ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿ ಬೆಳ್ಳಂಬೆಳಗ್ಗೆ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್‌ನಲ್ಲಿ ನಿಂತಿದ್ದ ವೋಲ್ವೋ ಬಸ್‌ಗೆ ಹಿಂಬದಿಯಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಆ ಪ್ರದೇಶದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.

ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿ ಬೆಳ್ಳಂಬೆಳಗ್ಗೆಯೇ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ನಗರದ ಪ್ರಮುಖ ಜಂಕ್ಷನ್ ಆದ ಕೆ.ಆರ್. ಸರ್ಕಲ್ (ಕೃಷ್ಣರಾಜೇಂದ್ರ ವೃತ್ತ) ಬಳಿ ಎರಡು ಬಿಎಂಟಿಸಿ (BMTC) ಬಸ್‌ಗಳ ನಡುವೆ ಸಂಭವಿಸಿದ ಈ ಭೀಕರ ಡಿಕ್ಕಿಯಿಂದಾಗಿ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಬಸ್‌ ನಿಂದ ಹೊರತೆಗೆಯಲು ಹರಸಾಹಸಪಟ್ಟರು.

ಸಿಗ್ನಲ್‌ನಲ್ಲಿ ನಿಂತಿದ್ದ ವಜ್ರ ಬಸ್‌ಗೆ ಡಿಕ್ಕಿ ಹೊಡೆದ ಸಾಮಾನ್ಯ ಬಸ್:

ಬೆಳಗಿನ ಜಾವ ಎಂದಿನಂತೆ ಸಂಚಾರ ದಟ್ಟಣೆ ಆರಂಭವಾಗುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಕೆ.ಆರ್. ಸರ್ಕಲ್ ಜಂಕ್ಷನ್‌ನ ಸಿಗ್ನಲ್‌ನಲ್ಲಿ ಬಿಎಂಟಿಸಿಯ ‘ವಾಯು ವಜ್ರ’ (ವೋಲ್ವೋ) ಬಸ್ ನಿಂತಿತ್ತು. ಇದೇ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಮತ್ತೊಂದು ಸಾಮಾನ್ಯ ಬಿಎಂಟಿಸಿ ಬಸ್, ಸಿಗ್ನಲ್‌ನಲ್ಲಿ ನಿಂತಿದ್ದ ವಾಯು ವಜ್ರ ಬಸ್‌ಗೆ ಹಿಂಬದಿಯಿಂದ ಅತ್ಯಂತ ಜೋರಾಗಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಸಾಮಾನ್ಯ ಬಿಎಂಟಿಸಿ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಬಸ್‌ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಮಹಿಳೆಗೆ ಗಂಭೀರ ಗಾಯವಾಗಿ ಕಾಲ ಸಿಕ್ಕಿ ಹಾಕಿಕೊಂಡಿತ್ತು. ಅವರನ್ನು ಬಸ್‌ನಿಂದ ಹೊರತೆಗೆಯಲು ಹರಸಾಹಸ ಪಡಲಾಯ್ತು. ಕಬ್ಬಿಣದ ಸಲಾಖೆಗಳನ್ನು ಹರ ಸಾಹಸಪಟ್ಟು ತುಂಡರಿಸಿ ಮಹಿಳೆಯನ್ನು ಹೊರ ತೆಗೆಯಲಾಯ್ತು.

ಬೆಳ್ಳಂಬೆಳಗ್ಗೆ ಕೆಲಸಕ್ಕೆ ಹೊರಟವರಿಗೆ ಶಾಕ್:

ಬೆಳಗ್ಗಿನ ಅವಧಿಯಾಗಿದ್ದರಿಂದ ಬಸ್‌ಗಳಲ್ಲಿ ಕಚೇರಿ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದ್ದಕ್ಕಿದ್ದಂತೆ ಸಂಭವಿಸಿದ ಈ ಘೋರ ಅಪಘಾತದಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ದಿಕ್ಕಾಪಾಲಾಗಿದ್ದಾರೆ. ಅಪಘಾತದ ತೀವ್ರತೆಗೆ ಬಸ್‌ನ ಮುಂಭಾಗದ ಸೀಟುಗಳಲ್ಲಿದ್ದ ಹಲವು ಮಹಿಳಾ ಪ್ರಯಾಣಿಕರಿಗೆ ತಲೆ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಬಸ್‌ನೊಳಗೆ ಸಿಲುಕಿದ ಪ್ರಯಾಣಿಕರು: ರಕ್ಷಣೆಗೆ ಧಾವಿಸಿದ ಸ್ಥಳೀಯರು

ಅಪಘಾತ ನಡೆದ ತಕ್ಷಣವೇ ಗಾಯಾಳುಗಳ ಕಿರುಚಾಟ, ಆಕ್ರಂದನ ಮುಗಿಲು ಮುಟ್ಟಿತ್ತು. ಸಾಮಾನ್ಯ ಬಿಎಂಟಿಸಿ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ, ಅದರ ಹೆಡ್‌ಲೈಟ್ ಮತ್ತು ಮುಂಭಾಗದ ಕಬ್ಬಿಣದ ಭಾಗಗಳು ಒಳಗೆ ನುಗ್ಗಿದ್ದವು. ಇದರಿಂದಾಗಿ ಮುಂಭಾಗದ ಸೀಟಿನಲ್ಲಿದ್ದ ಹಲವಾರು ಪ್ರಯಾಣಿಕರು ಸೀಟುಗಳ ಮಧ್ಯೆ ಸಿಲುಕಿಕೊಂಡು ಹೊರಬರಲಾಗದೆ ಒದ್ದಾಡುತ್ತಿದ್ದರು.

ಘಟನೆಯನ್ನು ಕಣ್ಣಾರೆ ಕಂಡ ಸುತ್ತಮುತ್ತಲಿನ ಸಾರ್ವಜನಿಕರು ಹಾಗೂ ಹತ್ತಿರದಲ್ಲಿದ್ದ ವಾಹನ ಸವಾರರು ತಕ್ಷಣವೇ ರಕ್ಷಣೆಗೆ ಧಾವಿಸಿದರು. ನಜ್ಜುಗುಜ್ಜಾಗಿದ್ದ ಬಸ್‌ನ ಭಾಗಗಳನ್ನು ಸರಿಸಿ, ಒಳಗೆ ಸಿಲುಕಿದ್ದ ರಕ್ತಸಿಕ್ತ ಪ್ರಯಾಣಿಕರನ್ನು ಹೊರಗೆ ತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲು ಆಂಬ್ಯುಲೆನ್ಸ್‌ಗಳಿಗೆ ಮಾಹಿತಿ ನೀಡಲಾಯಿತು.

ಸಂಚಾರ ದಟ್ಟಣೆ

ನಗರದ ಅತ್ಯಂತ ಬ್ಯುಸಿ ವೃತ್ತಗಳಲ್ಲಿ ಒಂದಾದ ಕೆ.ಆರ್. ಸರ್ಕಲ್‌ನಲ್ಲಿ ಬೆಳ್ಳಂಬೆಳಗ್ಗೆಯೇ ಎರಡು ಸರ್ಕಾರಿ ಬಸ್‌ಗಳು ಅಪಘಾತಕ್ಕೀಡಾದ ಪರಿಣಾಮವಾಗಿ ಇಡೀ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಯಿತು. ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ಕರಗಿದ ಬಸ್‌ಗಳನ್ನು ರಸ್ತೆಯಿಂದ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆಯೇ ಅಥವಾ ಚಾಲಕನ ನಿರ್ಲಕ್ಷ್ಯವೇ ಕಾರಣವೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

ಕಾರಿಗೆ ಗುದ್ದಿದ ಬಿಎಂಟಿಸಿ

ಇನ್ನೊಂದು ಕಡೆ ಬೆಂಗಳೂರಲ್ಲಿ ಕಾರು-ಬಿಎಂಟಿಸಿ ಬಸ್ ನಡುವೆ ಅಪಘಾತ ನಡೆದಿದೆ. ವಿಧಾನಸೌಧ ಸಿಗ್ನಲ್ ಬಳಿ ಕಾರಿಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಬಚಾವ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.