ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಅವಾಂತರ: ಬೀದಿಗೆ ಬಂದ ಬದುಕು
ರಾಜ್ಯದಲ್ಲಿ ಅಲ್ಲಲ್ಲಿ ಅಕಾಲಿಕವಾಗಿ ಮಳೆ ಸುರಿಯುತ್ತಿರೋ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲೂ ಕೆಲವಡೆ ಗುಡುಗು ಮಿಂಚು ಸಹಿತ ರಭಸದ ಗಾಳಿಯೊಂದಿಗೆ ಬಿರುಸಿನ ಮಳೆಯಾಗಿದೆ.
ವರದಿ: ಮಲ್ಲಿಕಾರ್ಜುನ ಹೊಸಮನಿ ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ಮೇ.05): ರಾಜ್ಯದಲ್ಲಿ (Karnataka) ಅಲ್ಲಲ್ಲಿ ಅಕಾಲಿಕವಾಗಿ ಮಳೆ (Rain) ಸುರಿಯುತ್ತಿರೋ ಹಿನ್ನೆಲೆಯಲ್ಲಿ ಬಾಗಲಕೋಟೆ (Bagalkote) ಜಿಲ್ಲೆಯಲ್ಲೂ ಕೆಲವಡೆ ಗುಡುಗು ಮಿಂಚು ಸಹಿತ ರಭಸದ ಗಾಳಿಯೊಂದಿಗೆ ಬಿರುಸಿನ ಮಳೆಯಾಗಿದ್ದು, ಇದರಿಂದ ಹಲವು ಮನೆಗಳ ಪತ್ರಾಸ ಹಾರಿ ಹೋಗಿದ್ದರೆ ಇನ್ನೊಂದೆಡೆ ಬಹುತೇಕ ಹೊಲ-ಗದ್ದೆಗಳಲ್ಲಿನ ಬೆಳೆಗಳೆಲ್ಲಾ ಹಾನಿಯಾಗಿದೆ. ಮೊದಲೇ ತೀವ್ರ ಸಂಕಷ್ಟ ಎದುರಿಸುತ್ತಿದ್ದ ಜನರೆಲ್ಲಾ ಇದೀಗ ಮತ್ತೇ ಮಳೆ ಅವಾಂತರದಿಂದ ಕಂಗೆಡುವಂತಾಗಿದೆ.
ಜೋರಾದ ಮಳೆ ಗಾಳಿಗೆ ಹಾರಿ ಹೋದ ಮೇಲ್ಚಾವಣಿ ತಗಡುಗಳು: ಹೌದು! ಬುಧವಾರ ಬಾಗಲಕೋಟೆ ಜಿಲ್ಲೆಯಲ್ಲಿ ಬಿರುಸಿನ ಮಳೆ ಸುರಿದ ಪರಿಣಾಮ ಮಳೆ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದಲ್ಲಿ ಬಹುತೇಕ ಮನೆಗಳು ಹಾನಿ ಅನುಭವಿಸುವಂತಾಗಿದೆ. ರಾತ್ರಿ ಜೋರಾದ ಗಾಳಿ ಬೀಸಿದ್ದರಿಂದ ಬಹುತೇಕ ಮನೆಗಳ ಮೇಲ್ಚಾವಣಿಗೆ ಹಾಕಿದ್ದ ತಗಡುಗಳು ಹಾರಿ ಹೋಗಿವೆ. ಇದರಿಂದ ಗ್ರಾಮದಲ್ಲಿರುವ 60 ಮನೆಗಳ ಪೈಕಿ 32 ಮನೆಗಳು ಹಾನಿ ಅನುಭವಿಸುವಂತಾಗಿದೆ. ಈ ಮಧ್ಯೆ ಬಿರುಸಿನ ಗಾಳಿ ಮಳೆ ಸುರಿಯುತ್ತಲೇ ಮನೆಯಲ್ಲಿದ್ದವರೆಲ್ಲಾ ಆತಂಕದ ಪರಿಸ್ಥಿತಿ ಎದುರಿಸುವಂತಾಯಿತು. ಇನ್ನು ಮಕ್ಕಳು, ವಯೋವೃದ್ದರಾದಿಯಾಗಿ ಎಲ್ಲರೂ ಸಂಕಷ್ಟ ಎದುರಿಸಬೇಕಾಯಿತು. ಮನೆಯ ಮೇಲ್ಚಾವಣಿಯಲ್ಲಿದ್ದ ಪತ್ರಾಸಗಳು ಹಾರಿ ಹೋಗಿದ್ದರಿಂದ ಜನರ ಬದುಕು ಬೀದಿಗೆ ಬಂದು ನಿಂತಿತ್ತು. ಮನೆಯ ಹೊರಗಡೆಗೆ ಮಹಿಳೆಯರು ಅಡುಗೆ ಮಾಡಿ ಊಟ ಮಾಡುತ್ತಿದ್ದ ದೃಶ್ಯ ಮಳೆ ಅವಾಂತರಕ್ಕೆ ಸಾಕ್ಷಿಯಾಗಿತ್ತು.
Chikkamagaluru ಕಾರಿಗೆ ಅಪ್ಪಳಿಸಿದ ವಿದ್ಯುತ್ ಕಂಬ, ಕೂದಳೆಲೆ ಅಂತರದಲ್ಲಿ ಪ್ರಯಾಣಿಕರು ಪಾರು
ರಭಸದ ಬಿರುಗಾಳಿಗೆ ನೆಲಕಚ್ಚಿದ ಬಾಳೆಗಿಡಗಳು & ಮಾವು: ಬಿರುಗಾಳಿ ಸಹಿತ ಗುಡುಗು ಮಿಂಚಿನ ಮಳೆ ಕೇವಲ ಊರಲ್ಲಿರುವ ಮನೆಗಳಿಗೆ ಮಾತ್ರ ಹಾನಿ ಮಾಡಲಿಲ್ಲ, ಬದಲಾಗಿ ಹೊಲದಲ್ಲಿ ರೈತರು ಬೆಳೆದಿದ್ದ ಬೆಳೆಗಳಿಗೂ ಇನ್ನಿಲ್ಲದ ಹಾನಿ ಉಂಟು ಮಾಡಿತ್ತು. ರೈತರು ಕಷ್ಟಪಟ್ಟು ದುಡಿದು ಹೊಲದಲ್ಲಿ ಬಾಳೆ ಬೆಳೆಯನ್ನ ಬೆಳೆದಿದ್ದರು. ಇನ್ನೇನು ಫಸಲು ಸಹ ಅವರಿಗೆ ತಲುಪಲಿತ್ತು, ಆದರೆ ಬಿರುಸಿನ ಗಾಳಿ ಸಹಿತ ಮಳೆ ರೈತರನ್ನ ಸಂಕಷ್ಟಕ್ಕೀಡಾಗುವಂತೆ ಮಾಡಿತ್ತು. ಯಾಕಂದರೆ ಹೊಲದಲ್ಲಿ ಬೆಳೆದಿದ್ದ ಬಾಳೆ ಬೆಳೆಗಳೆಲ್ಲಾ ನೆಲಕಚ್ಚಿ ಹೋಗಿತ್ತು. ಬೆಳೆಗಳಿಗೆಲ್ಲಾ ಕೊಡಲಿ ಪೆಟ್ಟು ಹಾಕಿದಂತಾಗಿತ್ತು. ಇನ್ನು ಬಾಳೆ ಬೆಳೆ ಜೊತೆಗೆ ಮಾವಿಗೂ ಸಹ ತೊಂದರೆಯುಂಟಾಗಿತ್ತು. ಇದರಿಂದ ಕೊರ್ತಿ ಗ್ರಾಮದ ಸುತ್ತಮುತ್ತ ರೈತರು ತಮ್ಮ ಹೊಲದಲ್ಲಿನ ಬೆಳೆಯನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದರು. ಅಲ್ಲದೆ ಈ ಪರಿಸ್ಥಿತಿ ಆದಂತಹ ಸಂದರ್ಭದಲ್ಲಿ ರೈತರು ಬದುಕುವುದಾದರೂ ಹೇಗೆ? ಹೀಗಾಗಿ ಸರ್ಕಾರ ನಮ್ಮತ್ತ ಕಣ್ತೆರೆದ ನೋಡಿ ಪರಿಹಾರ ನೀಡುವಂತಾಗಲಿ ಅಂತ ರೈತರು ಮನವಿ ಮಾಡಿಕೊಂಡಿದ್ದಾರೆ.
ಮತ್ತೇ ಬದುಕು ಕಟ್ಟಿಕೊಳ್ಳಲು ಮುಂದಾದ ಮಳೆ ಅವಾಂತರದಿಂದ ಅತಂತ್ರವಾಗಿದ್ದ ಜನ: ತಡರಾತ್ರಿ ಸುರಿದ ಮಳೆಯಿಂದಾಗಿ ಇಡೀ ಗ್ರಾಮದಲ್ಲಿ ಬಹುತೇಕ ಮನೆಗಳು ಹಾನಿಯನ್ನ ಅನುಭವಿಸಿದ್ದವು, ಅದರಲ್ಲೂ ಮುಖ್ಯವಾಗಿ ಪತ್ರಾಸ ಅಂದರೆ ತಗಡುಗಳನ್ನ ಹಾಕಿದ ಮನೆಗಳ ಮೇಲ್ಚಾವಣಿ ಹಾರಿ ಹೋಗಿ ಜನರು ಬೀದಿಗೆ ಬಂದು ನಿಲ್ಲುವಂತಾಗಿತ್ತು. ಮನೆಯ ಎದುರಿಗೆ ಬಿದ್ದು ಹೋದ ತಗಡುಗಳ ಮಧ್ಯೆ ತಾಯಂದಿರು ತಮ್ಮ ಮಕ್ಕಳ ಸಹಿತ ಅಡುಗೆ ಮಾಡಿ ಊಟ ಮಾಡುತ್ತಿದ್ದ ದೃಶ್ಯ ಮನ ಕರಗುವಂತೆ ಮಾಡಿತ್ತು. ಇನ್ನು ಪ್ರತಿಯೊಂದು ದಿನ ದುಡಿದು ಬಂದು ಮನೆ ಸಾಗಿಸುತ್ತಿದ್ದವರೆಲ್ಲಾ ಇಂದು ಕೂಲಿ ಕೆಲಸಕ್ಕೆ ಹೋಗೋದನ್ನೂ ಸಹಿತ ಬಿಟ್ಟು ತಮ್ಮ ಮನೆಯ ಮೇಲ್ಚಾವಣಿಯ ತಗಡುಗಳನ್ನ ಸರಿಪಡಿಸಿಕೊಳ್ಳುವುದರಲ್ಲಿಯೇ ಬ್ಯೂಸಿಯಾಗಿದ್ದರು. ಒಟ್ಟಿನಲ್ಲಿ ರಭಸದ ಮಳೆಯಿಂದಾಗಿ ಆಗಿದ್ದ ಹಾನಿ ಕಂಡು ಜನರೆಲ್ಲಾ ಆತಂಕಕ್ಕೀಡಾಗಿದ್ದರು.
ಹುಬ್ಬಳ್ಳಿಯಲ್ಲಿ ಅಬ್ಬರಿಸಿದ ವರುಣ: ಓರ್ವ ಸಾವು, ಧರೆಗುರುಳಿದ ಮರಗಳು..!
ಸ್ಥಳಕ್ಕೆ ಧಾವಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ಸರ್ವೆ ಕಾರ್ಯ ಶುರು: ಇನ್ನು ತಡರಾತ್ರಿ ಸುರಿದ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಪರಿಶೀಲನೆ ನಡೆಸಲು ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಗ್ರಾಮ ಪಂಚಾಯಿತಿಯ ಪಿಡಿಓ ಲಕ್ಷ್ಮಣ ಪಾಟೀಲ ಮತ್ತು ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಕುಮಾರ್ ಸೇರಿದಂತೆ ಸಿಬ್ಬಂದಿ ಆಗಮಿಸಿ ಆಗಿದ್ದ ಮಳೆಹಾನಿಯ ಬಗ್ಗೆ ವರದಿ ತಯಾರಿಸಲು ಮುಂದಾದರು. ಅಲ್ಲದೆ ಮುಂದಿನ ದಿನಗಳಲ್ಲಿ ಶೀಘ್ರವಾಗಿ ಪರಿಹಾರ ನೀಡುವ ಭರವಸೆಯನ್ನು ಜನರಿಗೆ ನೀಡಿದರು. ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಹಲವೆಡೆ ಮಳೆ ಸುರಿದಿದ್ದು, ಇವುಗಳ ಮಧ್ಯೆ ಕೊರ್ತಿ ಗ್ರಾಮ ಹೆಚ್ಚಿನ ಹಾನಿ ಅನುಭವಿಸುವಂತಾಗಿತ್ತು. ಇಷ್ಟಕ್ಕೂ ಹಾನಿಗೊಂಡ ಮನೆಗಳಿಗೆ ಮತ್ತು ಬೆಳೆಗಳಿಗೆ ಸರ್ಕಾರ ಪರಿಹಾರ ನೀಡುತ್ತಾ ಅಂತ ಕಾದು ನೋಡಬೇಕಿದೆ.