ಬೆಳೆ ಕಟಾವಿಗೆ ಬರುವ ಸಮಯದಲ್ಲಿ ಅಕಾಲಿಕ ಮಳೆಯಿಂದ ಕಟಾವು ವಿಳಂಬ ಕಣ್ಣಿಗೆ ಕಾಣುವ ವರ್ಷದ ಕೂಳು ಬಾಯಿಗೆ ಸಿಗುವುದಿಲ್ಲವೋ ಎಂಬ ಆತಂಕ
ವರದಿ : ಎಸ್.ಆರ್.ಪ್ರಕಾಶ್
ಸಾಲಿಗ್ರಾಮ (ನ.20): ಬಿತ್ತನೆ ಸಮಯದಲ್ಲಿ ಮಳೆಗಾಗಿ (Rain) ಎದುರು ನೋಡುತ್ತಿದ್ದ ರೈತರು (Farmers). ಈಗ ಕಟಾವಿಗೆ ಬರುವ ಸಮಯದಲ್ಲಿ ಅಕಾಲಿಕ ಮಳೆಯಿಂದ (Untimely Rain) ಕಟಾವು ವಿಳಂಬವಾಗುತ್ತಿದ್ದು, ಕಣ್ಣಿಗೆ ಕಾಣುವ ವರ್ಷದ ಕೂಳು ಬಾಯಿಗೆ ಸಿಗುವುದಿಲ್ಲವೋ ಎಂಬ ಆತಂಕದಲ್ಲಿದ್ದಾರೆ. ಮುಂಗಾರು (Monsoon) ಹಂಗಾಮು ವಿಳಂಬದಿಂದ ತಾಲೂಕಿನಾದ್ಯಂತ ಬಿತ್ತನೆ ಸಂದರ್ಭದಲ್ಲಿ ಮಳೆಗಾಗಿ ರೈತರು ಆಕಾಶ ಎದುರು ನೋಡುತ್ತಿದ್ದರು. ಆದರೂ ಸುರಿದ ಮಳೆ ಜತೆಗೆ ಕಾಲುವೆ ನೀರನ್ನು ಅನುಸರಿಸಿಕೊಂಡು ಆತ್ಮ ವಿಶ್ವಾಸದಿಂದ ವಾಣಿಜ್ಯ ಬೆಳೆಗಳ ಬಿತ್ತನೆ ಕೃಷಿ ಚಟುವಟಿಕೆ ಹಾಗೂ ಭತ್ತದ (Paddy) ನಾಟಿ ಕಾರ್ಯಗಳು ಮುಗಿಸಲಾಗಿತ್ತು. ಅಷ್ಟೇ ಅಲ್ಲದೇ, ಡೀಸೆಲ್ ಬೆಲೆ ಏರಿಕೆಯಿಂದ ಉಳುಮೆ ಟ್ರ್ಯಾಕ್ಟರ್ (Tractor), ಕೃಷಿ ಚಟುವಟಿಕೆ ಸಲಕರಣೆ ಸಾಗಾಣಿಕೆ ವೆಚ್ಚ ದುಬಾರಿ ಇನ್ನೊಂದೆಡೆ ಕೊರೋನಾ ಲಾಕ್‌ಡೌನ್‌ನಿಂದ (Corona Lockdown) ಆರ್ಥಿಕ ಸಂಕಷ್ಟದ ಪರಿಸ್ಥಿತಿ ನಡುವೆಯೂ ಛಲ ಬಿಡದ ಕೃಷಿಕ ರೈತಾಪಿ ವರ್ಗ ಕಷ್ಟಪಟ್ಟು ಸುಮಾರು 25,255 ಹೆಕ್ಟೇರ್ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ.95ರಷ್ಟು ಭತ್ತವನ್ನು ಬೆಳೆಯಲಾಗಿತ್ತು. ಆದರೆ, ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ, ಮಳೆ ವಾತಾವರಣ ಕಂಡು ಎಚ್ಚರ ವಹಿಸಿ ಬೆಳೆದ ಭತ್ತದ ಬೆಳೆ (Paddy) ವ್ಯರ್ಥವಾಗುವುದೇ ಎಂಬ ಆತಂಕದ ಚಿಂತೆಗೆ ರೈತರು ಜಾರಿದ್ದು, ಬಿಸಿಲು ಝಳಪಿಸುವುದಕ್ಕಾಗಿ ಕಾದು ಕುಳಿತ್ತಿದ್ದಾರೆ.
ಕಟಾವು ಹಂತದಲ್ಲಿ ಭತ್ತ:ಕಾವೇರಿ ನದಿಯ (Cauvery River) ರಾಮ ಸಮುಂದ್ರ ಅಣೆಕಟ್ಟೆ ನಾಲಾ ವ್ಯಾಪ್ತಿಯ ನೀರಾವರಿ (Irrigation) ಅಚ್ಚು ಕಟ್ಟು ಪ್ರದೇಶದ ಗದ್ದೆಗಳಲ್ಲಿ ಬೆಳೆಯಲಾಗಿದ್ದ ಹಲವು ಬಗೆಯ ಭತ್ತದ ತಳಿಗಳು ಈಗಾಗಲೇ ಎತ್ತರಕ್ಕೆ ಬೆಳೆದು ತೆನೆ ಬಲಿತು, ಪೈರು ಪಕ್ವವಾಗಿ ತೆನೆ ತುಂಬಿದ ಪೈರುಗಳಲ್ಲಿ ಭತ್ತ ಸಿಂಗಾರಗೊಂಡು ನಳನಳಿಸುತ್ತ ನೆಲನೋಡುತ್ತಿವೆ, ಪ್ರಸ್ತುತ ನಿರ್ಣಾಯಕ ಹಂತದಲ್ಲಿದ್ದು, ಬಿಸಿಲಿದ್ದರೆ ಇಷ್ಟೊತ್ತಿಗೆಲ್ಲ ಕಟಾವಿಗೆ ಸಜ್ಜುಕೊಳ್ಳುವ ಹಂತದಲ್ಲಿರುತ್ತಿದ್ದರು. ಇನ್ನೂ ಬಹುತೇಕ ಭಾಗಗಳಲ್ಲಿ ರೈತರು ಸಂಪ್ರದಾಯಿಕ ಕಟಾವು ನಡೆಸಿ ಭತ್ತ ಮನೆ ಕಣಜ ಸೇರುತ್ತಿತ್ತು. ಆದರೆ, ನಿರಂತರ ಮಳೆಯಿಂದಾಗಿ (Continuous rain) ಈಗ ಎಲ್ಲವೂ ಸ್ಥಗಿತವಾಗಿದೆ.
ರೈತರಲ್ಲಿ ಆತಂಕ: ಇನ್ನೂ ಹೀಗೆ ಮಳೆ ಸುರಿಯುತ್ತಿದ್ದರೆ ಭತ್ತ, ರಾಗಿ (Millet) ತೆನೆ ಕೊಳೆಯುತ್ತವೆ ಜತೆಗೆ ಭತ್ತಗಳು ಜಾಳಾಗಿ ಇಳುವರಿ ಮೇಲೆ ಮಾರಕ ಪರಿಣಾಮ ಬೀರುವುದಲ್ಲದೇ ತೆನೆಯಲ್ಲಿಯೇ ಮೊಳಕೆಯೊಡೆಯುತ್ತಿವೆ. ಜತೆಗೆ ಭತ್ತ ಮಳೆಗೆ ಸತತವಾಗಿ ನೆನೆಯುವುದರಿಂದ ಕಟಾವಿನ ಸಮಯ ತೆನೆಯಿಂದ ಭತ್ತ ನೆಲಕ್ಕೆ ಬೀಳುವುದರಿಂದ ನಿರೀಕ್ಷಿಸಿದಷ್ಟು ಬೆಳೆ ರೈತರ ಕೈಗೆ ಸೇರುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಮತ್ತೊಂದಡೆ ಕಬ್ಬು (Sugar cane), ಜೋಳ, ಅವರೆ ಇನ್ನಿತರ ವಾಣಿಜ್ಯ ಬೆಳೆಗಳು ಕೂಡ ಮಳೆಯಿಂದಾಗಿ ಕೃಷಿ (Agriculture) ಚಟುವಟಿ ನಡೆಸದೆ ನಷ್ಟದ ಹಾದಿಯಲ್ಲಿದ್ದು, ಬೆಳೆದ ಬೆಳೆಗಳು ಏನಾದಿತೋ ಎಂಬ ಚಿಂತೆ ರೈತರನ್ನು (Farmers) ಆವರಿಸಿದ್ದು, ಎಲ್ಲಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಭಯ ಅನ್ನದಾತರನ್ನು ಕಾಡುತ್ತಿದೆ.
ಕಟಾವಿನ ಆರಂಭದಲ್ಲಿ ತಾಲೂಕಿನಾದ್ಯಂತ ಸುಗ್ಗಿ ಸಂಭ್ರಮ ಸಡಗರದೊಂದಿಗೆ ಭತ್ತ ಕಟಾವು ಮಾಡಿ, ಭತ್ತ ರಾಶಿಯನ್ನು ಮನೆಗೆ ಕೊಂಡೊಯ್ಯುವ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಕಟಾವು ಮಾಡುತ್ತಿದ್ದ ಕೃಷಿಕರು, ನೋವುಗಳನ್ನು ಮರೆತು ಸಂಜೆಯ ತನಕ ಖುಷಿಯಿಂದ ಕಟಾವು ಮಾಡುತ್ತಿದ್ದರು. ಆದರೀಗ ನಿರಂತರ ಮಳೆಯ ಕಾರಣದಿದಂತ ಆಸೆಗೆಲ್ಲ ತಣ್ಣೀರೆರೆಚಿದಂದಾಗಿದೆ. ಭತ್ತದ ಗದ್ದೆಗಳು ಹಸಿಯಾಗಿಯೇ ಇವೆ. ಇದರಿಂದಾಗಿ ಯಂತ್ರಗಳಿಂದಾಗಲಿ, ಕೂಲಿ ಕಾರ್ಮಿಕರಿಂದಾಗಲಿ (labours) ಕಟಾವು ನಡೆಸಲಾಗದೆ ಅಡಕತ್ತರಿಗೆ ಸಿಲುಕಿದ್ದಾರೆ.
