ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ಗೆ ಹುಬ್ಬಳ್ಳಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಫಯಾಜ್ ಪರ ವಕೀಲರ ವಾದಗಳನ್ನು ತಿರಸ್ಕರಿಸಿದ ನ್ಯಾಯಾಧೀಶರು ಆರೋಪಿಯನ್ನು ಜೈಲಿನಲ್ಲೇ ಉಳಿಸಿಕೊಳ್ಳುವಂತೆ ಆದೇಶಿಸಿದ್ದಾರೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 6 ರಂದು ನಡೆಯಲಿದೆ.
ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಆರೋಪಿಗೆ ಜಾಮೀನು ತಿರಸ್ಕೃತಗೊಂಡಿದೆ. ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಫಯಾಜ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಜೈಲಿನಲ್ಲೇ ದಿನ ಕಳೆಯಬೇಕಾದ ಸ್ಥಿತಿ ಉಂಟಾಗಿದೆ.
ಸುದೀರ್ಘ ವಾದ-ಪ್ರತಿವಾದಗಳ ನಂತರ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಜಾಮೀನು ನೀಡುವ ಬಗ್ಗೆ ತಾಳ್ಮೆಯಿಂದ ಎಲ್ಲ ಅಂಶಗಳನ್ನು ಪರಿಶೀಲಿಸಿದರು. ಫಯಾಜ್ ಪರ ವಕೀಲರು, ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಕಾರ್ಯವಿಧಾನವನ್ನು ಸರಿಯಾಗಿ ಪಾಲಿಸಿಲ್ಲ ಹಾಗೂ ಬಂಧನದ ಮಾಹಿತಿ ಆರೋಪಿಯ ಪೋಷಕರಿಗೆ ನೀಡಿಲ್ಲ ಎಂಬ ಅಡಿಪಾಯದಲ್ಲಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಆದರೆ, ಈ ಎಲ್ಲಾ ಪಾಯಿಂಟ್‌ಗಳನ್ನು ಪರಿಗಣಿಸಿದ ನಂತರವೂ ನ್ಯಾಯಾಧೀಶರು ಫಯಾಜ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಕಳೆದ 1 ವರ್ಷ 4 ತಿಂಗಳಿಂದ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿ ಇರುವ ಫಯಾಜ್‌ಗೆ, ಜಾಮೀನಿನ ಮೂಲಕ ಬಿಡುಗಡೆ ಪಡೆಯಲು ಮುಂದಾದ ಪ್ರಯತ್ನಕ್ಕೆ ಈ ತೀರ್ಪು ಹಿನ್ನಡೆಯಾಗಿದೆ. ಈ ತೀರ್ಪಿನಿಂದ ನೇಹಾ ಹಿರೇಮಠ ಅವರ ಪೋಷಕರಿಗೆ ಸಮಾಧಾನ ಸಿಕ್ಕಿದಂತಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಗಳ ಭಾಗವಾಗಿ ಫಯಾಜ್ ಪರ ವಕೀಲರು ಈಗ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 6 ರಂದು ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದ್ದು, ನ್ಯಾಯಾಧೀಶರು ಫಯಾಜ್ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಎಪ್ರಿಲ್ 18,2024 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಆವರಣದಲ್ಲಿ 23 ವರ್ಷದ ನೇಹಾ ಹಿರೇಮಠ ಕೊ*ಲೆ ನಡೆದಿತ್ತು. ಫಯಾಜ್ ಚಾಕುವಿನಿಂದ ನೇಹಾ ಮೇಲೆ ದಾಳಿ ನಡೆಸುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
