ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ನ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ. ಈ ಪ್ರಕರಣವು ಲವ್ ಜಿಹಾದ್ ಆರೋಪಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಹುಬ್ಬಳ್ಳಿ (ಆ.4): ಕಳೆದ ವರ್ಷ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್‌ನ ಜಾಮೀನು ಅರ್ಜಿಯ ತೀರ್ಪು ಇಂದು (ಸೋಮವಾರ) ಪ್ರಕಟವಾಗಲಿದೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾಳನ್ನು ಫಯಾಜ್ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆಗೈದಿದ್ದ, ಈ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾದಂತೆ ತನಗೂ ಜಾಮೀನು ನೀಡುವಂತೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಪ್ರಕರಣದ ವಿಚಾರಣೆ ತೀವ್ರಗೊಂಡಿದ್ದು, ಇಂದು ನ್ಯಾಯಾಲಯದ ತೀರ್ಪಿನ ಕಡೆ ಎಲ್ಲರ ಕಣ್ಣು ನೆಟ್ಟಿದೆ. ನೇಹಾ ಕೊಲೆ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪಗಳೂ ಕೇಳಿಬಂದಿದ್ದವು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಘಟನೆ ನಡೆದು ಒಂದು ವರ್ಷ ಕಳೆದರೂ ಆರೋಪಿಗೆ ಶಿಕ್ಷೆ ಪ್ರಕಟವಾಗಿಲ್ಲ, ಇದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜಾಮೀನು ಅರ್ಜಿಯ ತೀರ್ಪು ಪ್ರಕರಣದ ಮುಂದಿನ ಹಾದಿಯನ್ನು ನಿರ್ಧರಿಸಲಿದೆ. ನೇಹಾ ಕುಟುಂಬ ಹಾಗೂ ಸಾರ್ವಜನಿಕರು ನ್ಯಾಯಾಲಯದ ತೀರ್ಮಾನವನ್ನು ಕಾತರದಿಂದ ಕಾಯುತ್ತಿದ್ದಾರೆ.