ಅಕ್ಷರ್-ಪಂತ್ ಸ್ಪೋಟಕ ಬ್ಯಾಟಿಂಗ್: ಗುಜರಾತ್‌ಗೆ ಕಠಿಣ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯಲು ಮತ್ತೊಮ್ಮೆ ವಿಫಲವಾಯಿತು. ಸ್ಪೋಟಕ ಆರಂಭಿಕ ಬ್ಯಾಟರ್ ಜೇಕ್ ಫೇಸರ್ 14 ಎಸೆತಗಳಲ್ಲಿ 23 ರನ್ ಗಳಿಸಿ ಸಂದೀಪ್ ವಾರಿಯರ್‌ಗೆ ವಿಕೆಟ್ ಒಪ್ಪಿಸಿದರು.
ನವದೆಹಲಿ(ಏ.24): ನಾಯಕ ರಿಷಭ್ ಪಂತ್ ಹಾಗೂ ಅಕ್ಷರ್ ಪಟೇಲ್ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್ ಬಾರಿಸಿದ್ದು, ಗುಜರಾತ್ ಟೈಟಾನ್ಸ್ ತಂಡಕ್ಕೆ ಕಠಿಣ ಗುರಿ ನೀಡಿದೆ. ಡೆಲ್ಲಿ ಪರ ಅಕ್ಷರ್ ಪಟೇಲ್ 66 ರನ್ ಚಚ್ಚಿದರೆ, ನಾಯಕ ರಿಷಭ್ ಪಂತ್ ಅಜೇಯ 88 ರನ್ ಸಿಡಿಸಿದರು
ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆಯಲು ಮತ್ತೊಮ್ಮೆ ವಿಫಲವಾಯಿತು. ಸ್ಪೋಟಕ ಆರಂಭಿಕ ಬ್ಯಾಟರ್ ಜೇಕ್ ಫೇಸರ್ 14 ಎಸೆತಗಳಲ್ಲಿ 23 ರನ್ ಗಳಿಸಿ ಸಂದೀಪ್ ವಾರಿಯರ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಪೃಥ್ವಿ ಶಾ ಕೂಡಾ 11 ರನ್ ಗಳಿಸಿ ಸಂದೀಪ್ ವಾರಿಯರ್‌ಗೆ ಎರಡನೇ ಬಲಿಯಾದರು. ಇನ್ನು ಡೇವಿಡ್ ವಾರ್ನರ್ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಶಾಯ್ ಹೋಪ್ ಕೇವಲ 5 ರನ್ ಗಳಿಸಿ ಸಂದೀಪ್ ವಾರಿಯರ್‌ಗೆ ಮೂರನೇ ಬಲಿಯಾದರು. ಆಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಕೋರ್ 5.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 44 ರನ್.
ಅಕ್ಷರ್-ಪಂತ್ ಜುಗಲ್ಬಂದಿ: ಪವರ್‌ಪ್ಲೇನೊಳಗೆ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 4ನೇ ವಿಕೆಟ್‌ಗೆ ನಾಯಕ ರಿಷಭ್ ಪಂತ್ ಹಾಗೂ ಆಲ್ರೌಂಡರ್ ಅಕ್ಷರ್ ಪಟೇಲ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಗುಜರಾತ್ ಬೌಲರ್‌ಗಳನ್ನು ಕಾಡಿದರು. 4ನೇ ವಿಕೆಟ್‌ಗೆ ಈ ಜೋಡಿ ಕೇವಲ 68 ಎಸೆತಗಳಲ್ಲಿ 113 ರನ್‌ಗಳ ಜತೆಯಾಟವಾಡಿತು. ಅಕ್ಷರ್ ಪಟೇಲ್ 43 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಆಕರ್ಷಕ 66 ರನ್ ಬಾರಿಸಿ ನೂರ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು.
ಇನ್ನು ಅಕ್ಷರ್ ಪಟೇಲ್‌ಗೆ ಉತ್ತಮ ಸಾಥ್ ನೀಡಿದ ನಾಯಕ ರಿಷಭ್ ಪಂತ್, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 4ನೇ ಅರ್ಧಶತಕ ಚಚ್ಚಿದರು. ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ರಿಷಭ್ ಪಂತ್ ಕೇವಲ 43 ಎಸೆತಗಳನ್ನು ಎದುರಿಸಿ ಅಜೇಯ 88 ರನ್ ಸಿಡಿಸಿದರು. ಅವರ ಈ ಸೊಗಸಾದ ಇನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್‌ಗಳು ಸೇರಿದ್ದವು.
ಇನ್ನು ರಿಷಭ್ ಪಂತ್ ಜತೆಗೆ ಟ್ರಿಸ್ಟಿನ್ ಸ್ಟಬ್ಸ್ 5ನೇ ವಿಕೆಟ್‌ಗೆ ಕೇವಲ 18 ಎಸೆತಗಳಲ್ಲಿ ಮುರಿಯದ 67 ರನ್‌ಗಳ ಜತೆಯಾಟವಾಡಿದರು. ಸ್ಟಬ್ಸ್ ಕೇವಲ 7 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕರ್ ಸಹಿತ ಅಜೇಯ 26 ರನ್ ಬಾರಿಸಿದರು.