ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಮನುಷ್ಯನಾಳದ ಗುಂಡಿಯ ವಿಡಿಯೋ ವೈರಲ್ ಆಗಿತ್ತು. ಎಚ್ಚೆತ್ತ ಅಧಿಕಾರಿಗಳು ಡಾಂಬರು ಹಾಕುವ ಬದಲು ಕೇವಲ ಮಣ್ಣು ಮತ್ತು ಕಲ್ಲು ತುಂಬಿ ತಾತ್ಕಾಲಿಕ ಪರಿಹಾರ ಮಾಡಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ತಾರತಮ್ಯವನ್ನು ಎತ್ತಿತೋರಿಸುತ್ತದೆ.

ಬೆಂಗಳೂರು (ಅ.6): ಟ್ರಾಫಿಕ್‌ ಫೈನ್‌ ತುಂಬಾ ಬಾಕಿ ಇದೆ ಅಂದ್ರೆ ಸಾಕು ಪೋರ್ಟಬಲ್‌ POS ಹಿಡ್ಕೊಂಡು ರಸ್ತೆ ಬದಿಯಲ್ಲಿ ಟ್ರಾಫಿಕ್‌ ಪೊಲೀಸರು ನಿಂತು ಬಿಡುತ್ತಾರೆ. ಅದೇ, ವಾಹನ ಸವಾರ ತಾನು ರೈಡ್‌ ಮಾಡುವ ರಸ್ತೆಯಲ್ಲಿ ಬರೀ ಹೊಂಡಗಳೇ ತುಂಬಿದೆ ಎಂದು ಪಾಲಿಕೆಗಾಗಲಿ, ಟ್ರಾಫಿಕ್‌ ಪೊಲೀಸರಿಗೆ ಹೇಳಿದಲ್ಲಿ ಇಂಥಾ ತಾತ್ಸಾರ. ಜನರ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾದ ಅಧಿಕಾರಿಗಳು ದಪ್ಪ ಚರ್ಮದವರಾಗಿದ್ದರೆ ಇನ್ನೆಂಥಾ ಅವಾಂತರಗಳನ್ನು ಮಾಡುತ್ತಾರೆ ಅನ್ನೋದಕ್ಕೆ ಈ ಮೇಲಿನ ಫೋಟೋಗಳೇ ಸಾಕ್ಷಿ.

ಇಂದು ಸೋಶಿಯಲ್‌ ಮೀಡಿಯಾದಲ್ಲಿ ಬೆಂಗಳೂರಿನ ಗುಂಡಿಯ ಒಂದು ವಿಡಿಯೋ ಸಖತ್‌ ವೈರಲ್‌ ಆಗಿತ್ತು. ಪಬ್ಲಿಕ್‌ ಟಿವಿಯ ರಿಪೋರ್ಟರ್‌ವೊಬ್ಬ ಬಂಗಳೂರಿನ ಗುಂಡೊಗಳು ಅದ್ಯಾಔ ಮಟ್ಟದಲ್ಲಿ ಬಾಯ್ತೆರದು ಕೊಂಡಿದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂಥ ವಿಡಿಯೋ ಮಾಡಿದ್ದ. ಬೆಂಗಳೂರಿನ ಕಂಠೀರವ ಸ್ಟುಡಿಯೋದ ಮುಖ್ಯ ರಸ್ತೆ ಅಂದರೆ ಔಟರ್‌ ರಿಂಗ್‌ರೋಡ್‌ನಲ್ಲಿ ಮನುಷ್ಯನಷ್ಟು ಎತ್ತರದ ಗುಂಡಿ ಬಿದ್ದಿದೆ ಅನ್ನೋದನ್ನು ತೋರಿಸಲು ಸಲುವಾಗಿ ಗುಂಡಿಯಲ್ಲೇ ನಿಂತು ಮಾತನಾಡಿದ್ದ,. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು. ಇಲ್ಲಿಯವರೆಗೂ ಬೆಂಗಳೂರಿನಲ್ಲಿ ಗುಂಡಿಗಳು ಮೀಟರ್‌ನ ಲೆಕ್ಕಾಚಾರದಲ್ಲಿ ಇರುತ್ತಿದ್ದವು. ಆದರೆ, ಮನುಷ್ಯನಷ್ಟು ಎತ್ತರದ ಗುಂಡಿ ಬಿದ್ದಿರುವುದು ವೈರಲ್‌ ಆಗಿರುವುದು ಇದೇ ಮೊದಲು.

ನಿರೀಕ್ಷೆಯಂತೆಯೇ ಈ ವಿಡಿಯೋ ವೈರಲ್‌ ಆಗಲು ಹೆಚ್ಚಿನ ಸಮಯವಾಗಲಿಲ್ಲ. ದೇಶದಲ್ಲಿ ಪ್ರತಿ ವಸ್ತುವಿಗೂ ಟ್ಯಾಕ್ಸ್‌ ಹಾಕಿದ್ರೂ ಜನಸಾಮಾನ್ಯರಿಗೆ ಕಲ್ಪಿಸುವ ವ್ಯವಸ್ಥೆಗಳು ಒಂಚೂರು ಇಲ್ಲ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು. ಯಾವಾಗ ಸೋಶಿಯಲ್‌ ಮೀಡಿಯಾದಲ್ಲಿ ತಾವು ವೈರಲ್‌ ಆಗುತ್ತಿರುವುದು ಗೊತ್ತಾಯಿತೋ ಜಿಬಿಎ ಅಧಿಕಾರಿಗಳು ಹಾಗೂ ಟ್ರಾಫಿಕ್‌ ಪೊಲೀಸರು ಮನುಷ್ಯನಾಳದ ಗುಂಡಿಯ ಬಳಿ ಬಂದು ಪರಿಶೀಲಿಸಲು ಆರಂಭಿಸಿದರು. ಇಡೀ ಗುಂಡಿಯನ್ನು ಕಂಡು ಇದು ಹಾಗೇ ಬಿಟ್ಟರೆ ಅಪಾಯ ಎಂದುಕೊಂಡು ಸುಲಭ ಉಪಾಯ ಮಾಡಿದರು.

ಜಿಬಿಎಗೆ 10 ಕೆಜಿ ಡಾಂಬಾರಿಗೂ ಬರ ಬಂತಾ?

ಅಪಾಯಕಾರಿ ಗುಂಡಿ ಅನ್ನೋದು ಗೊತ್ತಾದ ಬಳಿಕವಾದರೂ, ಅದಕ್ಕೆ ಒಂದಷ್ಟು ಜಲ್ಲಿಕಲ್ಲು ತುಂಬಿ, ಒಂದಷ್ಟು ಡಾಂಬಾರು ಹಾಕಿ ರೋಲ್‌ ಮಾಡಿದ್ರೆ ಎಲ್ಲವೂ ಬಗೆಹರಿದು ಹೋಗಿತ್ತಿತ್ತು. ಅದರ ಬದಲು ಈ ಮಹಾನ್‌ ಅಧಿಕಾರಿಗಳು ಅಕ್ಕಪಕ್ಕದಲ್ಲೇ ಇದ್ದ ಕಲ್ಲನ್ನು ತುಂಬಿ ಒಂದಷ್ಟು ಮಣ್ಣು ಹಾಕಿ ಗುಂಡಿ ಮುಚ್ಚಿ ಕೈತೊಳೆದುಕೊಂಡಿದ್ದಾರೆ. ಈಗ ಅದೇ ಮಣ್ಣು ತುಂಬಿರುವ ಗುಂಡಿಯ ಮೇಲೆ ವಾಹನ ಸಂಚಾರ ಮಾಡುತ್ತಿವೆ. ಸಂಜೆಯ ಮೇಲೆ ಒಂದು ಚಿಕ್ಕ ಮಳೆ ಬಂದರೂ, ಈಗ ಇರೋದಕ್ಕಿಂತ ದೊಡ್ಡ ಅನಾಹುತವಾಗುತ್ತದೆ ಅನ್ನೋದಕ್ಕೆ ಮತ್ತೆ ಯಾವುದೇ ಸಾಕ್ಷಿ ಕೂಡ ಬೇಕಾಗಿಲ್ಲ.

ಸಮಸ್ಯೆಯನ್ನು ಪರಿಹಾರ ಮಾಡೋದಕ್ಕಿಂತ ಸಮಸ್ಯೆಯನ್ನೇ ಸಮಾಧಿ ಮಾಡಲು ಅಧಿಕಾರಿಗಳು ಮುಂದಾದರೆ ಮಾತ್ರವೇ ಇಂಥ ಕೆಲಸಗಳು ಆಗುತ್ತವೆ. ಇದೇ ಗುಂಡಿ ಸಿಎಂ ಮನೆಯ ಮುಂದೆ ಬಿದ್ದಿದ್ದರೆ ಅಥವಾ ಜಿಬಿಎ ಕಮೀಷನರ್‌ ಹೋಗಲಿ ಸಾಮಾನ್ಯ ಕಾರ್ಪೋರೇಟರ್‌ ಮನೆ ಮುಂದೆ ಬಿದ್ದಿದ್ದರೂ ಕ್ಷಣಾರ್ಧದಲ್ಲಿ ಅದನ್ನು ಮುಚ್ಚಿಬಿಡುತ್ತಿದ್ದ ಪಾಲಿಕೆಯ ಅಧಿಕಾರಿಗಳು, ಇದು ಸಾಮಾನ್ಯ ಜನ ತಿರುಗಾಡುವ ರಸ್ತೆ ಎಂದಾದಾಗ ಮಣ್ಣು ಮುಚ್ಚಿ ಸಮಾಧಿ ಮಾಡಿದ್ದಾರೆ.

Scroll to load tweet…