ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲದ ನಂತರ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಜೀವಭಯದ ಆತಂಕ ಎದುರಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಗುಪ್ತಚರ ಇಲಾಖೆಯು ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲ ಹಾಗೂ ಅದರ ನಂತರ ಜಿಲ್ಲೆಯ ರಾಜಕೀಯ ವಲಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಹಿನ್ನೆಲೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಜೀವಭಯದ ಆತಂಕ ಎದುರಾಗಿರುವ ಕಾರಣ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವ ಅಗತ್ಯವಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜೂ. 27ರಂದು ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಇರಬಾರದು, ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಗೋ ಬ್ಯಾಕ್ ಪ್ರದೀಪ್ ಈಶ್ವರ್ ಎಂದು ಘೋಷಣೆ ಕೂಗುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಪಮಾನ ಮಾಡಿದ್ದರು. ಇದರಿಂದ ಕುಪಿತರಾದ ಶಾಸಕರು ನಂತರ ಕಾರ್ಯಕ್ರಮ ಮುಗಿಸಿ ಹೊರ ಬಂದಾಗ ಹೊರಗೆ ಬಂದು ತೋಳು ತಟ್ಟಿ ಅಬ್ಬರಿಸಿದ್ದು, ಪ್ರತಿಭಟನಾಕಾರರು ಚಪ್ಪಲಿ ಎಸೆದಿದ್ದು ಭಾರೀ ಸುದ್ದಿಯಾಗಿತ್ತು. ಈ ಅನಿರೀಕ್ಷಿತ ಗಲಾಟೆ ಮತ್ತು ಗದ್ದಲ ಕ್ಷೇತ್ರದಲ್ಲಿ ಅಶಾಂತಿಗೆ ಕಾರಣವಾಗಿತ್ತು. ಮೇಲಾಗಿ ಈ ಘಟನೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪ, ದೂರು ಪ್ರತಿದೂರಿಗೆ ಕಾರಣವಾಗಿದೆ.
ಕ್ಷೇತ್ರದಲ್ಲಿ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು
ಈ ಬೆಳವಣಿಗೆಗಳ ಬೆನ್ನಲ್ಲೇ ಜುಲೈ 2ರಂದು ರಾಜ್ಯ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿರುವುದು ಗಮನಾರ್ಹವಾಗಿದೆ.
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಫಾರಸು
ಮುನ್ನೆಚ್ಚರಿಕೆ ಕ್ರಮಗಳಿಗೆ ಶಿಫಾರಸು ಸಲ್ಲಿಕೆಯಾಗಿರುವ ಕ್ಷೇತ್ರದ ಅಧ್ಯಯನದ ವರದಿಯಲ್ಲಿ ಶಾಸಕ ಪ್ರದೀಪ್ ಈಶ್ವರ್‌ಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆ ಅಥವಾ ಗೃಹ ಇಲಾಖೆಯಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಇದನ್ನೂ ಓದಿ: Pradeep Eswar: ಪ್ರದೀಪ್ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಅಚ್ಚರಿ ಮೂಡಿಸಿದ ಮಾಜಿ ಸಿಎಂ ಸಿದ್ದು ನಡೆ!


