- Home
- Karnataka Districts
- ಸರ್ಕಾರದ ₹5 ಕೋಟಿ ಕಳಪೆ ಕಾಮಗಾರಿ; ರಾಜಕಾಲುವೆ ಮುಂದೆ ಕಟ್ಟಿಕೊಂಡು ಹೋಗ್ತಿದ್ದರೆ, ಹಿಂದೆ ಬಿದ್ದುಕೊಂಡು ಬರ್ತಿದೆ!
ಸರ್ಕಾರದ ₹5 ಕೋಟಿ ಕಳಪೆ ಕಾಮಗಾರಿ; ರಾಜಕಾಲುವೆ ಮುಂದೆ ಕಟ್ಟಿಕೊಂಡು ಹೋಗ್ತಿದ್ದರೆ, ಹಿಂದೆ ಬಿದ್ದುಕೊಂಡು ಬರ್ತಿದೆ!
ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ರಾಜಕಾಲುವೆ, ಕಳಪೆ ಕಾಮಗಾರಿಯಿಂದಾಗಿ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಕುಸಿದು ಬಿದ್ದಿದೆ. ಈ ದುರಂತದಿಂದಾಗಿ ರೈತರ ನೂರಾರು ಅಡಿಕೆ ಮರಗಳು ನಾಶವಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ (ಆ.17): ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ನಡೆಯುವ ಕಮಿಷನ್ ಮತ್ತು ಕಳಪೆ ಕಾಮಗಾರಿಯ ಜಾಲಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಬರೋಬ್ಬರಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಕಾಂಕ್ರೀಟ್ ರಾಜಕಾಲುವೆ, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬುಡಮೇಲಾಗಿ ಮುಗುಚಿ ಬಿದ್ದಿದೆ! ಕಾಲುವೆ ಕಟ್ಟುತ್ತಾ ಮುಂದೆ ಸಾಗಿದಂತೆ, ಹಿಂದಿನಿಂದಲೇ ಕುಸಿಯುತ್ತಾ ಬರುತ್ತಿರುವ ಈ ಕಾಮಗಾರಿಯು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಕ್ರಮವನ್ನು ಬೆತ್ತಲು ಮಾಡಿದೆ.
ವಿಶೇಷವೆಂದರೆ, ಈ ಕಳಪೆ ಕಾಮಗಾರಿ ನಡೆದಿರುವುದು ಬೇರೆಲ್ಲೂ ಅಲ್ಲ, ಸಾಕ್ಷಾತ್ ಸಣ್ಣ ನೀರಾವರಿ ಇಲಾಖೆಯ ಕಚೇರಿಯ ಹಿಂಭಾಗದಲ್ಲೇ!
ಕಾಮಗಾರಿಯ ಹಿನ್ನೆಲೆ ಏನು?
ಹಾನಗಲ್ ಪಟ್ಟಣದ ಪ್ರಸಿದ್ಧ ಆನಿಕೆರೆ ಕೋಡಿ ಬಿದ್ದಾಗ ಆ ನೀರು ಮತ್ತೊಂದು ಕೆರೆಗೆ ಸರಾಗವಾಗಿ ಹರಿದು ಹೋಗಲು ಈ ಹಿಂದೆ ಕಚ್ಚಾ ಕಾಲುವೆ ಇತ್ತು. ಇದರಿಂದ ಮಳೆಗಾಲದಲ್ಲಿ ನೀರು ಪಕ್ಕದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗುತ್ತಿತ್ತು.
ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ₹5 ಕೋಟಿ ಅನುದಾನ ಮಂಜೂರು ಮಾಡಿತ್ತು.
ಒಟ್ಟು 1.3 ಕಿಲೋಮೀಟರ್ ಉದ್ದದ ಕಾಂಕ್ರೀಟ್ ರಾಜಕಾಲುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.
ಈ ಗುತ್ತಿಗೆಯನ್ನು ಸುಮಿತ್ ಹೆಗಡೆ ಎಂಬ ಗುತ್ತಿಗೆದಾರನಿಗೆ ವಹಿಸಲಾಗಿತ್ತು.
3 ತಿಂಗಳಲ್ಲೇ ಧರೆಗುರುಳಿದ ಕಾಲುವೆ - ಕಳಪೆ ಕಾಮಗಾರಿ ಬಯಲು:
ಕಾಮಗಾರಿ ಆರಂಭವಾಗಿ ಇನ್ನೂ ಕೇವಲ 3 ತಿಂಗಳಷ್ಟೇ ಕಳೆದಿವೆ. ಯೋಜನೆಯ 1.3 ಕಿ.ಮೀ ಪೈಕಿ ಸುಮಾರು 800 ಮೀಟರ್ ಕಾಲುವೆ ನಿರ್ಮಾಣ ಮುಗಿದಿತ್ತು. ಆದರೆ, ಇಲಾಖೆಯ ಕಣ್ಣೆದುರೇ ಕಳಪೆ ಗುಣಮಟ್ಟದ ಸಿಮೆಂಟ್, ಮರಳು ಹಾಗೂ ಕಳಪೆ ದರ್ಜೆಯ ಕಬ್ಬಿಣವನ್ನು ಬಳಸಿ ಕಾಲುವೆ ಕಟ್ಟಲಾಗಿದೆ. ಪರಿಣಾಮವಾಗಿ, ಕಾಮಗಾರಿ ಮುಕ್ತಾಯವಾಗುವ ಮೊದಲೇ ಬೃಹತ್ ಕಾಂಕ್ರೀಟ್ ಗೋಡೆಗಳು ರೈತರ ಜಮೀನಿನ ಕಡೆಗೆ ಮುರಿದು ಬಿದ್ದಿವೆ.
ಫಸಲಿಗೆ ಬಂದಿದ್ದ ಅಡಿಕೆ ಮರಗಳು ಬಲಿ – ಅನ್ನದಾತರ ಆಕ್ರೋಶ:
ರಾಜಕಾಲುವೆಯ ತಡೆಗೋಡೆಗಳು ದಿಢೀರನೆ ಕುಸಿದು ಬಿದ್ದ ಪರಿಣಾಮ, ಕಾಲುವೆ ಪಕ್ಕದಲ್ಲಿದ್ದ ಫಲವತ್ತಾದ ಕೃಷಿ ಭೂಮಿಗೆ ಭಾರಿ ಹಾನಿಯಾಗಿದೆ.
ರೈತರು ವರ್ಷಗಟ್ಟಲೆ ಕಷ್ಟಪಟ್ಟು ಬೆಳೆಸಿದ್ದ, ಫಸಲಿಗೆ ಬಂದಿದ್ದ ನೂರಾರು ಅಡಿಕೆ ಮರಗಳು ಮಣ್ಣುಪಾಲಾಗಿವೆ.
ಕಾಲುವೆ ನೀರು ಮತ್ತು ಕಾಂಕ್ರೀಟ್ ಅವಶೇಷಗಳು ತೋಟಗಳಿಗೆ ನುಗ್ಗಿ ರೈತರು ಕಂಗಾಲಾಗಿದ್ದಾರೆ.
ರೈತರ ಮತ್ತು ಸಾರ್ವಜನಿಕರ ಪ್ರಮುಖ ಬೇಡಿಕೆಗಳು:
ಗುತ್ತಿಗೆದಾರನನ್ನು ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಿ: ಕಳಪೆ ಕಾಮಗಾರಿ ನಡೆಸಿ ₹5 ಕೋಟಿ ಲೂಟಿ ಮಾಡಲು ಯತ್ನಿಸಿದ ಗುತ್ತಿಗೆದಾರ ಸುಮಿತ್ ಹೆಗಡೆಯನ್ನು ತಕ್ಷಣವೇ ಕಪ್ಪುಪಟ್ಟಿಗೆ (Blacklist) ಸೇರಿಸಬೇಕು.
ಅಧಿಕಾರಿಗಳ ಅಮಾನತು: ಕಚೇರಿಯ ಹಿಂಭಾಗದಲ್ಲೇ ಇಷ್ಟೊಂದು ಕಳಪೆ ಕಾಮಗಾರಿ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.
ಮರು ನಿರ್ಮಾಣ & ಪರಿಹಾರ: ಕಾಲುವೆಯನ್ನು ಗುಣಮಟ್ಟದೊಂದಿಗೆ ಮೊದಲಿನಿಂದ ಮರು ನಿರ್ಮಾಣ ಮಾಡಬೇಕು ಹಾಗೂ ಮರಗಳನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

