ಹಾವನೂರಿನ ಚಿಕ್ಕ ಮೈಲಾರದಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ, 'ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೊಟ್ಟಿತ್ತಲೇ ಪರಾಕ್' ಎಂದು ಗೊರವಪ್ಪ ಭವಿಷ್ಯ ನುಡಿದಿದ್ದಾರೆ. ಈ ವರ್ಷ ರೈತರಿಗೆ ಉತ್ತಮ ಲಾಭವಾಗಲಿದ್ದು, ರಾಜಕೀಯದಲ್ಲಿ ಕಷ್ಟಪಟ್ಟವರಿಗೆ ಅಧಿಕಾರ ಸಿಗಲಿದೆ ಎಂದು ಈ ಕಾರ್ಣಿಕವನ್ನು ವಿಶ್ಲೇಷಿಸಲಾಗಿದೆ.

ಹಾವೇರಿ: ''ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೊಟ್ಟಿತ್ತಲೇ ಪರಾಕ್'''' ಇದು ಇಲ್ಲಿನ ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ಮಂಗಳವಾರ ಸಂಜೆ ಹೇಳಿದರು.

Add Asianetnews Kannada as a Preferred SourcegooglePreferred

360 ವರ್ಷಗಳ ಇತಿಹಾಸದ ಹಾವನೂರ ಗ್ರಾಮದಲ್ಲಿನ ಚಿಕ್ಕಮೈಲಾರದ ಕಾರ್ಣಿಕೋತ್ಸವವು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಡೆಂಕನ ಮರಡಿಯಲ್ಲಿ ನುಡಿಯುವ ಕಾರ್ಣಿಕ ದಿನದ ಹಿಂದಿನ ದಿನ ಇಲ್ಲಿ ಕಾರ್ಣಿಕವನ್ನು ಹೇಳುತ್ತಾ ಬರಲಾಗಿದೆ.

ಒಂದೇ ವಾಕ್ಯದ ವರ್ಷ ಭವಿಷ್ಯ

ಮಂಗಳವಾರ ಸಂಜೆ ಸಾಂಪ್ರದಾಯಿಕ ಪೂಜೆಗಳ ನಂತರ ಮೈಲಾರಲಿಂಗೇಶ್ವರನನ್ನು ಮೆರವಣಿಗೆಯಲ್ಲಿ ತರಲಾಯಿತು. ನಂತರ ಚಿಕ್ಕ ಮೈಲಾರದಿಂದ ಗಂಗಮಾಳವ್ವ ಮೂರ್ತಿಗಳ ಆಗಮನದ ನಂತರ ಗೊರವಪ್ಪನು 15-20 ಅಡಿ ಎತ್ತರದ ಬಿಲ್ಲನ್ನು ಏರಿ ವರ್ಷ ಭವಿಷ್ಯ ಎಂದೇ ಅರ್ಥೈಸಲಾಗುವ ಕಾರ್ಣಿಕದ ನುಡಿಯನ್ನು ಹೇಳಲು ಬಿಲ್ಲನೇರಿ ಸದ್ದಲೇ ಎನ್ನುತ್ತಲೇ ವೀಕ್ಷಿಸಲು ಆಗಮಿಸಿದ್ದ ಸಾವಿರಾರು ಭಕ್ತರು ಮೌನವಾದರು. ನಂತರ ಒಂದೇ ವಾಕ್ಯದ ವರ್ಷ ಭವಿಷ್ಯವನ್ನು ಹೇಳಿ ಮೇಲಿಂದ ಗೊರವಪ್ಪ ಆನಂದ ಬಿಲ್ಲರ ಪೂರ್ವ ದಿಕ್ಕಿನ ಕಡೆ ತಲೆ ಮಾಡಿ ಬಿದ್ದಿದ್ದರಿಂದ ಆ ಭಾಗದಲ್ಲಿ ಉತ್ತಮ ಮಳೆ ಬೆಳೆ ಆಗುವುದೆಂಬ ನಂಬಿಕೆ ಭಕ್ತರದ್ದು.

ಕಷ್ಟ ಪಟ್ಟು ಕೆಲಸ ಮಾಡಿದವರಿಗೆ ಉನ್ನತ ಹುದ್ದೆಗಳು

ಈ ಬಾರಿಯ ಭವಿಷ್ಯವು ಅನೇಕ ರೀತಿಯಲ್ಲಿ ಅರ್ಥೈಸಲಾಗಿದ್ದು ಪ್ರಸ್ತಕ ವರ್ಷ ರೈತರಿಗೆ ಈ ಕಾರ್ಣಿಕ ಹೆಚ್ಚು ಮಹತ್ವ ನೀಡಿದ್ದು, ರೈತ ಸಮೂಹಕ್ಕೆ ಈ ವರ್ಷ ಉತ್ತಮವಾಗಿದೆ. ಜಮೀನಿನಲ್ಲಿ ಬಿತ್ತಿ ಬೆಳೆದ ರೈತನಿಗೆ ಲಾಭವಾಗಲಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿ ಆಗುವುದು. ಗೊರವಪ್ಪ ಕಾರ್ಣಿಕದ ನುಡಿಯನ್ನು ರಾಜಕೀಯವಾಗಿ ಅರ್ಥೈಸುವ ಜನರು, ರಾಜಕೀಯ ಪಕ್ಷದಲ್ಲಿ ಕಷ್ಟಪಟ್ಟು ದುಡಿದ ವ್ಯಕ್ತಿಗೆ ಈ ವರ್ಷ ಅಧಿಕಾರ ದೊರೆಯುವುದೆಂದು, ಪಕ್ಷಗಳಲ್ಲಿ ಕಷ್ಟ ಪಟ್ಟು ಕೆಲಸ ಮಾಡಿದವರಿಗೆ ಉನ್ನತ ಹುದ್ದೆಗಳು ಲಭಿಸುವುದೆಂದು, ಕಷ್ಟಪಟ್ಟವರಿಗೆ ಒಂದಲ್ಲ ಒಂದು ದಿನ ಅಧಿಕಾರ ದೊರೆಯುತ್ತದೆ ಎಂಬುದು ಈ ವರ್ಷ ಸತ್ಯವಾಗಲಿದೆ ಎಂದು ಅನೇಕರು ವಿಶ್ಲೇಷಿಸಿದರು.

ಇದನ್ನೂ ಓದಿ: 4 ರಾಶಿಯವರ ಮಾತಿನ ಮೇಲೆ ನಿಗಾ ಇರಲಿ: ಇಂದು ಮಧ್ಯಾಹ್ನ 12:35ರಿಂದ ಅತಿಗಂಡ ಯೋಗ ಆರಂಭ

ಈ ಸಂದರ್ಭದಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಕೃಷ್ಣಭಟ್ ಪೂಜಾರ, ವಿಲಾಸ ಜೋಗ, ದತ್ತಾತ್ರೇಯ ಭಂಗಿ, ರಮೇಶ ಬಾಳಿಕಾಯಿ, ನಾರಾಯಣಪ್ಪ ಕಮ್ಮಾರ, ಪರಮೇಶಪ್ಪ ಇಟಗಿ, ಶಾಂತಪ್ಪ ಗೊಣ್ಣಿ, ಸುಭಾಸ ಮೈಲಾರ, ಗ್ರಾ.ಪಂ. ಮಾಜಿ ಸದಸ್ಯರಾದ ಮಾಲತೇಶ ಉದಗಟ್ಟಿ, ಗೋಪಾಲ ಗೊಣ್ಣಿ, ಸುನೀಲ ಕೆಂಗನಿಂಗಪ್ಪನವರ, ಜಯಪ್ಪ ಪೂಜಾರ, ಹಾವನೂರ ಸೇರಿದಂತೆ ಗುತ್ತಲ, ಹರಳಹಳ್ಳಿ, ಹುರುಳಿಹಾಳ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು.

ಇದನ್ನೂ ಓದಿ: ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್: ಮೈಲಾರದ ಗೊರವಯ್ಯ ಕಾರ್ಣಿಕ