ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದನ್ನು ವಿರೋಧಿಸಿ ನಡೆದ ತೀವ್ರ ಹೋರಾಟಕ್ಕೆ ಜಯ ಸಿಕ್ಕಿದೆ. 'ಕನ್ನಡಪ್ರಭ' ವರದಿಯ ಫಲವಾಗಿ ಮತ್ತು ಕರವೇ ಪ್ರತಿಭಟನೆಯಿಂದಾಗಿ, ರೈಲ್ವೆ ಇಲಾಖೆಯು ನಡೆಯುತ್ತಿದ್ದ ಪರೀಕ್ಷೆಯನ್ನು ದಿಢೀರ್ ರದ್ದುಗೊಳಿಸಿ ಮುಂದೂಡಿದೆ.

ಹುಬ್ಬಳ್ಳಿ (ಮಾ.17) ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವುದನ್ನು ವಿರೋಧಿಸಿ ನಡೆದ ಕನ್ನಡಿಗರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಕುರಿತು'ಕನ್ನಡಪ್ರಭ' ಪತ್ರಿಕೆ ಸತತವಾಗಿ ವರದಿ ಪ್ರಕಟಿಸಿದ ಫಲವಾಗಿ, ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ರೈಲ್ವೆ ಇಲಾಖೆ ದಿಢೀರ್ ರದ್ದುಗೊಳಿಸಿ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಕನ್ನಡಪ್ರಭ' ವರದಿ ಬಿಗ್ ಇಂಪ್ಯಾಕ್ಟ್:

ರೈಲ್ವೆ ಮುಂಬಡ್ತಿ ಪರೀಕ್ಷೆಯಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗೆ ಮಾತ್ರ ಅವಕಾಶ ನೀಡಿ, ಕನ್ನಡವನ್ನು ಕೈಬಿಟ್ಟಿರುವ ಕುರಿತು 'ಕನ್ನಡಪ್ರಭ' ಕಳೆದ ನಾಲ್ಕು ದಿನಗಳಿಂದ ವಿಸ್ತೃತವಾದ ವರದಿಗಳನ್ನು ಪ್ರಕಟಿಸಿತ್ತು. ಈ ವರದಿಯು ಕನ್ನಡಿಗರನ್ನು ಎಚ್ಚರಿಸಿದ್ದಲ್ಲದೆ, ರೈಲ್ವೆ ಇಲಾಖೆಯ ಭಾಷಾ ತಾರತಮ್ಯವನ್ನು ಎತ್ತಿ ತೋರಿಸಿತ್ತು. ಪತ್ರಿಕೆಯ ಈ ವರದಿಯ ಬೆನ್ನಲ್ಲೇ ಕನ್ನಡಿಗರ ಪರ ವಿವಿಧ ಸಂಘಟನೆಗಳ ಹೋರಾಟ ತೀವ್ರಗೊಂಡಿತ್ತು.

ಇಂದು ಪರೀಕ್ಷೆ ಕೇಂದ್ರಗಳಿಗೆ ಮುತ್ತಿಗೆಗೆ ಮುಂದಾಗಿದ್ದ ಕರವೇ

ಪತ್ರಿಕೆಯ ವರದಿಯನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಇದರ ಭಾಗವಾಗಿ ಇಂದು ಹುಬ್ಬಳ್ಳಿಯ ಆರ್‌ಆರ್‌ಸಿ (RRC) ಕಚೇರಿಯ ಎದುರು ಒಂದು ಗಂಟೆಗೂ ಹೆಚ್ಚು ಕಾಲ ಕರವೇ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿದರು. ಅಧಿಕಾರಿಗಳ ಧೋರಣೆಯ ವಿರುದ್ಧ ಆಕ್ರೋಶ ಹೊರಹಾಕಿದರು.

ಪರೀಕ್ಷಾ ಕೇಂದ್ರದಿಂದ ಹೊರಬಂದ ಅಭ್ಯರ್ಥಿಗಳು

ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ರೈಲ್ವೆ ಅಧಿಕಾರಿಗಳು, ನಡೆಯುತ್ತಿದ್ದ ಪರೀಕ್ಷೆಯನ್ನು ಅರ್ಧಕ್ಕೆ ರದ್ದುಗೊಳಿಸಿ ಮುಂದೂಡಿದರು. ತಕ್ಷಣವೇ ಪರೀಕ್ಷಾ ಸಿಬ್ಬಂದಿಯು ಪರೀಕ್ಷಾ ಕೇಂದ್ರದಲ್ಲಿದ್ದ ಅಭ್ಯರ್ಥಿಗಳನ್ನು ಹೊರಕ್ಕೆ ಕಳುಹಿಸಿದರು. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗದೇ ಕಂಗೆಟ್ಟಿದ್ದ ಕನ್ನಡಿಗ ಅಭ್ಯರ್ಥಿಗಳು, ಪರೀಕ್ಷೆ ರದ್ದಾದ ಸುದ್ದಿ ಕೇಳಿ ಅತ್ಯಂತ ಖುಷಿಯಿಂದ ಪರೀಕ್ಷೆ ಕೇಂದ್ರದಿಂದ ಹೊರಬಂದರು.

ಮುಂದಿನ ನಿರ್ಧಾರದ ಬಗ್ಗೆ ಆರ್.ಆರ್.ಸಿ. ಸ್ಪಷ್ಟನೆ

ಈ ಕುರಿತು ಮಾಹಿತಿ ನೀಡಿದ ಹುಬ್ಬಳ್ಳಿ ಆರ್‌ಆರ್‌ಸಿ ಚೇರ್ಮನ್ ಆಸಿಫ್ ಅನ್ಸಾರಿ ಅವರು, 'ಪ್ರಸ್ತುತ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಮುಂದಿನ ದಿನಾಂಕವನ್ನು ಅನಂತರ ಪ್ರಕಟಿಸಲಾಗುವುದು. ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವ ಬಗ್ಗೆ ಮೇಲಧಿಕಾರಿಗಳು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.