- Home
- Viral News
- Nelamangala Python: ಜಕ್ಕಸಂದ್ರ ಜನರ ಜೀವ ಬಾಯಿಗೆ ಬರಿಸಿದ ಹೆಬ್ಬಾವು; ನೀರಗಂಟಿಯಿಂದ ಸಿಕ್ತು ಬಿಗ್ ಟ್ವಿಸ್ಟ್!
Nelamangala Python: ಜಕ್ಕಸಂದ್ರ ಜನರ ಜೀವ ಬಾಯಿಗೆ ಬರಿಸಿದ ಹೆಬ್ಬಾವು; ನೀರಗಂಟಿಯಿಂದ ಸಿಕ್ತು ಬಿಗ್ ಟ್ವಿಸ್ಟ್!
ನೆಲಮಂಗಲದ ಜಕ್ಕಸಂದ್ರದಲ್ಲಿ ದೈತ್ಯ ಹೆಬ್ಬಾವು ಕಾಣಿಸಿಕೊಂಡಿದೆ ಎಂದು ವೈರಲ್ ಆದ ಫೋಟೋ, ವಾಸ್ತವದಲ್ಲಿ ಎಐ-ಸೃಷ್ಟಿತ ನಕಲಿ ಚಿತ್ರವೆಂದು ಬಯಲಾಗಿದೆ. ಗ್ರಾಮದ ವಾಟರ್‌ಮೆನ್‌ಗೆ ಬುದ್ಧಿ ಕಲಿಸಲು ಅವರ ಸ್ನೇಹಿತರೇ ಈ ತಮಾಷೆ ಮಾಡಿದ್ದು, ಉರಗ ರಕ್ಷಕರ ತನಿಖೆಯಿಂದ ಸತ್ಯಾಂಶ ಹೊರಬಿದ್ದಿದೆ.

ಬೆಂಗಳೂರು ಗ್ರಾಮಾಂತರ: ಕಳೆದೆರಡು ದಿನಗಳಿಂದ ನೆಲಮಂಗಲ ತಾಲ್ಲೂಕಿನ ಜಕ್ಕಸಂದ್ರ ಭಾಗದ ಜನರ ನಿದ್ದೆಗೆಡಿಸಿದ್ದ 'ದೈತ್ಯ ಹೆಬ್ಬಾವಿನ' ರಹಸ್ಯ ಕೊನೆಗೂ ಬಯಲಾಗಿದೆ. ಬೃಹತ್ ಗಾತ್ರದ ಹೆಬ್ಬಾವೊಂದು ರಸ್ತೆಯ ಪಕ್ಕದ ಮನೆಯೊಂದರ ಕಾಂಪೌಂಡ್ ಒಳಗಿನ ವರಾಂಡದಲ್ಲಿ ಕಾಣಿಸಿಕೊಂಡಿದೆ ಎಂಬ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿ ಆತಂಕ ಸೃಷ್ಟಿಸಿತ್ತು. ಆದರೆ, ಅಸಲಿಗೆ ಇದು ನಿಜವಾದ ಹಾವಲ್ಲ, ಬದಲಾಗಿ ಗೆಳೆಯರ ಗುಂಪೊಂದು ಎಐ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಿದ 'ನಕಲಿ' ಫೋಟೋ ಎಂಬುದು ತಿಳಿದುಬಂದಿದೆ.
ಘಟನೆಯ ಹಿನ್ನೆಲೆ:
ಜಕ್ಕಸಂದ್ರ ಗ್ರಾಮದ ನಿವಾಸಿಗಳ ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ಬೃಹತ್ ಹೆಬ್ಬಾವಿನ ಫೋಟೋವೊಂದು ಹರಿದಾಡುತ್ತಿತ್ತು. ಫೋಟೋ ನೋಡಿದ ಜನ ಜಕ್ಕಸಂದ್ರದಲ್ಲಿ ಓಡಾಡಲು ಭಯಬಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಖ್ಯಾತ ಉರಗ ರಕ್ಷಕ ಸ್ನೇಕ್ ಅರುಣ್ ಅವರು ಸುಮಾರು 2 ಗಂಟೆಗಳ ಕಾಲ ಇಡೀ ಪರಿಸರದಲ್ಲಿ ಜಾಲಾಡಿದರು. ಆದರೆ ಎಲ್ಲಿಯೂ ಹಾವಿನ ಸುಳಿವು ಸಿಗಲಿಲ್ಲ. ತದನಂತರ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು ಎಐ ಬಳಸಿ ಸೃಷ್ಟಿಸಿದ ಚಿತ್ರ ಎಂಬುದು ಸಾಬೀತಾಯಿತು.
ವಾಟರ್‌ಮೆನ್‌ಗೆ ಬುದ್ಧಿ ಕಲಿಸಲು ಹೋಗಿ ಊರನ್ನೇ ಹೆದರಿಸಿದರು!
ಈ ಕಿಡಿಗೇಡಿತನದ ಹಿಂದೆ ಒಂದು ತಮಾಷೆಯ ಕಾರಣವಿತ್ತು. ಗ್ರಾಮದ ವಾಟರ್‌ಮೆನ್ ಪ್ರಸಾದ್ ಎಂಬುವವರು ಮನೆಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಬುದ್ಧಿ ಕಲಿಸಲು ಮತ್ತು ಅವರ ಮನೆ ಬಳಿ ಬರದಂತೆ ಹೆದರಿಸಲು ಅವರ ಸ್ನೇಹಿತರೇ ಈ ಪ್ಲಾನ್ ಮಾಡಿದ್ದರು. ಎಐ ಮೂಲಕ ದೈತ್ಯ ಹೆಬ್ಬಾವಿನ ಫೋಟೋ ಸೃಷ್ಟಿಸಿ, ಅದು ಜಕ್ಕಸಂದ್ರದಲ್ಲೇ ಇದೆ ಎಂದು ಹರಿಬಿಟ್ಟಿದ್ದರು.
ಯಾವಾಗ ಇದು ಕೇವಲ ಎಐ ಫೋಟೋ ಮತ್ತು ವಾಟರ್‌ಮೆನ್ ಕಾಲೆಳೆಯಲು ಮಾಡಿದ ತಂತ್ರ ಎಂದು ಗೊತ್ತಾಯಿತೋ, ಅಲ್ಲಿಯವರೆಗೆ ಭಯದಲ್ಲಿದ್ದ ಗ್ರಾಮಸ್ಥರು ಬಿದ್ದು ಬಿದ್ದು ನಕ್ಕಿದ್ದಾರೆ. ಆದರೆ, ಇಂತಹ ಸುಳ್ಳು ಸುದ್ದಿಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುವುದರಿಂದ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮತ್ತು ಉರಗ ರಕ್ಷಕರು ಮನವಿ ಮಾಡಿದ್ದಾರೆ.

