Udupi: ಪೇಜಾವರ ಶ್ರೀಗಳ ರಾಮರಾಜ್ಯ ಸಂಕಲ್ಪಕ್ಕೆ ಭಾರಿ ಸ್ಪಂದನೆ: ಬಡವರಿಗೆ ಮನೆ, ಗೋವು ದತ್ತು ಸ್ವೀಕಾರ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ವೇಳೆ ಭಾರತ ದೇಶ ರಾಮ ರಾಜ್ಯವಾಗಬೇಕು ಅನ್ನುವ ಕನಸು ಹೊತ್ತು, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವಿಶಿಷ್ಟ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ.
ಉಡುಪಿ (ಜ.29): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವ ವೇಳೆ ಭಾರತ ದೇಶ ರಾಮ ರಾಜ್ಯವಾಗಬೇಕು ಅನ್ನುವ ಕನಸು ಹೊತ್ತು, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವಿಶಿಷ್ಟ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಉಳ್ಳವರು ಇಲ್ಲದವರಿಗೆ ನೆರವಾಗುವ ಮೂಲಕ, ರಾಮರಾಜ್ಯದ ಸಂಕಲ್ಪ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣ ಟ್ರಸ್ಟ್ ನ ಸದಸ್ಯರು ಆಗಿರುವ ಪೇಜಾವರ ಸ್ವಾಮಿಗಳ ಈ ಸಲಹೆಗೆ, ಈಗಾಗಲೇ ಪ್ರತಿಕ್ರಿಯೆ ದೊರಕಲಾರಂಭಿಸಿದೆ. ಬಡವರಿಗೆ ಮನೆ ಕಟ್ಟಿಸಿ ಕೊಡುವುದು, ಗೋವುಗಳನ್ನು ದತ್ತು ಪಡೆಯುವುದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವುದು ಸೇರಿದಂತೆ ಅನೇಕ ಸಲಹೆಗಳನ್ನು ಸ್ವಾಮೀಜಿ ನೀಡಿದ್ದರು. ಈಗಾಗಲೇ ಅಂತಹ ಕೆಲವು ರಾಮರಾಜ್ಯದ ಸಂಕಲ್ಪ ಈಡೇರಿಸುವಂತಹ ಕಾರ್ಯಗಳನ್ನು ಭಕ್ತರು ಆರಂಭಿಸಿದ್ದಾರೆ. ಉಳ್ಳವರು ಬಡವರಿಗೆ ನೆರವಾಗುವ ಈ ಸಂಕಲ್ಪಕ್ಕೆ ಹೆಚ್ಚಿನ ಮನ್ನಣೆ ದೊರೆತಿದ್ದು, ರಾಜ್ಯ ಮತ್ತು ದೇಶಾದ್ಯಂತ ಪ್ರಸಿದ್ಧಿಗೆ ಬರಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ನಮಗೆ ಕೇವಲ ರಾಮಮಂದಿರ ನಿರ್ಮಾಣ ಅಷ್ಟೇ ಅಲ್ಲ, ರಾಮ ರಾಜ್ಯ ಕಟ್ಟುವ ಕನಸು ಇದೆ: ಪೇಜಾವರ ಶ್ರೀ
ಕಲ್ಯಾಣಪುರ ಗಿರಿಜಾ ಪೂಜಾರ್ತಿ: ಅಯೋಧ್ಯ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನದಡಿ ಕಲ್ಯಾಣಪುರ ಗಿರಿಜಾ ಪೂಜಾರ್ತಿ ಅವರಿಗೆ ಮನೆ ನಿರ್ಮಾಣಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಮುಂದಾಗಿದ್ದಾರೆ. ಅಯೋಧ್ಯ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನ - 2023 ಅಭಿಯಾನದಡಿ ಕಲ್ಯಾಣಪುರ ಗಿರಿಜಾ ಪೂಜಾರ್ತಿ ಅವರಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದ್ದು, ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೊಂದಿಗೆ ಶಾಸಕ ರಘುಪತಿ ಭಟ್ ಅವರು ಮನೆಯ ಶಿಲಾನ್ಯಾಸವನ್ನು ನೆರವೇರಿಸಿದರು.
ಶ್ರೀರಾಮ ಮಂದಿರ 2024 ಜನವರಿ ವೇಳೆಗೆ ಪೂರ್ಣ: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ 2024 ಜನವರಿ ವೇಳೆಗೆ ಪೂರ್ಣಗೊಂಡು, ಅಯೋಧ್ಯಾಧಿಪತಿ ಶ್ರೀರಾಮಚಂದ್ರರ ಭವ್ಯ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ. ಪ್ರಸ್ತುತ ಇರುವ ಈ ಒಂದು ವರ್ಷದ ಅವಧಿಯಲ್ಲಿ ದೇಶದಾದ್ಯಂತ ರಾಮ ರಾಜ್ಯದ ನಿರ್ಮಾಣದ ಕನಸಿನ ನೆಲೆಯಲ್ಲಿ ವ್ಯಕ್ತಿಗತವಾಗಿ ಹಾಗೂ ಸಂಘ ಸಂಸ್ಥೆಗಳು ಸೇರಿ ಒಂದಷ್ಟು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿಗಳು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು "ಅಯೋಧ್ಯ ಶ್ರೀರಾಮ ಸೇವಾ ಸಂಕಲ್ಪ ಅಭಿಯಾನ - 2023" ಸಂಯೋಜಿಸಿರುತ್ತಾರೆ.
ವರ್ಷವಿಡೀ ದೇಶವ್ಯಾಪಿ ರಾಮ ಸೇವಾ ಅಭಿಯಾನ: ಪೇಜಾವರ ಶ್ರೀ
ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಉಪಾಧ್ಯಕ್ಷರಾದ ಉದಯ್ ಪೂಜಾರಿ, ಸದಸ್ಯರಾದ ನವೀನ್ ಕಾಂಚನ್, ಸತೀಶ್ ನಾಯ್ಕ್ , ಜಾನ್ಸನ್, ಪ್ರೇಮ ಕಿಶೋರ್, ರತ್ನ ಉಚ್ಚಿಲ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಜಯಂತಿ, ಪಕ್ಷದ ಹಿರಿಯರಾದ ಅಪ್ಪು ಜತ್ತನ್, ಕಿಶೋರ್, ಕೇಶವ ಪ್ರಭಾರಾವ್ ಹಾಗೂ ಸ್ಥಳೀಯ ಉಪಸ್ಥಿತರಿದ್ದರು.