಮಪ್ರಾಂತ್ಯದ ಎಲ್ಲ ಚರ್ಚ್‌ಗಳಲ್ಲಿ ಭಾನುವಾರದ ಸಾಮೂಹಿಕ ಪ್ರಾರ್ಥನಾ ಸೇವೆಗಳನ್ನು ರದ್ದುಗೊಳಿಸುವಂತೆ ಬಿಷಪ್‌ ಫಾ.ಪೀಟರ್‌ ಪೌಲ್‌ ಸಲ್ದಾನಾ ತಮ್ಮ ಅಧೀನದ ಚರ್ಚ್‌ಗಳ ಧರ್ಮಗುರುಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಅಲ್ಲದೆ, ಭಾನುವಾರ ಚರ್ಚ್‌, ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆಯೂ, ಸಂಜೆ 5 ಗಂಟೆಗೆ ಕೈಚಪ್ಪಾಳೆ ತಟ್ಟುವುದು ಹಾಗೂ ಚರ್ಚ್‌ಗಳ ಗಂಟೆ ಮೊಳಗಿಸುವಂತೆಯೂ ಅವರು ಮನವಿ ಮಾಡಿದ್ದಾರೆ.

ಕೊರೋನಾ ಓಡ್ಸೋಕೆ ಮ್ಯಾಜಿಕ್ ಮಾಡಿದ್ರು ಕುದ್ರೋಳಿ ಗಣೇಶ್‌, ಜನರಲ್ಲಿ ಜಾಗೃತಿ

ಕರೋನಾ ವೈರಸ್‌ ಬಿಕ್ಕಟ್ಟು ಇಡೀ ಪ್ರಪಂಚದ ಜನರಲ್ಲಿ ಬಹಳಷ್ಟುದುಃಖ, ಭಯ ಮತ್ತು ಆತಂಕವನ್ನು ತಂದಿದೆ. ಸಾಂಕ್ರಾಮಿಕ ರೋಗದಿಂದ ಜನರನ್ನು ರಕ್ಷಿಸಲು ಹೆಚ್ಚಿನ ಸಂಖ್ಯೆಯ ವೈದ್ಯಕೀಯ, ಶುಶ್ರೂಷಾ ಮತ್ತು ಅರೆವೈದ್ಯಕೀಯ ಸಿಬ್ಬಂದಿ ತಮ್ಮ ಅಮೂಲ್ಯ ಸೇವೆಯನ್ನು ನೀಡುತ್ತಿದ್ದಾರೆ. ತುರ್ತು ಸಾರಿಗೆ ಸಿಬ್ಬಂದಿ ಕೂಡ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 22ರಂದು ಜನತಾ ಕರ್ಫ್ಯೂ ಆಚರಿಸಲು ಕರೆ ನೀಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾನುವಾರ ಸಂಜೆ 5 ಗಂಟೆಗೆ ಐದು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿರಿ ಎಂದೂ ಬಿಷಪ್‌ ಸಂದೇಶ ನೀಡಿದ್ದಾರೆ.

‘ಮಹಾಮಾರಿ ಕೊರೋನಾದಿಂದ ಬಚಾವ್ ಆಗಲು ಇದೊಂದೆ ಪರಿಹಾರ’

ಕ್ಯಾಥೊಲಿಕ್‌ ಸಂಪ್ರದಾಯದಲ್ಲಿ ಜನರನ್ನು ದೈವಿಕ ಸೇವೆಗೆ ಆಹ್ವಾನಿಸಲು ಮತ್ತು ಒಳ್ಳೆಯ ಅಥವಾ ದುಃಖದ ಸುದ್ದಿಗಳನ್ನು ಘೋಷಿಸಲು ಚರ್ಚ್‌ ಘಂಟೆಗಳು ಮೊಳಗುತ್ತವೆ. ಕೈ ಚಪ್ಪಾಳೆ ತಟ್ಟುವ ಮೂಲಕ ಶ್ಲಾಘಿಸುವುದು ವೈಯಕ್ತಿಕ ಮಟ್ಟದಲ್ಲಿ ಸಾಧ್ಯವಾದರೂ, ಸಾಂಸ್ಥಿಕ ಮಟ್ಟದಲ್ಲಿ ನಾವು ಚರ್ಚ್‌ ಗಂಟೆಗಳನ್ನು ಮೊಳಗಿಸುವ ಮೂಲಕ ವ್ಯಕ್ತಪಡಿಸಬಹುದು. ಆದ್ದರಿಂದ ಎಲ್ಲ ಚರ್ಚ್‌ಗಳ ಧರ್ಮಗುರುಗಳು ಭಾನುವಾರ ಸಂಜೆ 5 ಗಂಟೆಗೆ ಗಂಟೆ ಮೊಳಗಿಸುವ ವ್ಯವಸ್ಥೆ ಮಾಡಬೇಕು ಎಂದು ಬಿಷಪ್‌ ತಿಳಿಸಿದ್ದಾರೆ.

ಪ್ರಪಂಚದ ಎಲ್ಲ ಜನರಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯ. ವಿಶೇಷವಾಗಿ ಅನಾರೋಗ್ಯ ಪೀಡಿತರಿಗೆ ಮತ್ತು ಅವರಿಗೆ ಸಹಾಯ ಮಾಡುವವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು. ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವ ಕ್ರಮಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವವರಿಗೆ ದೇವರ ಮುಂದೆ ಮಧ್ಯಸ್ಥಿಕೆ ವಹಿಸಲು ನಾವು ಮರೆಯಬಾರದು ಎಂದೂ ಬಿಷಪ್‌ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ

ಕೊರೋನಾ ಜಾಗೃತಿಗಾಗಿ ಕೇಂದ್ರ ಸರ್ಕಾರದ ‘ಜನತಾ ಕರ್ಫ್ಯೂ’ ಕಾರ್ಯಕ್ರಮದ ಭಾಗವಾಗಿ ಎಲ್ಲರೂ ಶಟ್‌ಡೌನ್‌ ಪಾಲನೆ ಮಾಡಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್‌ ಕೆ.ಅಶ್ರಫ್‌ ಕರೆ ನೀಡಿದ್ದಾರೆ.