ಬೆಂಗಳೂರಿನ ಕಾಮಾಕ್ಷಿಪಾಳ್ಯದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅಕ್ರಮವಾಗಿ ಹೆಬ್ಬಾವುಗಳನ್ನು ಸಾಕುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳೀಯರ ದೂರಿನ ಮೇರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಅಡಗಿಸಿಟ್ಟಿದ್ದ ಹಾವುಗಳನ್ನು ರಕ್ಷಿಸಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯ ವಸತಿ ಸಮುಚ್ಚಯವೊಂದರಲ್ಲಿ ಅಕ್ರಮವಾಗಿ ಹೆಬ್ಬಾವುಗಳನ್ನು (ಪೈಥಾನ್) ಸಾಕುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ವನ್ಯಜೀವಿಗಳ ಅಕ್ರಮ ಸಂಗ್ರಹಣೆ ಜಾಲ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನುಮಾನ ತಂದ ಚಟುವಟಿಕೆ:

ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಈ ಖಾಸಗಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಕಳೆದ ಕೆಲವು ದಿನಗಳಿಂದ ನಿಗೂಢ ಹಾಗೂ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದ್ದವು. ಅಪರಿಚಿತ ವ್ಯಕ್ತಿಗಳ ಓಡಾಟ ಮತ್ತು ಫ್ಲ್ಯಾಟ್‌ನೊಳಗಿನ ವಿಚಿತ್ರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಸ್ಥಳೀಯ ನಿವಾಸಿಗಳಿಗೆ ತೀವ್ರ ಅನುಮಾನ ಬಂದಿತ್ತು. ಅಪಾರ್ಟ್‌ಮೆಂಟ್ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ, ಅವರು ತಕ್ಷಣವೇ ಈ ಕುರಿತು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಮಧ್ಯರಾತ್ರಿ ಅರಣ್ಯ ಇಲಾಖೆ ದಾಳಿ

ನಿವಾಸಿಗಳು ನೀಡಿದ ಖಚಿತ ಮಾಹಿತಿಯ ಮೇರೆಗೆ ಜಾಗೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಶುಕ್ರವಾರ ತಡರಾತ್ರಿ ಫ್ಲ್ಯಾಟ್‌ಗೆ ದಿಢೀರ್ ಭೇಟಿ ನೀಡಿ ಜಾಲಾಡಿದ್ದಾರೆ. ಈ ವೇಳೆ ಇಡೀ ಅಧಿಕಾರಿಗಳ ತಂಡಕ್ಕೆ ಶಾಕ್ ಆಗಿತ್ತು. ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಹೆಬ್ಬಾವುಗಳನ್ನು (ಪೈಥಾನ್) ಆ ಮನೆಯಲ್ಲಿ ಗುಟ್ಟಾಗಿ ಸಾಕುತ್ತಿರುವುದು ಬೆಳಕಿಗೆ ಬಂದಿದೆ.

ಕಾರ್ಡ್‌ಬೋರ್ಡ್ ಬಾಕ್ಸ್‌ನಲ್ಲಿ ಅಡಗಿಸಿಟ್ಟಿದ್ದ ಹಾವುಗಳು:

ಅಧಿಕಾರಿಗಳು ಮನೆಯ ಮೂಲೆ ಮೂಲೆಗಳನ್ನು ಪರಿಶೀಲಿಸಿದಾಗ, ಸಾಮಾನ್ಯ ಕಾರ್ಡ್‌ಬೋರ್ಡ್ ಬಾಕ್ಸ್ ನಲ್ಲಿ ಹಾವುಗಳನ್ನು ಕೂಡಿಟ್ಟಿರುವುದು ಪತ್ತೆಯಾಯಿತು. ಅತ್ಯಂತ ನಿರ್ಲಕ್ಷ್ಯ ಹಾಗೂ ಅಪಾಯಕಾರಿ ರೀತಿಯಲ್ಲಿ ಈ ಹಾವುಗಳನ್ನು ವಸತಿ ಪ್ರದೇಶದಲ್ಲಿ ಇಡಲಾಗಿತ್ತು. ವಿಷಯದ ಗಂಭೀರತೆಯನ್ನು ಪರಿಗಣಿಸಿದ ಅರಣ್ಯ ಇಲಾಖೆಯು ತಕ್ಷಣವೇ ಸ್ಥಳೀಯ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಕಾಮಾಕ್ಷಿಪಾಳ್ಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಫ್ಲ್ಯಾಟ್‌ನಲ್ಲಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಈ ಫ್ಲ್ಯಾಟ್‌ನಲ್ಲಿ ವಾಸವಿದ್ದ ವ್ಯಕ್ತಿ ಆಂಧ್ರಪ್ರದೇಶ ಮೂಲದವನು ಎಂದು ತಿಳಿದುಬಂದಿದೆ. ವಸತಿ ಸಮುಚ್ಚಯದಲ್ಲಿ ಇಂತಹ ಪ್ರಾಣಿಗಳನ್ನು ಸಾಕುವುದು ಕಾನೂನುಬಾಹಿರವಾಗಿರುವುದರಿಂದ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಸದ್ಯ NCR (Non-Cognizable Report) ದಾಖಲಿಸಿಕೊಳ್ಳಲಾಗಿದೆ.

ಮುಂದುವರಿದ ತನಿಖೆ:

ವನ್ಯಜೀವಿಗಳ ಅಕ್ರಮ ಸಾಗಣೆ ಅಥವಾ ಮಾರಾಟ ಜಾಲದೊಂದಿಗೆ ಈ ವ್ಯಕ್ತಿಗೆ ಸಂಪರ್ಕವಿದೆಯೇ? ಇಷ್ಟು ದೊಡ್ಡ ಹೆಬ್ಬಾವುಗಳನ್ನು ಎಲ್ಲಿಂದ ತರಲಾಗಿತ್ತು? ಮತ್ತು ಇವುಗಳನ್ನು ಅಪಾರ್ಟ್‌ಮೆಂಟ್‌ನಲ್ಲಿ ಇಟ್ಟುಕೊಳ್ಳಲು ಅಸಲಿ ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳ ಸುತ್ತ ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ತನಿಖೆ ಮುಂದುವರೆಸಿದ್ದಾರೆ