ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರು ಬೈಕ್ ರ್‍ಯಾಲಿಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕಾಗಿ ಸಂಚಾರಿ ಪೊಲೀಸರು ₹500 ದಂಡ ವಿಧಿಸಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡ ಶಾಸಕರು, ದಂಡ ಪಾವತಿಸಿ, 'ಶಾಸಕ ಸೇವಕನೇ ಹೊರತು ರಾಜನಲ್ಲ' ಎಂದು ಹೇಳುವ ಮೂಲಕ ಪೊಲೀಸರ ಕರ್ತವ್ಯವನ್ನು ಶ್ಲಾಘಿಸಿದ್ದಾರೆ.
ಹಾವೇರಿ: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಸಂಚಾರಿ ಪೊಲೀಸರು ₹500 ದಂಡ ವಿಧಿಸಿದ್ದಾರೆ. ಆ.25ರಂದು ಬೈಕ್ ರ್‍ಯಾಲಿಯೊಂದರಲ್ಲಿ ಶಾಸಕ ಕೋಳಿವಾಡ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಶಾಸಕರಿಗೆ ₹500 ದಂಡದ ನೋಟಿಸ್
ಇದು ಸಂಚಾರ ಪೊಲೀಸರ ಗಮನಕ್ಕೆ ಬಂದಿದ್ದು, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ₹500 ದಂಡದ ನೋಟಿಸ್ ಜಾರಿಗೊಳಿಸಿದ್ದರು. ಅಲ್ಲದೆ ನೋಟಿಸ್ ಶಾಸಕರ ಮನೆ ಬಾಗಿಲಿಗೆ ತಲುಪಿದ್ದು, ಬಳಿಕ ಅವರು ದಂಡದ ಮೊತ್ತ ಪಾವತಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಳಿವಾಡ, ‘ತಪ್ಪು ಒಪ್ಪಿಕೊಂಡು ದಂಡ ಪಾವತಿಸಿದ್ದೇನೆ. ಶಾಸಕ ಸೇವಕನೇ ಹೊರತು ರಾಜನಲ್ಲ. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರನ್ನು ಗೌರವಿಸುತ್ತೇನೆ’ ಎಂದಿದ್ದಾರೆ.
ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದು ತಪ್ಪು
ನೋಟಿಸ್ ನೀಡಿರುವ ವಿಚಾರವನ್ನು ಶಾಸಕ ಪ್ರಕಾಶ ಕೋಳಿವಾಡ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಸರ್ಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ನೀಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಬೈಕ್ ರ್‍ಯಾಲಿಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದು ತಪ್ಪು. ತಪ್ಪನ್ನು ಒಪ್ಪಿಕೊಂಡಿದ್ದೇನೆ. ದಂಡವನ್ನೂ ಪಾವತಿಸಿದ್ದೇನೆ. ಶಾಸಕ ಸೇವಕನೇ ಹೊರತು ರಾಜನಲ್ಲ. ಪೊಲೀಸರು ನೋಟಿಸ್ ನೀಡಿದ್ದಾರೆ. ಅವರು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅವರನ್ನು ಗೌರವಿಸುತ್ತೇನೆ’ ಎಂದು ಶಾಸಕರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗೂ ನಿಯಮಾನುಸಾರ ದಂಡ ವಿಧಿಸಿರುವ ಪೊಲೀಸರ ಕ್ರಮ ಇದೀಗ ಗಮನ ಸೆಳೆದಿದೆ.
ಇದನ್ನೂ ಓದಿ: ಐತಿಹಾಸಿಕ ಆಂಜನೇಯ ದೇವಾಲಯದೊಳಗೆ ಮೂತ್ರ ವಿಸರ್ಜನೆ ಮಾಡಿದ ಮಹಮದ್ ಜಾಫರ್!


